ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಳಗಳನೆ ಅಳುವ ನಮ್ಮ 5 ಮುಖ್ಯಮಂತ್ರಿಗಳು

By Prasad
|
Google Oneindia Kannada News

ಕಣ್ಣೀರು! ಭಾವುಕನಾದ ಯಾವುದೇ ಭಾವನಾತ್ಮಕ ಜೀವಿ ಸಂದರ್ಭಕ್ಕನುಗುಣವಾಗಿ ಕಣ್ಣಿಂದ ಸುರಿಸುವ ಎರಡು ಹನಿ ನೀರು. ಇದಕ್ಕೆ ಮನುಜನೇ ಆಗಲಿ, ಪ್ರಾಣಿಪಕ್ಷಿಗಳೇ ಆಗಲಿ ಯಾವ ಜೀವವೂ ಹೊರತಲ್ಲ. ಸಂತಸದ ಬುಗ್ಗೆ ಉಕ್ಕಿದಾಗ, ಅಗಲಿಕೆಯ ಸನ್ನಿವೇಶ ಎದುರಾದಾಗ, ನಮ್ಮ ನಿಯಂತ್ರಣವನ್ನು ಮೀರಿ ಗ್ರಂಥಿಯಿಂದ ಅಶ್ರುಧಾರೆ ತಾನಾಗಿಯೇ ಹರಿದುಬಂದಿರುತ್ತದೆ. ಕೆಲಬಾರಿ ಸುಖಾಸುಮ್ಮನೆ ಕಣ್ಣಂಚಿನಲ್ಲಿ ನೀರು ಜಿನುಗಿರುತ್ತದೆ, ಯಾಕೋ!

ಕೆಲಸಕ್ಕೆಂದು ದೂರದ ಊರಿಗೆ ತಂದೆತಾಯಿಯರನ್ನು ಬಿಟ್ಟು ಹೋಗುವಾಗ, ಮದುವೆಯಾಗಿ ಹೆಣ್ಣು ಗಂಡನ ಮನೆಗೆ ಸಾಗುವಾಗ, ಹೆರಿಗೆಗೆಂದು ಹೆಂಡತಿಯನ್ನು ತವರುಮನೆಗೆ ಕಳಿಸುವಾಗ, ಆಪ್ತರನ್ನು ಅಗಲಿದಾಗ, ಸಿನೆಮಾದಲ್ಲಿ ಅತ್ಯಂತ ಭಾವನಾತ್ಮಕ ದೃಶ್ಯ ಮನತುಂಬಿದಾಗ, ಕೊರಳುಬ್ಬಿ ಕಣ್ಣೀರು ಕೋಡಿಯಾಗದಿದ್ದರೆ ಆತ ಮನಿಷ್ಯನೇ ಅಲ್ಲ, ಭಾವಜೀವಿಯೇ ಅಲ್ಲ ಎಂಬಷ್ಟು ಕಣ್ಣೀರು ಸಹಜ ಸಹಜ ಸಹಜ. ಅಥವಾ ಸುಮ್ಮನೆ ಆಹಾಹಾ ಅಂತ ಆಕಳಿಸಿ ನೋಡಿ, ಕಣ್ಣಲ್ಲಿಂದ ನೀರು ಜಿನುಗದಿದ್ದರೆ ಕೇಳಿ. ಅಳುವುದು, ನಾಲ್ಕು ನೀರು ಹರಿಸುವುದು ಕಣ್ಣಿಗೆ ಹಿತ ಕೂಡ. ಅಳುವುದು ಸಹಜದ ಧರ್ಮ.

ಯಾವಾಗಲೂ ನಗುನಗುತ್ತಲೇ ಇರುವ ವ್ಯಕ್ತಿ ಕೂಡ ಜೀವದ ಗೆಳೆಯ ಅಥವಾ ಸಂಗಾತಿಯನ್ನು ಕಳೆದುಕೊಂಡಾಗ ಕಣ್ಣಲ್ಲಿ ನೀರಿನ ಪೊರೆ ಕಟ್ಟಿಕೊಂಡಿರುತ್ತದೆ. ಅಳುವಿಗೆ ಆ ಜಾತಿ ಈ ಜಾತಿ ಕುಲಗೋತ್ರ ಎಂಬ ಹಂಗಿಲ್ಲ, ಗಂಡು ಹೆಣ್ಣು ಎಂಬ ಭೇದಭಾವ ಇಲ್ಲವೇ ಇಲ್ಲ. ಇದಕ್ಕೆ ನಮ್ಮ ಕರ್ನಾಟಕದ ಅನೇಕ ಶಾಸಕರು ಮಾಜಿ ಮುಖ್ಯಮಂತ್ರಿಗಳು, ಹಾಲಿ ಶಾಸಕರನೇಕರು ಹೊರತಲ್ಲ. ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರಿಂದ ಹಿಡಿದು ಸದಾನಂದ ಗೌಡರವರೆಗೆ ಅಳುವೆಂಬ ಸಾಂಕ್ರಾಮಿಕ ರೋಗದಿಂದ ಬಳಲಿದವರೆ.

ಬಹುಶಃ ಜಗತ್ ರಾಜಕೀಯದ ಇತಿಹಾಸದ ಪುಟಗಳನ್ನು ಹುಡುಕಿದರೆ ಒಂದೇ ರಾಜ್ಯದಲ್ಲಿ ಇಷ್ಟೊಂದು ಮುಖ್ಯಮಂತ್ರಿಗಳು ಕಣ್ಣೀರು ಹರಿಸಿದ ಉದಾಹರಣೆ ಸಿಗುವುದಿಲ್ಲ. ಇಂದು ಇವರಾಡುತ್ತಿರುವ ರಾಜಕೀಯ ಆಟವನ್ನು ನೋಡಿದರೆ ಇಂಥವರನ್ನು ಆರಿಸಿ ಕಳಿಸಿದ ಮತದಾರರು ನಿಜಕ್ಕೂ ಅಳಬೇಕು. ಇವರು ಜನರಿಗಾಗಿ ಅತ್ತರಾ, ಅಧಿಕಾರ ಕಳೆದುಕೊಂಡಿದ್ದಕ್ಕಾಗಿ ಕಣ್ಣೀರು ಸುರಿಸಿದರಾ, ಸುರಿಸಿದ್ದು ನಿಜವಾದ ಕಣ್ಣೀರಾ ಅಥವಾ ಮೊಸಳೆ ಕಣ್ಣೀರಾ? ಇದು ಅವರ ಅಭಿಮಾನಿಗಳಿಗೆ ಮತ್ತು ಅವರ ವೈರಿಗಳಿಗೆ ಬಿಟ್ಟ ವಿಚಾರ.

ಹಿಂದಿನ ಮಾಜಿ ಮುಖ್ಯಮಂತ್ರಿಗಳು ಹೇಗೋ ಏನೋ, ಇತ್ತೀಚಿನ ದಿನಗಳಲ್ಲಿ ನಮ್ಮ ಇತ್ತೀಚಿನ ಮಾಜಿ ಮುಖ್ಯಮಂತ್ರಿಗಳೆಲ್ಲ ಸ್ಪರ್ಧೆಗೆ ಬಿದ್ದವರಂತೆ ಅತ್ತಿರುವುದನ್ನು ನೋಡಿದರೆ, ಅಳುವನ್ನು ಇವರು ಹೇಗೆ ಬಂಡವಾಳ ಮಾಡಿಕೊಂಡಿದ್ದಾರೆ ಎಂಬ ಸಂದೇಹ ಬರದೆ ಇರದು. ಆದರೆ, ಇವರೆಲ್ಲ ಅಳುವನ್ನೇ ಬಂಡವಾಳ ಮಾಡಿಕೊಂಡು ಮತದಾರರನ್ನು ಇಮೋಶನಲ್ ಬ್ಲಾಕ್‌ಮೇಲ್ ಮಾಡುತ್ತಿರುವುದಂತೂ ದಿಟ. ವಿಧಾನಸಭೆ ಚುನಾವಣೆ ಇನ್ನೇನು ಹೊಸ್ತಿಲಲ್ಲೇ ಇದೆ. ಮತ ಕೇಳಲು ಕೈಯೊಡ್ಡಿ ಬರುವ ಜನಪ್ರತಿನಿಧಿಗಳಲ್ಲಿ ಕೆಲವರು ಕಣ್ಣೀರಿಡುತ್ತ ಬಂದರೂ ಆಶ್ಚರ್ಯವಿಲ್ಲ. ಕಣ್ಣೀರು ಹರಿಸಿರುವ ಮಾಜಿ ಮುಖ್ಯಮಂತ್ರಿಗಳಲ್ಲಿ ಮೊದಲ ಸ್ಥಾನ ಯಾರಿಗೆ? ಹೆಚ್ಚು ಅತ್ತ ರಾಜಕಾರಣಿ ಯಾರು?

ಯಡಿಯೂರಪ್ಪ ಅತ್ತಿದ್ದು ಎಷ್ಟು ಬಾರಿ?

ಯಡಿಯೂರಪ್ಪ ಅತ್ತಿದ್ದು ಎಷ್ಟು ಬಾರಿ?

ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಮೊದಲ ಬಾರಿ ದಂಡು ಕಟ್ಟಿಕೊಂಡು ಭಿನ್ನಮತದ ಹೊಗೆ ಎಬ್ಬಿಸಿದಾಗ, ವೈರಿಗಳ ಹುನ್ನಾರಕ್ಕೆ ಮಣಿದು ಶೋಭಾ ಕರಂದ್ಲಾಜೆಯನ್ನು ಸಂಪುಟದಲ್ಲಿ ಕೈಬಿಟ್ಟಾಗ ದೆಹಲಿಯಲ್ಲಿ ಯಡಿಯೂರಪ್ಪ ಮೊದಲ ಬಾರಿಗೆ ಗೊಳೋ ಅಂದಿದ್ದರು. ಅಲ್ಲಿಂದ ಆರಂಭವಾದ ಕಣ್ಣೀರ ಅಭಿಯಾನ ಅನೇಕ ಸಾರ್ವಜನಿಕ ಸಭೆಗಳಲ್ಲಿ ಮುಂದುವರಿದಿದೆ. ನಂತರ 13 ಶಾಸಕರು ಭಿನ್ನಮತದ ಬಾವುಟ ಹಾರಿಸಿದಾಗ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದ ಯಡಿಯೂರಪ್ಪ, 'ನಾನು ಮಾಡಿದ ತಪ್ಪಾದರೂ ಏನು, ನನಗ್ಯಾಕೆ ಈ ಶಿಕ್ಷೆ?' ಎಂದು ಕಣ್ಣೀರ ಕೋಡಿ ಹರಿಸಿದ್ದರು. ಈಗ, ಬಿಜೆಪಿಯಿಂದ ಹೊರನಡೆಯುವ ಬೆದರಿಕೆ ಹಾಕುತ್ತ, ಇಡೀ ಬಿಜೆಪಿಯ ನಾಯಕರು ಕಣ್ಣೀರು ಹಾಕುವಂತೆ ಮಾಡುತ್ತಿದ್ದಾರೆ. ಅತ್ತು ಅತ್ತು ಅವರು ಕಣ್ಣಿನ ಆರೋಗ್ಯವನ್ನು ಚೆನ್ನಾಗಿಯೇ ಕಾಪಾಡಿಕೊಂಡು ಬಂದಿದ್ದಾರೆ.

