ಈ ನೀಚ ನಕ್ಸಲರಿಗೆ ನಿಮ್ಮದೊಂದು ಧಿಕ್ಕಾರವಿರಲಿ
ರಾಂಚಿ, ಜ.11: ಇದು ಜಾರ್ಖಂಡಿನಲ್ಲಿ ಮಾವೋವಾದಿ ನಕ್ಸಲರ ಹೊಸ ವಿಧ್ವಂಸಕ ರೀತಿ - ಮೂರು ದಿನಗಳ ಹಿಂದೆ, ಚಕಮಕಿಯಲ್ಲಿ ಮೃತಪಟ್ಟ ಯೋಧನ ಹೊಟ್ಟೆ ಸೀಳಿ 1.5 ಕೇಜಿ ಬಾಂಬ್ ಇಟ್ಟ ನಕ್ಸಲರು. ಶವವನ್ನು ವಿಮಾನದಲ್ಲಿ ಸಾಗಿಸುವಾಗ ಅದೂ ಸ್ಫೋಟಗೊಳ್ಳಲಿ ಎಂಬ ಪಾಪಿ ಮನಸು.
ಯಾಕೋ ಇತ್ತೀಚೆಗೆ ಇಂತಹ ಅತಿರೇಕದ ಕ್ರೌರ್ಯಗಳಿಗೆ ಸಾಕ್ಷಿಯಾಗುತ್ತಿರುವುದನ್ನು ನೋಡಿದರೆ ಭಾರತ ಎತ್ತ ಸಾಗುತ್ತಿದೆ ಎಂದು ದಿಗಿಲುಂಟಾಗುತ್ತದೆ. ತಾಲೀಬಾನಿಗಳೂ ಸಹ ಇದುವರೆಗೆ ಇಂತಹ ಕ್ರೌರ್ಯ ಮೆರೆದಿಲ್ಲ.

ಬುದ್ಧ, ಗಾಂಧಿಯಂತಹ ಶಾಂತಿದೂತರು ಜನಿಸಿದ ಈ ನಾಡಿನಲ್ಲಿ ಇಂತಹ ಪರಮನೀಚ ಕ್ರೌರ್ಯವೊಂದು ನಡೆಯುತ್ತದೆ ಅಂದರೆ ಊಹಿಸಲಿಕ್ಕೂ ಸಾಧ್ಯವಾಗುತ್ತಿಲ್ಲ. ಪಕ್ಕದ ಪಾಪಿಗಳು ಇಬ್ಬರು ಯೋಧರ ರುಂಡಗಳನ್ನು ಕಡಿದಿರುವುದಕ್ಕಿಂತ, ನಮ್ಮ ಮಧ್ಯೆಯೇ ಇರುವ ಈ ನಕ್ಸಲರು ನಡೆಸಿರುವ ಕ್ರೌರ್ಯ ನಿಜಕ್ಕೂ ಹೇಯ, ಘನಘೋರ.
ಅಲ್ರೀ ಯೋಧರ ಹೊಟ್ಟೆ ಸೀಳಿ, ಅದರಲ್ಲಿ ಬಾಂಬುಗಳನ್ನು ಹುದುಗಿಸಿಡುವುದು ಅಂದರೇನು? ನಕ್ಸಲ್ ವಾದದ ಹೆಸರಿನಲ್ಲಿ ಇವರು ಹೊಟ್ಟೆಗೆ ಏನು ತಿನ್ನುತ್ತಿದ್ದಾರೆ. ಇವರ ಹೋರಾಟ ಎಷ್ಟೇ ಸತ್ಯ-ಪರ, ನ್ಯಾಯಯುತ ಎಂದು ಪ್ರತಿಪಾದಿಸಿದರೂ ಯಾವ ನಕ್ಸಲ್ ಸಿದ್ಧಾಂತವೂ ಈ ಪರಿಯ ಕ್ರೌರ್ಯವನ್ನು ಪೊರೆಯುವುದಿಲ್ಲ. ಧಿಕ್ಕಾರವಿರಲಿ ಈ ನೀಚ ನಕ್ಸಲರಿಗೆ.
ಆಮೇಲೇನಾಯಿತು?: ಜಾರ್ಖಂಡ್‌ನ ಕರ್ಮತೀಯ ದಟ್ಟ ಅಡವಿಯಲ್ಲಿ ನಕ್ಸಲರು ಮತ್ತು ಸಿಆರ್‌ಪಿಎಫ್ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಘಟನೆಯಲ್ಲಿ ಕೆಲ ನಕ್ಸಲರು ಮತ್ತು 10 ಸಿಆರ್‌ಪಿಎಫ್ ಯೋಧರು ಬಲಿಯಾಗಿದ್ದರು. ಹೀಗೆ ಬಲಿಯಾಗಿದ್ದ 5 ಯೋಧರ ದೇಹಗಳು ಬುಧವಾರ ಕೂಂಬಿಂಗ್ ನಡೆಸುತ್ತಿದ್ದ ಸಿಆರ್‌ಫಿಎಫ್ ಸೈನಿಕರಿಗೆ ಸಿಕ್ಕಿತ್ತು.
ಗುರುವಾರ ಬೆಳಗ್ಗೆ ಈ ಯೋಧರ ಶವ ಪರೀಕ್ಷೆಗೆ ವೈದ್ಯರು ಮುಂದಾದಾಗ ಹೊಟ್ಟೆಯೊಳಗೆ ಏನೋ ಅಡಗಿಸಿಟ್ಟ ಸಂಶಯ ವೈದ್ಯರನ್ನು ಕಾಡಿತ್ತು. ