ನರಸೀಪುರದಲ್ಲಿ ಜ.20ರಂದು ಮಾದಿಗರ ಸಮಾವೇಶ

ಜಾತಿವಾರು ಪ್ರಾತಿನಿಧ್ಯದಲ್ಲಾಗುತ್ತಿರುವ ವಂಚನೆ ಪರಿಹರಿಸುವ ಪ್ರತೀಕವಾದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಜಾರಿಗೆ ಆಗ್ರಹಿಸಲು ಮಾದಿಗ ಸಮುದಾಯದ ಲಕ್ಷ ಲಕ್ಷ ಮಂದಿ ನರಸೀಪುರದಲ್ಲಿ ಸಮಾಗಮಗೊಳ್ಳುತ್ತಿದ್ದಾರೆ. ಜನವರಿ 20ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನರಸೀಪುರದ ವಿದ್ಯೋದಯ ಕಾಲೇಜು ಮೈದಾನದಲ್ಲಿ ನಡೆಯುವ ಮಾದಿಗರ ಮಹಾಸಮಾವೇಶದ ಮೂಲಕ ಒಕ್ಕೊರಲ ಧ್ವನಿ ಮೊಳಗಲಿದೆ.
ರಾಜ್ಯದಲ್ಲಿ ದಲಿತ ಚಳವಳಿ ಅತಿ ಎತ್ತರಕ್ಕೆ ಬೆಳೆದ ಕಾಲಘಟ್ಟದಲ್ಲಿಯೇ ಮಾದಿಗರ ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯ ಅವಕಾಶಗಳು ನಾಪತ್ತೆಯಾಗಲಾರಂಭಿಸಿದವು. ಕೀಳುಮಟ್ಟದ ಜಾತಿ ರಾಜಕಾರಣದಂತಹ ಅಧಃಪತನ ತಪ್ಪಿಸಲು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಅಗತ್ಯ. ಈ ವರದಿ ಶಿಫಾರಸು ಜಾರಿಯಾಗದ ಹೊರತು ಮಾದಿಗ ಸಮುದಾಯಕ್ಕೆ ಉಳಿಗಾಲವಿಲ್ಲ ಎನ್ನುವುದು ಮನವರಿಕೆಯಾಗಿದೆ. ಮಾದಿಗರು ಸ್ವಾಭಿಮಾನದಿಂದ ಮೈಕೊಡವಿ ನಿಂತಿದ್ದಾರೆ. ಈ ಬೃಹತ್ ಸಮಾವೇಶದ ಮೂಲಕ ಸದಾಶಿವ ಆಯೋಗ ಜಾರಿಗಾಗಿ ದಿಟ್ಟ ಹೋರಾಟಕ್ಕೆ ಮುಂದಡಿ ಇಟ್ಟಿದ್ದಾರೆ. ಇದನ್ನು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡುವುದೇ ಸಮಾವೇಶದ ಉದ್ದೇಶ.
ಸಂಸ್ಕೃತಿ ವೈಭವ : ಈ ಮಧ್ಯೆ, ಸಮಾವೇಶಕ್ಕೂ ಮುನ್ನ ಮಾತಂಗ ಪರಂಪರೆಯ ಸಂಸ್ಕೃತಿ ವೈಭವವನ್ನೂ ಮೆರೆಸುವ ನೂರಾರು ತಮಟೆ ವಾದ್ಯಗಳು, ಕುರುಬನಕಟ್ಟೆ ಮೆರವಣಿಗೆ ಹಾಗೂ ಜಾನಪದ ಮೇಳ ಕೂಡ ಇಲ್ಲಿ ನಡೆಯಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಗೋವಿಂದ ಎಂ. ಕಾರಜೋಳ ಅವರು ಈ ಸಂಸ್ಕ್ರತಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಪಟ್ಟಣದ ನವೋದಯ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಎನ್.ರಾಚಯ್ಯ ಬೃಹತ್ ವೇದಿಕೆಯಲ್ಲಿ ಈ ಮಹಾಸಮಾವೇಶ ನಡೆಯಲಿದೆ.
ಕೇಂದ್ರ ಸಣ್ಣ ಕೈಗಾರಿಕಾ ಸಚಿವ ಕೆ.ಎಚ್.ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಅದ್ದೂರಿ ಸಮಾರಂಭವನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಉದ್ಘಾಟಿಸುವರು. ಈ ಸಂದರ್ಭದಲ್ಲಿ ಬಾಬು ಜಗಜೀವನರಾಮ್ ಅವರ ಭಾವಚಿತ್ರವನ್ನು ಸಮಾಜಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಅನಾವರಣಗೊಳಿಸುವರು. ಎನ್.ರಾಚಯ್ಯ ಅವರ ಭಾವಚಿತ್ರವನ್ನು ಮಾಜಿ ಶಾಸಕ, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅನಾವರಣ ಮಾಡುವರು. ಬಿಎಸ್.ಆರ್. ಕಾಂಗ್ರೆಸ್ ಸಂಸ್ಥಾಪಕ ಬಿ.ಶ್ರೀರಾಮುಲು ಉಪಸ್ಥಿತರಿರುವರು.
ಬೊಪ್ಪೇಗೌಡನಪುರ ಶ್ರೀಮಂಟೇಸ್ವಾಮಿ ಮಠದ ಶ್ರೀ ಪ್ರಭುದೇವರಾಜೇ ಅರಸ್, ಮಲೈ ಮಹದೇಶ್ವರ ಬೆಟ್ಟದ ಬೃಹನ್ಮಠದ ಶ್ರೀ ಪಟ್ಟದ ಗುರುಸ್ವಾಮಿಗಳು, ವಾಟಾಳು ಸೂರ್ಯಸಿಂಹಾಸನ ಮಠದ ಶ್ರೀ ಸಿದ್ಧಗಂಗಾ ಶಿವಾಚಾರ್ಯ ಸ್ವಾಮಿಗಳು, ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು, ಕೋಡಿಹಳ್ಳಿ ಹರಳಯ್ಯ ಗುರುಪೀಠದ ಶ್ರೀ ಮಾರ್ಕಾಂಡೇಯ ಮುನಿಸ್ವಾಮೀಜಿ ಹಾಗೂ ಅಂಗೀಕಟ್ಟಿ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಕಾಂಗ್ರೆಸ್ ಮುಖಂಡ ಪ್ರೊ.ಎಚ್.ಗೋವಿಂದಯ್ಯ, ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಸಂಪತ್ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುಧಾ ಮಹದೇವಯ್ಯ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
ಸಂಪರ್ಕ ದಿನೇಶ್ ಕುಮಾರ್ - 9739426166












Click it and Unblock the Notifications