ನಗುವನ್ನೇ ಮರೆತಿರುವ ಗೌಡರು ಕೂಡ ಅತ್ತಿದ್ದಾರೆ

ನಗುವನ್ನೇ ಮರೆತಿರುವ ಗೌಡರು ಕೂಡ ಅತ್ತಿದ್ದಾರೆ

ಸಾರ್ವಜನಿಕ ಸಭೆಗಳಲ್ಲೆಲ್ಲ ದೇಶದ ಬಗ್ಗೆ, ಮತದಾರರ ಬಗ್ಗೆ 'ಚಿಂತನೆಯಲ್ಲಿ ಮುಳುಗಿರುವ' ಭಂಗಿಯಲ್ಲಿಯೇ ಕಂಡುಬರುವ ಮಾಜಿ ಪ್ರಧಾನಿ ಮಣ್ಣಿನಮಗ ಎಚ್.ಡಿ. ದೇವೇಗೌಡರು ನಕ್ಕಿದ್ದಕ್ಕಿಂತ ಅತ್ತಿದ್ದೇ ಹೆಚ್ಚೇನೋ! ಕಾವೇರಿಗಾಗಿ ಹಗಲುರಾತ್ರಿ ಧರಣಿ ಕುಳಿತಿದ್ದ ರೈತರಿಗಾಗಿ ಗೌಡರು ಮೊನ್ನೆಮೊನ್ನೆ ಎರಡು ಹನಿ ಹರಿಸಿದ್ದರು. ಕೆಲ ದಿನಗಳ ಹಿಂದೆ ಹಾಸನದ ಮಾವಿನಕೆರೆ ಬೆಟ್ಟದ ಮೇಲೆ ರಂಗನಾಥನೆದುರು ತಮ್ಮ ಬಾಲ್ಯದ ದಿನಗಳನ್ನು ನೆನೆದು ಗದ್ಗದಿತರಾಗಿದ್ದರು. ಕಳೆದ ತಿಂಗಳು ಕೂಡ ದಶಕಗಳ ಹಿಂದಿನ ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ನೆನೆದು ಕಣ್ಣೀರಾಗಿದ್ದರು. ಗೌಡರ ನಗು ಸ್ವಾಭಾವಿಕ ಹೌದೋ ಅಲ್ಲವೋ, ಅವರ ಕಣ್ಣೀರು ಮಾತ್ರ ಮೊಸಳೆ ಕಣ್ಣೀರಲ್ಲ.

ಕುಮಾರಸ್ವಾಮಿ ಕಣ್ಣೀರು ಹರಿಸಿದ್ದು ಯಾವಾಗ?

ಕುಮಾರಸ್ವಾಮಿ ಕಣ್ಣೀರು ಹರಿಸಿದ್ದು ಯಾವಾಗ?

ಕುಮಾರಸ್ವಾಮಿ ಕೂಡ ಅವರ ತಂದೆಯಂತೆಯೇ ವಿಪರೀತ ಭಾವುಕ ಜೀವಿ. ಏನೇ ಆಗಲಿ ಸಂದರ್ಭಕ್ಕೆ ತಕ್ಕಂತೆ ದಾಳ ಉರುಳಿಸುವುದರಲ್ಲಿ ಕುಮಾರಸ್ವಾಮಿಯವರು ತಮ್ಮ ತಂದೆಯನ್ನೂ ಮೀರಿಸುತ್ತಾರೆ. ರಾಮನಗರದಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ. ರಾಜುವನ್ನು ಗೆಲ್ಲಿಸದಿದ್ದರೆ ನನಗೆ ತೊಟ್ಟು ವಿಷ ಕೊಟ್ಟುಬಿಡಿ ಎಂದು ಕುಮಾರ್ ಕಣ್ಣೀರ ಕೋಡಿಯನ್ನೇ ಹರಿಸಿದ್ದರು. ರಾಜು ಆ ಬಾರಿ ಗೆದ್ದರೆಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಇದನ್ನು ಹೊರತುಪಡಿಸಿದರೆ ಕುಮಾರಸ್ವಾಮಿಯವರು ಬೇರೆಯವರನ್ನು, ಅಂದರೆ ರಾಜಕೀಯ ಎದುರಾಳಿಗಳನ್ನು ಅಳಿಸಿದ್ದೇ ಹೆಚ್ಚು.

