ಬಿಜೆಪಿ- ಜನಾ ರೆಡ್ಡಿ ಸಂಧಾನಪರ್ವ ಬಲುಜೋರು

ಏನಪಾ ಅಂದರೆ ಅತ್ತ ಚಂಚಲಗೂಡ ಜೈಲಿನಲ್ಲಿರುವ ಮಾಜಿ ಬಿಜೆಪಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಮತ್ತೆ ಬಿಜೆಪಿಗೆ ತರಿಸಿಕೊಳ್ಳುವುದೋ ಅಥವಾ ಅವರಾಗಿಯೇ ಬಿಜೆಪಿಗೆ ಬರಲು ಯತ್ನಿಸುತ್ತಿದ್ದಾರೋ ಅಂತೂ ಪರಸ್ಪರ ಮಾತುಕತೆ ನಡೆದಿದೆ ಎನ್ನಲಾಗಿದೆ.
ಮೊನ್ನೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ರಾಜನಾಥ್ ಸಿಂಗ್ ಅವರು ನೇಮಕವಾಗಿರುವ ಹಿನ್ನೆಲೆಯಲ್ಲಿ 'ರೆಡ್ಡಿ ಬಿಜೆಪಿಗೆ ಮರು ಸೇರ್ಪಡೆಯಾಗುತ್ತಾರೆ' ಎಂಬುದಕ್ಕೆ ಹೆಚ್ಚು ಬಲ ಬಂದಿದೆ. ಏಕೆಂದರೆ ಅತ್ತ ಯಡಿಯೂರಪ್ಪ ಬಿಜೆಪಿ ಬಿಟ್ಟು ಹೋಗಿರುವುದರ ಜತೆಗೆ ನಿತಿನ್ ಗಡ್ಕರಿ ಅವರೂ ಪಕ್ಷದ ಅಧ್ಯಕ್ಷ ಸ್ಥಾನ ಕಳೆದುಕೊಂಡಿರುವುದು ರೆಡ್ಡಿ ತಂಡಕ್ಕೆ ಅನುಕೂಲಕರವಾಗಿ ಪರಿಣಮಿಸಿದೆ ಎನ್ನಲಾಗಿದೆ.
ಇದೇ ವೇಳೆ ರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಅಂಥಾ ಭವಿಷ್ಯವಿಲ್ಲ ಎಂಬ ಭವಿಷ್ಯವಾಣಿಯೂ ರೆಡ್ಡಿ ಬಿಜೆಪಿಗೆ ಬರುತ್ತಿರುವುದಕ್ಕೆ ಹೇತುವಾಗಿದೆ ಎನ್ನಲಾಗಿದೆ.
ಮೊನ್ನೆ ರಾಜನಾಥ ಸಿಂಗ್ ಆಣತಿಯ ಮೇರೆಗೆ ಚಂಚಲಗೂಡ ಜೈಲಿಗೆ ಹೋಗಿಬಂದ ಸಚಿವ ಎಸ್‌ಕೆ ಬೆಳ್ಳುಬ್ಬಿ 'ರೆಡ್ಡಿ ಸಂದೇಶವನ್ನು ಹೊತ್ತು' ದಿಢೀರನೆ ದಿಲ್ಲಿಗೆ ತೆರಳಿರುವುದು ಈ ಪ್ರಯತ್ನದ ಒಂದು ಭಾಗ ಎಂದು ಅರ್ಥೈಸಲಾಗುತ್ತಿದೆ.
ರಾಜ್ಯದ ಬಿಜೆಪಿ ಸರ್ಕಾರ ಉರುಳಿಸಲು ಯತ್ನಿಸುತ್ತಿರುವ ಯಡಿಯೂರಪ್ಪಗೆ ಟಾಂಗ್ ಕೊಡಲು ಬಿಜೆಪಿ ನಡೆಸಿರುವ ಪ್ರತಿತಂತ್ರಗಳಲ್ಲಿ ರೆಡ್ಡಿ ಸಹೋದರರನ್ನು ಪಕ್ಷಕ್ಕೆ ವಾಪಸು ಕರೆತರುವುದೂ ಒಂದಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಈ ಮಧ್ಯೆ ರೆಡ್ಡಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿಯೂ, ರೆಡ್ಡಿ ತಮ್ಮೆದುರು ಇಟ್ಟಿರುವ ಬೇಡಿಕೆಗಳನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಗಮನಕ್ಕೂ ತಂದಿದ್ದಾಗಿ ಸಚಿವ ಬೆಳ್ಳುಬ್ಬಿ ಹೇಳಿರುವುದು ಕುತೂಹಲಕಾರಿಯಾಗಿದೆ.
ರೆಡ್ಡಿ ಸಹೋದರರೊಂದಿಗೆ ತನ್ಮೂಲಕ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರಕಾರ ಉಳಿಸಿಕೊಳ್ಳುವುದು ಬಿಜೆಪಿ ನಾಯಕರ ರಾಜಕೀಯ ಚಾಣಾಕ್ಷತೆಯಾಗಿದೆ ಎನ್ನಲಾಗಿದೆ.












Click it and Unblock the Notifications