ಲಿಂಗಾಯತ ಮುಖ್ಯಮಂತ್ರಿ ಇಳಿಸಿದರೆ ಕೆಜೆಪಿ ನಾಶ

ಉತ್ತರ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬಜೆಟ್ ಮಂಡಿಸಲು ಅವಕಾಶ ಕೊಡದೆ ಕಾಟ ಕೊಡುತ್ತಿರುವ ಯಡಿಯೂರಪ್ಪ ಅವರಿಗೆ ಆ ಭಾಗದ ಮಂದಿಯೇ ಬುದ್ಧಿ ಕಲಿಸುತ್ತಾರೆ. ವಿನಾಕಾರಣ ಲಿಂಗಾಯತ ಮುಖ್ಯಮಂತ್ರಿಯನ್ನು ಕೆಳಗಿಳಿಸಿದರೆ ಕೆಜೆಪಿ ನಾಶ ಖಂಡಿತ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಸಂಸದ ರಾಘವೇಂದ್ರ ರಾಜೀನಾಮೆ ಕೊಡಲಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಬಿ.ವೈ ರಾಘವೇಂದ್ರ ಅವರು ಮೊದಲು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಈ ಬಗ್ಗೆ ಏಕೆ ಯಡಿಯೂರಪ್ಪ ಅವರು ಎಲ್ಲೂ ಏನು ಹೇಳಿಕೊಂಡಿಲ್ಲ. ರಾಘವೇಂದ್ರ ಅವರೇ ಇನ್ನೂ ಸಂಪೂರ್ಣವಾಗಿ ಬಿಜೆಪಿ ತೊರೆದು ಕೆಜೆಪಿ ಸೇರುತ್ತಿಲ್ಲ ಎನ್ನಬೇಕಾದರೆ ಉಳಿದವರನ್ನು ಪ್ರಶ್ನಿಸುವುದೇಕೆ? ಎಂದು ಶಾಸಕ ಬೇಳೂರು ಪ್ರಶ್ನಿಸಿದ್ದಾರೆ.
ಸಚಿವೆ ಶೋಭಾ ಅವರ ರಾಜೀನಾಮೆ ನಿರೀಕ್ಷಿತವಾಗಿತ್ತು. ಆದರೆ, ಹಿರಿಯ ನಾಯಕ ಉದಾಸಿ ಅವರು ಕೂಡಾ ಈ ನಾಟಕದಲ್ಲಿ ಪಾತ್ರವಹಿಸಿರುವುದು ಬೇಸರದ ಸಂಗತಿ. ಯಾರು ಹೋದರೂ ಬಿಜೆಪಿ ಸರ್ಕಾರ ಉಳಿಯಲಿದೆ ಎಂದು ಬೇಳೂರು ದೃಢವಾಗಿ ಹೇಳಿದರು.
ಮುಖ್ಯಮಂತ್ರಿ ಸ್ಥಾನದ ಮೌಲ್ಯ ಮರೆತು ವಿಧಾನಸೌಧದ ಮೊಗಸಾಲೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಏಕವಚನದಿಂದ ಸಂಬೋಧಿಸಿರುವ ಮಾಜಿ ಸಿಎಂ ಯಡಿಯೂರಪ್ಪ ಬಹಿರಂಗ ಕ್ಷಮೆಗೆ ಬಿಜೆಪಿ ಆಗ್ರಹಿಸಿದೆ. ರಾಜೀನಾಮೆ ಪರ್ವದ ನಂತರ ಬಿಜೆಪಿ ಇನ್ನಷ್ಟು ಪವಿತ್ರಗೊಳ್ಳಲಿದೆ ಎಂದು ಪರಿಸರ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.
ವಿಧಾನಸಭಾಧ್ಯಕ್ಷರಿಲ್ಲದ ವಿಷಯ ತಿಳಿದು ಕೂಡಾ ಶಾಸಕರ ಮೇಲೆ ಒತ್ತಡ ಹೇರಿ ರಾಜೀನಾಮೆ ನಾಟಕವಾಡಿದ್ದಲ್ಲದೆ, ಮುಖ್ಯಮಂತ್ರಿ ಪದವಿಯ ಮೌಲ್ಯವನ್ನು ಮರೆತು ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿದ್ದು ಖಂಡನೀಯ ಎಂದು ಸಚಿವ ಶಿವಣ್ಣ ಹೇಳಿದರು.
ಮಾಜಿ ಸಿಎಂ ಆಗಿ ಮುಖ್ಯಮಂತ್ರಿ ಪದವಿಯ ಬೆಲೆ ಅರಿತುಕೊಂಡು ಸಿಎಂ ಶೆಟ್ಟರ್ ಅವರನ್ನು ಏಕವಚನದಲ್ಲಿ ಸಂಬೋಧಿಸಿದ ತಪ್ಪಿಗೆ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಶಿವಣ್ಣ ಸೇರಿದಂತೆ ಹಲವು ಬಿಜೆಪಿ ಶಾಸಕರು ಪ್ರಶ್ನಿಸಿದ್ದಾರೆ. ಪಕ್ಷ-ಜನರಿಗೆ ದ್ರೋಹ ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಮಾತನಾಡಿ, ಪಕ್ಷ ಹಾಗೂ ಸರ್ಕಾರದಲ್ಲಿ ಸ್ಥಾನ
ಪಡೆದು ಈಗ ಅದಕ್ಕೇ ದ್ರೋಹ ಮಾಡುತ್ತಿದ್ದಾರೆ.
ನೆಹರು ಓಲೇಕಾರ್ ವಿರುದ್ಧ ನ್ಯಾಯಾಲಯ ಕ್ರಮಕ್ಕೆ ಆದೇಶಿಸಿದರೂ ಬಿಜೆಪಿ ಸರ್ಕಾರ ಸೌಜನ್ಯ ತೋರಿತ್ತು ಎಂದು ಕುಟುಕಿದರು. ಉಂಡೂ ಹೋದರು... ಕೊಂಡೂ ಹೋದರು ಪಕ್ಷಕ್ಕೆ ರಾಜೀನಾಮೆ ನೀಡಿರುವ ಶಾಸಕರ ವರ್ತನೆಯ ನ್ನು ಖಂಡಿಸಿರುವ ಸಚಿವ ಸೊಗಡು ಶಿವಣ್ಣ, ಉಂಡೂ ಹೋದ ಕೊಂಡು ಹೋದ ಎಂಬಂತೆ ಬಿಜೆಪಿ ಬಿಟ್ಟು ಈಗ ಕೆಜೆಪಿ ಸೇರುತ್ತಿರುವವರಿಂದ ಪಕ್ಷದಲ್ಲಿನ ಕಲ್ಮಶ ತೊಳದೆ ಸ್ವಚ್ಛಗೊಳ್ಳುತ್ತದೆ. ಇವರಿಂದ ಪಕ್ಷದ ಮರ್ಯಾದೆ ಹಾಳಾಗುತ್ತಿದೆ ಎಂದು ಕಿಡಿಕಾರಿದರು.












Click it and Unblock the Notifications