ಸದಾನಂದ ಗೌಡ ಕೂಡ ಅತ್ತಿದ್ದರೆಂದರೆ ನಂಬಿರಿ

ಸದಾನಂದ ಗೌಡ ಕೂಡ ಅತ್ತಿದ್ದರೆಂದರೆ ನಂಬಿರಿ

ಅಧಿಕಾರ ಇರಲಿ ಇಲ್ಲದಿರಲಿ, ಎಂಥದೇ ಸಂಕಷ್ಟಗಳು ಬರಲಿ ಬಿಡಲಿ ಹೇಗೆ ನಗುತಿರಬೇಕೆಂದು ಇಡೀ ಕರ್ನಾಟಕಕ್ಕೆ ತೋರಿಸಿಕೊಟ್ಟವರು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ. ಸದಾ ಆನಂದದಿಂದಲೇ ಇರುವ ಸದಾನಂದ ಗೌಡರು ತಮ್ಮ ಜಿಲ್ಲೆಯವರೇ ಆದ, ಆತ್ಮೀಯ ಗೆಳೆಯ ಸಹೋದ್ಯೋಗಿ ಡಾ. ವಿ.ಎಸ್. ಆಚಾರ್ಯರನ್ನು ಕಳೆದುಕೊಂಡಾಗ ಉಕ್ಕಿ ಹರಿಯುತ್ತಿದ್ದ ಕಣ್ಣೀರನ್ನು ಕಟ್ಟಿಹಾಕಲು ಅವರಿಗೆ ಸಾಧ್ಯವಾಗಿದ್ದೇ ಇಲ್ಲ. ನಂತರ ಕೆಲ ದಿನಗಳಲ್ಲಿಯೇ ಪಕ್ಷದಲ್ಲಿಯೇ ಇರುವ ಅವರ ವಿರೋಧಿಗಳ ಹುನ್ನಾರದಿಂದಾಗಿ ಮುಖ್ಯಮಂತ್ರಿ ಪದವಿ ಕಳೆದುಕೊಂಡಾಗ ಟಿವಿ ಸಂದರ್ಶನವೊಂದರಲ್ಲಿ ಡಿವಿಯವರ ಕಣ್ಣಾಲಿಗಳು ತೇವವಾಗಿದ್ದವು, ಅಳುವೇ ತುಟಿಗೆ ಬಂದಂತೆ.

ಮುಖ್ಯಮಂತ್ರಿ ಶೆಟ್ಟರ್ ಎಂದಾದರೂ ಅತ್ತಿದ್ದಾರಾ?

ಮುಖ್ಯಮಂತ್ರಿ ಶೆಟ್ಟರ್ ಎಂದಾದರೂ ಅತ್ತಿದ್ದಾರಾ?

ಈ ನಾಲ್ವರನ್ನು ಬಿಟ್ಟರೆ ಉಳಿದ ಮಾಜಿ ಮುಖ್ಯಮಂತ್ರಿಗಳಾರೂ ಅಳುವವರ ಕೆಟಗರಿಗೆ ಸೇರುವುದಿಲ್ಲ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಅಳುವಂತಹ ಪ್ರಸಂಗವೇ ಬಂದಿಲ್ಲ ಮತ್ತು ಬರುವುದೂ ಇಲ್ಲ. ಅವರು ಯಾವುದೇ ಮಹತ್ವಾಕಾಂಕ್ಷೆಯ ಮೂಟೆಹೊಟ್ಟು ಮುಖ್ಯಮಂತ್ರಿ ಪಟ್ಟ ಧರಿಸಿಯೂ ಇಲ್ಲ, ಮುಂದೆ ಅವರ ರಾಜಕೀಯ ಭವಿಷ್ಯ ಏನಾಗಲಿದೆ ಎಂದು ಅವರು ಅರಿಯದವರೂ ಅಲ್ಲ. ಬಹುಶಃ ಕಡೆಯಬಾರಿಗೆ ಅವರು ಅತ್ತದ್ದು ಯಾವತ್ತೆಂದು ಅವರಿಗೆ ನೆನಪಿರುವುದೂ ಇಲ್ಲ. ಆದರೆ, ಅವರು ಮುಖ್ಯಮಂತ್ರಿಯಾದ ಕ್ಷಣ ತಾಯಿಯ ಆಶೀರ್ವಾದ ಪಡೆಯುವಾಗ ಭಾವುಕರಾಗಿದ್ದು ನಿಜ. ಅವರು ಹಾಗೇ ಇರಲಿ ಬಿಡಿ. ಎಂದೂ ಅಳದಿರು ಕಂದಾ.

ಅಸಲಿಗೆ ಕಣ್ಣೀರು ಯಾಕೆ ಬರುತ್ತದೆ?

ಅಸಲಿಗೆ ಕಣ್ಣೀರು ಯಾಕೆ ಬರುತ್ತದೆ?

