ಶೆಟ್ಟರ್ ಲಜ್ಜೆಗೆಟ್ಟ ಮುಖ್ಯಮಂತ್ರಿ : ಬಿಎಸ್‌ವೈ ಕೆಂಡ

ರಾಜೀನಾಮೆ ಸಲ್ಲಿಸಬೇಕಾದ ದಂಡಿನೊಂದಿಗೆ ಯಡಿಯೂರಪ್ಪ ವಿಧಾನಸೌಧಕ್ಕೆ ಬುಧವಾರ ಬೆಳಿಗ್ಗೆ ಆಗಮಿಸಿದಾಗ ವಿಧಾನಸಭೆ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ಮತ್ತು ಕೆಲ ಅಧಿಕಾರಿಗಳು ಕೂಡ ಇಲ್ಲದ್ದರಿಂದ ಯಡಿಯೂರಪ್ಪ ಕೆಂಡಾಮಂಡಲವಾದರು. ಮಾತಿನುದ್ದಕ್ಕೂ 'ಲಜ್ಜೆಗೆಟ್ಟ' ಪದವನ್ನು ಇಪ್ಪತೆಂಟು ಬಾರಿ ಬಳಸಿದ ಯಡಿಯೂರಪ್ಪ, ವಿದೇಶ ಪ್ರವಾಸಕ್ಕೆ ಹೋಗಿರುವ ಕೆಜಿ ಬೋಪಯ್ಯ ಮತ್ತು ಉತ್ತರ ಕರ್ನಾಟಕ ಪ್ರವಾಸಕ್ಕೆ ತೆರಳಿರುವ ಜಗದೀಶ್ ಶೆಟ್ಟರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಬಹುಮತ ಕಳೆದುಕೊಂಡಿರುವ ಶೆಟ್ಟರ್ ಮುಖ್ಯಮಂತ್ರಿಯೇ ಅಲ್ಲದ್ದರಿಂದ ಅವರು 24 ಗಂಟೆಯೊಳಗೆ ರಾಜೀನಾಮೆ ನೀಡಬೇಕು. ಇಂಥ ಲಜ್ಜೆಗೆಟ್ಟ ಮುಖ್ಯಮಂತ್ರಿಯನ್ನು ನಾನು ಜನ್ಮದಲ್ಲಿಯೇ ನೋಡಿಲ್ಲ. ಜಗದೀಶ್ ಶೆಟ್ಟರ್ ಅವರಿಗೆ ಮಾನ ಮರ್ಯಾದೆ ಏನಾದರೂ ಇದ್ದರೆ ಕೂಡಲೆ ಉತ್ತರ ಕರ್ನಾಟಕ ಪ್ರವಾಸದಿಂದ ವಾಪಸ್ ಬರಬೇಕು. ಅಲ್ಲಿಯ ಜನರೇ ಇಂಥ ಲಜ್ಜೆಗೆಟ್ಟ ಮುಖ್ಯಮಂತ್ರಿಯನ್ನು ವಾಪಸ್ ಕಳಿಸಿಕೊಡಬೇಕು ಎಂದು ಶೆಟ್ಟರ್ ಅವರನ್ನು ಏಕವಚನದಲ್ಲಿ ಬೈದರು.
ಸ್ಪೀಕರ್ ಕೊಠಡಿಯಲ್ಲಿ ಸ್ಪೀಕರೂ ಇಲ್ಲದಿರುವುದರಿಂದ ಅಧಿಕಾರಿಗಳು ಗೌರವಯುತವಾಗಿ ಬಂದಿರುವ ಶಾಸಕರ ರಾಜೀನಾಮೆ ಪತ್ರ ಸ್ವೀಕರಿಸುತ್ತಿಲ್ಲ. ರಾಜೀನಾಮೆ ಪತ್ರ ಸ್ವೀಕರಿಸಲು ಅಧಿಕಾರವಿಲ್ಲ ಎಂದು ಇರುವ ಅಧಿಕಾರಿಗಳು ನಮಗೆ ಬರೆದುಕೊಡಲಿ. ನಾವು ರಾಜ್ಯಪಾಲರ ಬಳಿ ಹೋಗುತ್ತೇವೆ. ನಾವು ನೀಡಿದ ರಾಜೀನಾಮೆ ಸಿಂಧುವೋ ಅಸಿಂಧುವೋ ಎಂಬುದನ್ನು ತಿಳಿಯಲು ಕೋರ್ಟಿಗೆ ಹೋಗುತ್ತೇವೆ ಎಂದು ಯಡಿಯೂರಪ್ಪ ಗದ್ಗಿತರಾದರು. [ಗಳಗಳನೆ ಅಳುವ ನಮ್ಮ 5 ಮುಖ್ಯಮಂತ್ರಿಗಳು]
ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಮುಖ್ಯಮಂತ್ರಿಯೇ ಅಲ್ಲ. ಅವರಿಗೆ ಮಾನ ಮರ್ಯಾದೆ ಕಿಂಚಿತ್ತೂ ಇಲ್ಲ. ಕೂಡಲೆ ಅವರು ವಾಪಸ್ ಬರಬೇಕು. ಅಲ್ಲಿನ ಜನರೇ ಶೆಟ್ಟರ್ ಅವರನ್ನು ಘೇರಾವೋ ಮಾಡಿ ಬೆಂಗಳೂರಿಗೆ ವಾಪಸ್ ಕಳುಹಿಸಿಕೊಡಬೇಕು. ಸತ್ ಸಂಪ್ರದಾಯ ಇರುವ ರಾಜ್ಯದ ಜನತೆಗೆ ಮುಖ್ಯಮಂತ್ರಿ ಮಾಡಿರುವ ಅವಮಾನ ಇದು ಎಂದು ಯಡಿಯೂರಪ್ಪ ಮಾಧ್ಯಮದೆದಿರುವ ಆಕ್ರೋಶ ವ್ಯಕ್ತಪಡಿಸಿ ಕಣ್ಣೀರುಗರೆದರು. ಸದ್ಯಕ್ಕೆ ವಿಧಾನಸೌಧದಿಂದ ತೆರಳಿರುವ ಯಡಿಯೂರಪ್ಪ ಅಂಡ್ ಟೀಂ ಮೂರು ಗಂಟೆಗಳ ಬಳಿಕ ರಾಜ್ಯಪಾಲರನ್ನು ಭೇಟಿಯಾಗಲಿದೆ.












Click it and Unblock the Notifications