ಬಿಎಸ್‌ವೈ ಬೆಂಬಲಿಗರ ಗದ್ದಲಕ್ಕೆ ಬೋಪಯ್ಯ ಉತ್ತರ

Bopaiah hits back at Yeddyurappa supporters
ಬೆಂಗಳೂರು, ಜ. 24 : ರಾಜೀನಾಮೆ ಸಲ್ಲಿಸಲು ವಿಧಾನಸೌಧಕ್ಕೆ ಆಗಮಿಸಿದ್ದ 13 ಶಾಸಕರು ಸ್ಪೀಕರ್ ಕೊಠಡಿಯಲ್ಲಿ ನಡೆದುಕೊಂಡ ರೀತಿ ನನಗೆ ತುಂಬಾ ನೋವು ತಂದಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿ ಗುರುವಾರ, ಜ.24ರಂದು ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ.

ಬಿಜೆಪಿ ಸರಕಾರವನ್ನು ಧಿಕ್ಕರಿಸಿ, ಕೆಜೆಪಿಯನ್ನು ಬೆಂಬಲಿಸಿ ಇಬ್ಬರು ಸಚಿವರು ಸೇರಿದಂತೆ 13 ಶಾಸಕರು ಬುಧವಾರ ಬೆಳಿಗ್ಗೆ ಕೆಜಿ ಬೋಪಯ್ಯ ಅವರ ಕಚೇರಿಗೆ ಆಗಮಿಸಿದ್ದರು. ಆ ಸಮಯದಲ್ಲಿ ಬೋಪಯ್ಯ ಆಗಲಿ, ಅವರ ಕೆಳಗಿನ ಅಧಿಕಾರಿಗಳಾಗಲಿ ಕಚೇರಿಯಲ್ಲಿ ಇಲ್ಲದ್ದರಿಂದ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ರಾಜೀನಾಮೆ ಪತ್ರ ಸಲ್ಲಿಸುವ ವಿಚಾರವನ್ನು ಬೋಪಯ್ಯ ಅವರಿಗೆ ಮೊದಲೇ ದೂರವಾಣಿ ಮುಖಾಂತರ ತಿಳಿಸಲಾಗಿತ್ತು. ಆದರೂ, ಬೇಕಂತಲೆ ಅವರು ಕಚೇರಿಗೆ ಅಂದು ಗೈರಾಗಿದ್ದಾರೆ, ಕೆಜೆಪಿಗೆ ಸೋಲಾಗಲೆಂದೇ ಅವರನ್ನು ಬಿಜೆಪಿ ಸರಕಾರವೇ ವಿದೇಶಕ್ಕೆ ರವಾನಿಸಿದೆ ಎಂದು ಶೋಭಾ ಕರಂದ್ಲಾಜೆ ಸೇರಿದಂತೆ ಯಡಿಯೂರಪ್ಪ ಬೆಂಬಲಿಗರು ಆರೋಪಿಸಿದ್ದರು.

ಬೋಪಯ್ಯ ಇಲ್ಲದಿದ್ದರೇನಂತೆ ಕಚೇರಿಯಲ್ಲಿದ್ದ ಕಾರ್ಯದರ್ಶಿ ಗಲಗಲಿ ಅವರೇ ರಾಜೀನಾಮೆ ಪತ್ರವನ್ನು ಸ್ವೀಕರಿಸಲಿ ಎಂದು ದುಂಬಾಲು ಬಿದ್ದಿದ್ದರು. ಪತ್ರ ಸ್ವೀಕರಿಸಲು ಅಧಿಕಾರವಿಲ್ಲದಿದ್ದರೆ ಕಾರಣ ಉಲ್ಲೇಘಿಸಿ ಬರವಣಿಗೆಯಲ್ಲಿ ನೀಡಲಿ, ನಾವು ಕೋರ್ಟಿನಲ್ಲಿ ನೋಡಿಕೊಳ್ಳುತ್ತೇವೆ ಎಂದು ಯಡಿಯೂರಪ್ಪ ಗದ್ಗಿತ ಧ್ವನಿಯಲ್ಲಿ ಗುಡುಗಿದ್ದರು. ನಂತರ ಯಡಿಯೂರಪ್ಪ ಪಟಾಲಂ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಪತ್ರಗಳ ಪ್ರತಿ ನೀಡಿತ್ತು.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಬೋಪಯ್ಯ ಅವರು, ನಾನು ಖಾಸಗಿ ಕಾರ್ಯದ ನಿಮಿತ್ತ ಬೆಂಗಳೂರಿನಲ್ಲಿ ಇರಲಿಲ್ಲ. ರಾಜೀನಾಮೆ ನೀಡುತ್ತಿರುವ ಬಗ್ಗೆ ಮೌಖಿಕವಾಗಿ ಹೇಳಲಾಗಿತ್ತಾದರೂ ಲಿಖಿತವಾಗಿ ಯಾವುದೇ ವಿಚಾರವನ್ನು ತಿಳಿಸಿರಲಿಲ್ಲ. ಅಲ್ಲದೆ, ಸಾಲುಸಾಲು ಸರಕಾರ ರಜೆಗಳು ಇದ್ದಿದ್ದರಿಂದ ನಾನು ಬೆಂಗಳೂರಿನಿಂದ ಆಚೆ ಹೋಗಬೇಕಾಯಿತು. ಆದರೆ, ಮಾಧ್ಯಮಗಳಲ್ಲಿ ಬಂದಿರುವ ವರದಿ ನನಗೆ ತುಂಬಾ ನೋವು ತಂದಿದೆ ಎಂದು ಅವರು ತಿಳಿಸಿದ್ದಾರೆ.

ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಸ್ಪೀಕರ್ ಕಚೇರಿಯಲ್ಲಿ ನಡೆದುಕೊಂಡ ರೀತಿ ಸ್ಪೀಕರ್ ಹುದ್ದೆಯ ಗೌರವಕ್ಕೆ ಚ್ಯುತಿ ತಂದಿದೆ. ಸ್ಪೀಕರ್ ಹುದ್ದೆಯ ಜವಾಬ್ದಾರಿಯನ್ನು ಮತ್ತು ಘನತೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ನನ್ನ ಮೇಲಿದೆ. ಅದಕ್ಕೆ ಚ್ಯುತಿ ತರುವಂತಹ ಕೆಲಸ ಯಾವತ್ತೂ ಮಾಡುವುದಿಲ್ಲ. ಇಂಥ ಸಂದರ್ಭವನ್ನು ರಾಜಕಾರಣಿಗಳು ಕೂಡ ತಮ್ಮ ಸ್ವಾರ್ಥಕ್ಕೆ, ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳಬಾರದು. ನಾನು ಜ.28ರಂದು ಸೋಮವಾರ ಬೆಂಗಳೂರಿಗೆ ಬರುತ್ತೇನೆ. ಬಂದ ನಂತರ, ರಾಜೀನಾಮೆ ಪತ್ರಗಳನ್ನು ಸ್ವೀಕರಿಸುತ್ತೇನೆ ಎಂದು ಸಮಜಾಯಿಷಿ ನೀಡಿದ್ದಾರೆ.

ಇಷ್ಟೆಲ್ಲ ಹೇಳಿಕೆಯನ್ನು ಸಭಾಧ್ಯಕ್ಷ ಕೆಜಿ ಬೋಪಯ್ಯ ನೀಡಿದ್ದಾರಾದರೂ, ತಾವು ಯಾವ ಸ್ಥಳದಲ್ಲಿದ್ದೆನೆಂದು ನಿಖರವಾಗಿ ತಿಳಿಸಿಲ್ಲ. ಅವರನ್ನು ಬಿಜೆಪಿ ಸರಕಾರದಲ್ಲಿರುವ ಪ್ರಭಾವಿ ರಾಜಕಾರಣಿಯೊಬ್ಬರು ಸ್ವತಃ ಕರೆದುಕೊಂಡು ಹೋಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಟ್ಟುಬಂದಿದ್ದರ ಬಗ್ಗೆ ನಮ್ಮಲ್ಲಿ ಸಾಕ್ಷಿಯಿದೆ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದರು. ಬೋಪಯ್ಯ ಅವರು ನೇಪಾಳಕ್ಕೆ ಹೋಗಿದ್ದಾರೆ ಎಂಬ ಸುದ್ದಿ ಕೂಡ ಗಾಳಿಯಲ್ಲಿ ತೇಲಾಡುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+