ಪಿಂಕ್ ಸಿಟಿಯಲ್ಲಿ ರಾಹುಲ್ ಗಾಂಧಿ ಪ್ರಥಮ ಭಾಷಣ
ಜೈಪುರ, ಜ.20: ಕಾಂಗ್ರೆಸ್ ಪಕ್ಷದಲ್ಲಿ ನಂ.2 ಸ್ಥಾನಕ್ಕೇರಿದ ಮೇಲೆ ಪ್ರಪ್ರಥಮ ಬಾರಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭರ್ಜರಿ ಭಾಷಣ ಮಾಡಿದ್ದಾರೆ. ಇಂದಿನಿಂದ ದೇಶದ ಜನತೆ ಹಾಗೂ ಕಾಂಗ್ರೆಸ್ ಪಕ್ಷವೇ ನನ್ನ ಜೀವನ ಎಂದು ರಾಹುಲ್ ಘೋಷಿಸಿದ್ದಾರೆ.
ಪಿಂಕ್ ಸಿಂಟಿ ಜೈಪುರದಲ್ಲಿ ನಡೆದ ಎಐಸಿಸಿ ಕಾರ್ಯಕಾರಿ ಸಭೆ, ಚಿಂತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು ಹೀಗಿದೆ:

* ಪಕ್ಷದಿಂದ ನನಗೆ ಬಹುದೊಡ್ಡ ಗೌರವ ಸಿಕ್ಕಿದೆ. ಪಕ್ಷ ನನ್ನ ಕಲಿಕೆಗೆ ಸಹಕರಿಸಿದೆ. ಕಳೆದ 8 ವರ್ಷಗಳಲ್ಲಿ ಸಾಕಷ್ಟು ಕಲಿತ್ತಿದ್ದೇನೆ.
* ಉದ್ಯೋಗ ಖಾತ್ರಿ ಯೋಜನೆಯಿಂದ ರೈತರು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ.
* ಜನರ ಬುದ್ಧಿವಂತಿಕೆಗೆ ಬೆಲೆ ಕೊಡಬೇಕು. ಅಧಿಕಾರ ಶಾಶ್ವತವಲ್ಲ. ಆದರೆ, ಅಧಿಕಾರ ಇಲ್ಲದಿದ್ದರೆ ಜನರಿಗೆ ನಿಮ್ಮ ದನಿ ಕೇಳಿಸುವುದೇ ಇಲ್ಲ.
* ಉನ್ನತ ಹುದ್ದೆಯಲ್ಲಿದ್ದು, ಯಾವುದೇ ಅರಿವು ಇಲ್ಲದಂಥ ವ್ಯಕ್ತಿಗಳನ್ನು ನಾನು ಭೇಟಿ ಮಾಡಿದ್ದೇನೆ. ನಾನು ಜ್ಞಾನಕ್ಕಿಂತ ಅಧಿಕಾರಕ್ಕೆ ಬೆಲೆ ಕೊಡುತ್ತಿರುವುದು ದುರಂತ.
* ಪಕ್ಷದ ಏಳಿಗೆಗಾಗಿ ರಕ್ತ, ಬೆವರು ಹರಿಸಿದ ಎಲ್ಲಾ ಕಾರ್ಯಕರ್ತರಿಗೆ ನನ್ನ ಧನ್ಯವಾದ.
* ಕಳೆದ 6 ವರ್ಷದಲ್ಲಿ ಹಸಿರು ಕ್ರಾಂತಿ ಯಶಸ್ವಿಯಾಗಿ ಸಾಧಿಸಲಾಗಿದೆ.
* ಆಹಾರ ಕಾಯಿದೆಯಿಂದ ಯಾವುದೇ ಮಗು ಹಸಿವು ಇಲ್ಲದೆ ಮಲಗುವಂತಾಗಿದೆ.
* ಪ್ರತಿ ಮಕ್ಕಳಿಗೂ ಶಿಕ್ಷಣ ಕಡ್ಡಾಯವಾಗಬೇಕಿದೆ.
* 1947ರಲ್ಲಿ ಶಸ್ತ್ರಗಳಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಲಿಲ್ಲ, ಅಹಿಂಸೆ ಎಂಬ ಅಸ್ತ್ರದಿಂದ, ಜನರ ಒಕ್ಕೊರಲ ದನಿಯಿಂದ ಸ್ವಾತಂತ್ರ್ಯ ಸಿಕ್ಕಿದ್ದು ಎಂಬುದನ್ನು ಮರೆಯುವಂತಿಲ್ಲ್.
* ದೇಶ ಪ್ರತಿ ಭಾರತೀಯನನ್ನು ಕಾಂಗ್ರೆಸ್ ಗೌರವಿಸಿ, ಬೆಂಬಲಿಸುತ್ತದೆ, ಜಾತಿ, ಮತ, ಪಂಥ ಬೇಧ ನಮ್ಮಲ್ಲಿಲ್ಲ.
* ನಮ್ಮ ತಂದೆ ರಾಜೀವ್ ಗಾಂಧಿ ಅವರ ಆಶಯದಂತೆ ದೇಶದಲ್ಲಿ ಮಾಹಿತಿ ತಂತ್ರಜ್ಞಾನ(ಐಟಿ) ಕ್ರಾಂತಿ ಸಾಧ್ಯವಾಯಿತು.
* ಮಾಹಿತಿ ಹಕ್ಕು ಕಾಯ್ದೆ(RTI) ಮೂಲಕ ಪಾರದರ್ಶಕ ಆಡಳಿತ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಾಧ್ಯವಾಗಿದೆ.
* ಜನರಿಗೆತಮ್ಮ ಹಕ್ಕುಗಳನ್ನು ಕೇಳಿ ಪಡೆಯುವ ವೇದಿಕೆ ಒದಗಿಸಿದ್ದು ಕಾಂಗ್ರೆಸ್ ಸಾಧನೆ.
* ಅಧಿಕಾರ(power) ದೆಹಲಿಯಿಂದ ಎಲ್ಲಾ ಪಂಚಾಯಿತಿಗಳ ಕಡೆಗೆ ಹರಿಯಬೇಕು.
* ನಾನು ಆಶಾವಾಗಿಯಾಗಿದ್ದೇನೆ. ಇದಕ್ಕೆ ದೇಶದ ಯುವ ಜನತೆ ಕಾರಣ. ಅವರಿಗೆ ತಕ್ಕ ಉದ್ಯೋಗಾವಕಾಶ ನೀಡಿ ದೇಶದ ಪ್ರಬಲ ಶಕ್ತಿಯನ್ನಾಗಿಸಬೇಕು.
* ಮುಂಬರುವ 5 ವರ್ಷಗಳಲ್ಲಿ ಸುಮಾರು 40 ರಿಂದ 50 ಜನ ನಾಯಕರನ್ನು ಸೃಷ್ಟಿಸಬೇಕಿದೆ. ಈ ನಾಯಕರು ಸಮರ್ಥವಾಗಿ ಜನರ ಆಶಯದಂತೆ ದೇಶವನ್ನು ಮುನ್ನಡೆಸುವಂತೆ ಮಾಡಬೇಕಿದೆ.
* ಜೀವನದಲ್ಲಿ ಸಾಕಷ್ಟು ದುರಂತಗಳನ್ನು ಕಣ್ಣಾರೆ ನೋಡಿದ್ದೇನೆ. ಅಜ್ಜಿ ಇಂದಿರಾ ಗಾಂಧಿ ಹತ್ಯೆಯಾದಾಗ ಉಂಟಾದ ಅಸಮತೋಲನ ಪಾಠ ಕಲಿಸಿದೆ.
* ಅಪ್ಪ ರಾಜೀವ್ ಗಾಂಧಿ ಅವರನ್ನು ಕಳೆದುಕೊಂಡಾಗ ಅತ್ತಿದ್ದ ನನ್ನ ತಾಯಿ ಕಳೆದ ರಾತ್ರಿ ನನ್ನ ಕೋಣೆಗೆ ಬಂದು ಬಿಕ್ಕಿ ಬಿಕ್ಕಿ ಅತ್ತರು. ಅಧಿಕಾರ ಎಂಬುದು ವಿಷ ಇದ್ದಂತೆ, ಸೆರಗಿನಲ್ಲಿ ಕೆಂಡ ಕಟ್ಟಿ ಕೊಂಡಂತೆ ಎಂದರು. ಆಕೆ ಅಧಿಕಾರ ವ್ಯಾಮೋಹ ತ್ಯಜಿಸಿದ್ದರಿಂದಲೇ ಈ ರೀತಿ ಬೋಧನೆ ನೀಡಲು ಸಾಧ್ಯವಾಯಿತು.
ಕೊನೆಯದಾಗಿ, ಇನ್ಮುಂದೆ ಕಾಂಗ್ರೆಸ್ ಪಕ್ಷ ನನ್ನ ಜೀವನವಾಗಿರುತ್ತದೆ. ದೇಶದ ಪ್ರಜೆಗಳು ನನ್ನ ಜೀವನದ ಅಂಗವಾಗುತ್ತಾರೆ. ನನ್ನ ಪ್ರಜೆಗಳು, ಪಕ್ಷದ ಎದುರು ನಿಲ್ಲುವ ಶಕ್ತಿಗಳ ವಿರುದ್ಧ ಹೋರಾಡಲು ನಾನು ಸಜ್ಜಾಗಿದ್ದೇನೆ.












Click it and Unblock the Notifications