ಮೂರು ಸಂದರ್ಭದಲ್ಲಿ ಕಣ್ಣೀರು ಬರುತ್ತದೆ. ಒಂದು ದುಃಖವಾದಾಗ, ಎರಡು ವಿಪರೀತ ಸಂತೋಷವಾದಾಗ, ಮೂರು ಕಣ್ಣಲ್ಲಿ ಧೂಳು ಹೊಕ್ಕಾಗ. ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಲು ಅಂಚಿನಲ್ಲಿರುವ ಗ್ರಂಥಿ ಸ್ರವಿಸುವ ಒಂದು ಬಗೆಯ ಉಪ್ಪುಪ್ಪು ನೀರೇ ಕಣ್ಣೀರು. ಇದು ಅತ್ಯಂತ ಸ್ವಾಭಾವಿಕ ಕ್ರಿಯೆ. ದುಃಖ ಬಂದು ಅತ್ತಾಗ ಕಣ್ಣೀರು, ಸಂತಸಗೊಂಡಾಗ ಸುರಿಸಿದ್ದು ಪನ್ನೀರು. ಕಣ್ಣಲ್ಲಿ ಧೂಳು ಬಿದ್ದದ್ದು ಹೊರತುಪಡಿಸಿ ಯಾವುದೇ ಭಾವನೆ ಇಲ್ಲದೆ ಕಣ್ಣೀರು ಬರದಿರಲು ಸಾಧ್ಯವೇ ಇಲ್ಲ. ಕಣ್ಣೀರು ನಮ್ಮ ಭಾವನೆಯ ಅಭಿವ್ಯಕ್ತಿ. ಆದರೆ, ಸುಖಾಸುಮ್ಮನೆ ಕಣ್ಣೀರು ಬರುತ್ತಿದ್ದರೆ ಒಂದು ಬಾರಿ ವೈದ್ಯರಿಗೆ ತೋರಿಸುವುದು ಒಳಿತು.

ಮೊಸಳೆ ಕಣ್ಣೀರು ಎಂದರೇನು?

ಮೊಸಳೆ ಕಣ್ಣೀರು ಎಂದರೇನು?

ಒಂದು ವಿವರಣೆಯ ಪ್ರಕಾರ, ತನ್ನ ಮುಂದಿರುವ ಬಲಿಯನ್ನು ಕಣ್ಣೀರು ಹರಿಸುವ ಮುಖಾಂತರ ಮರಳು ಮಾಡಿ, ಅದನ್ನು ಒಳಿಸಿಕೊಂಡು, ಮೋಸ ಮಾಡಿ ತಿಂದು ಹಾಕಲು ಮೊಸಳೆ ಕಂಡುಕೊಂಡ ಅತ್ಯದ್ಭುತ ಟ್ರಿಕ್. ಕಣ್ಣೀರು ಸುರಿಸುವ ನಾಟಕವಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಸುರಿಸುವ ಕಣ್ಣೀರೇ ಮೊಸಳೆ ಕಣ್ಣೀರು. "ರೀ, ಅವರೇನು ನಿಜವಾಗ್ಲೂ ಕಣ್ಣೀರು ಸುರಿಸ್ತಿದ್ದಾರಾ? ಅದು ಮೊಸಳೆ ಕಣ್ಣೀರು" ಎಂದು ರಾಜಕಾರಣಿಗಳು ತಮ್ಮ ವಿರೋಧಿಗಳು ಸುರಿಸುವ ಕಣ್ಣೀರ ಕುರಿತು ಹೇಳುವುದು ಸರ್ವೇಸಾಮಾನ್ಯ. ಇದು ರಾಜಕಾರಣಿಗಳಿಗೆ ಮಾತ್ರವಲ್ಲ, ಅತ್ತಂತೆ ನಾಟಕವಾಡುವವ ಎಲ್ಲರಿಗೂ ಅನ್ವಯವಾಗುತ್ತದೆ. "ಗೌಡರ ಮೊಸಳೆ ಕಣ್ಣೀರು", "ರೈತರ ಬಗ್ಗೆ ಸ್ವಾಮಿ ಮೊಸಳೆ ಕಣ್ಣೀರು", "ಯಡಿಯೂರಪ್ಪ ಅನುಕಂಪದ ಮೊಸಳೆ ಕಣ್ಣೀರು" ಮುಂತಾದ ಶೀರ್ಷಿಕೆಗಳನ್ನು ನೀವು ಪತ್ರಿಕೆಗಳಲ್ಲಿ ಓದಿರಬಹುದು.

English summary
Tears are secretions that clean and lubricate the eyes. Perhaps our eyes need to be washed by our tears once in a while, so that we can see Life with a clearer view again. Yes, everyone cries for one reason or the other. So is our Chief Ministers and Former CMs. Read about, HDD, HDK, BSY, DVS, JS.. the 5 weeping ministers of Karnataka. They have shed so many tears, tried hard to get rid of toxic contents!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X