ಜರ್ಮನಿಯಲ್ಲಿ ಬೆಂಗಳೂರು ವಿದ್ಯಾರ್ಥಿಯ ನಿಗೂಢ ಸಾವು

ಬೆಂಗಳೂರಿನ ಚಿಕ್ಕಲಸಂದ್ರದ ಶಶಿಧರ್ ಮತ್ತು ಸಿದ್ದಲಿಂಗಮ್ಮ ಎಂಬವರ ಪುತ್ರ ಲಿಖಿತ್ (25) ಮೃತ ವಿದ್ಯಾರ್ಥಿ. ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಲಿಖಿತ್ ಶವ ದೊರೆತಿದ್ದು, ಸಾವಿಗೆ ಶರಣಾಗಿ 9 ದಿನಗಳ ನಂತರ ಶುಕ್ರವಾರ ಬೆಳಗಿನ ಜಾವ ಬೆಂಗಳೂರಿನ ಚಿಕ್ಕಲಸಂದ್ರದಲ್ಲಿರುವ ಅವರ ಮನೆಗೆ ಶವವನ್ನು ತರಲಾಗಿದೆ.
ಈತ ಜರ್ಮನಿಯ ಸೀಗನ್ ಯುನಿವರ್ಸಿಟಿಯಲ್ಲಿ ಎಂಎಸ್ ವ್ಯಾಸಂಗಕ್ಕೆಂದು ತೆರಳಿದ್ದ. ಲಿಖಿತ್ ಕತ್ತಿನ ಸುತ್ತ ಹಗ್ಗ ಬಿಗಿದ ರೀತಿಯ ಗುರುತು ಮೂಡಿದ್ದು, ಮೃತದೇಹದ ಪೋಸ್ಟ್ ಮಾರ್ಟಂ ನಡೆಸದೆ ಅಲ್ಲಿಂದ ಶವವನ್ನು ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲಿಖಿತ್ ಸಾವಿನ ಬಗ್ಗೆ ಸಾವಿನ ಬಗ್ಗೆ ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಹವಿದ್ಯಾರ್ಥಿಗಳಿಂದ ಕಿರುಕುಳ : ಪದವಿಯ ನಂತರ ಮೈಕೋಟ್ರಾನಿಕ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲೆಂದು ಸೀಗನ್ ವಿಶ್ವವಿದ್ಯಾಲಯಕ್ಕೆ ಕಳೆದ ವರ್ಷದ ಅಕ್ಟೋಬರ್ 4ರಂದು ಲಿಖಿತ್ ತೆರಳಿದ್ದರು. ಅವರಿದ್ದ ಹಾಸ್ಟೆಲ್‌ನಲ್ಲಿ ಸಹೋದ್ಯೋಗಿಗಳು ತಮಗೆ ಕಿರುಕುಳ ನೀಡುತ್ತಿದ್ದರೆಂದು ತಮ್ಮ ಸಹೋದರಿ ಲೇಖ ಅವರಿಗೆ ಫೋನ್ ಮುಖಾಂತರ ತಿಳಿಸಿದ್ದರೆಂದು ಹೇಳಲಾಗಿದೆ.
ತಮ್ಮ ಅಶ್ಲೀಲ ಫೋಟೋಗಳನ್ನು ತೆಗೆದು ಫೇಸ್ ಬುಕ್ ನಲ್ಲಿ ಹಾಕಿ, ತಮ್ಮ ಬಗ್ಗೆ ಕೆಟ್ಟದಾಗಿ ಬರೆಯಲಾಗುತ್ತಿದೆ ಎಂದು ಲಿಖಿತ್ ಅವರು ಲೇಖ ಜೊತೆ ನೋವು ತೋಡಿಕೊಂಡಿದ್ದರು. ಅವರು ಅನುಭವಿಸಿದ ನೋವು ಸಾವಿನಲ್ಲಿ ಪರ್ಯವಸಾನವಾಗಿದೆ. ಜರ್ಮನಿಯಲ್ಲಿನ ಭಾರತೀಯ ದೂತಾವಾಸ ತನ್ನ ಸ್ವಂತ ಖರ್ಚಿನಲ್ಲಿ ಲಿಖಿತ್ ಶವವನ್ನು ಭಾರತಕ್ಕೆ ಕಳುಹಿಸಿದೆ.
ಜರ್ಮನಿಗೆ ತೆರಳಿದ ಮೇಲೂ ಲಿಖಿತ್ ಅವರು ತಂದೆ-ತಾಯಿ, ಸಹೋದರಿಯೊಡನೆ ದೂರವಾಣಿ ಮುಖಾಂತರ ಮಾತುಕತೆ ನಡೆಸುತ್ತಿದ್ದರು. ಹೊಸವರ್ಷಕ್ಕೆ ಬೆಂಗಳೂರಿಗೆ ಬರುವುದಾಗಿಯೂ ಅವರು ಹೇಳಿದ್ದರು. ಆದರೆ, ಅವರಿಗೆ ಬರಲಾಗಿರಲಿಲ್ಲ. ಬಂದಿದ್ದು ಮಾತ್ರ ಜರ್ಮನಿ ದೂತಾವಾಸದಿಂದ ಜ.9ರಂದು ಲಿಖಿತ್ ಸತ್ತಿದ್ದಾರೆಂಬ ಕರೆ ಮತ್ತು ಜ.18ರಂದು ಬಂದಿದ್ದು ಅವರ ಶವ.
ಅನುಮಾನಾಸ್ಪದ ಸಾವಿನ ಪ್ರಕರಣ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಲಿಖಿತ್ ಶವವನ್ನು ಪೋಸ್ಟ್ ಮಾರ್ಟಂಗಾಗಿ ಕಳುಹಿಸಲಾಗಿದೆ. ಲಿಖಿತ್ ಸಾವಿನ ಬಗ್ಗೆ ಬಾರೀ ಆಕ್ರೋಶ ವ್ಯಕ್ತವಾಗಿದೆ. ಲಿಖಿತ್ ಅವರ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ. ಇದರ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ತನಿಖೆ ನಡೆದರೆ ಮಾತ್ರ ಸತ್ಯಸಂಗತಿ ಬಹಿರಂಗವಾಗಲಿದೆ ಎಂದು ಕುಟುಂಬದವರು ಹೇಳಿದ್ದಾರೆ.












Click it and Unblock the Notifications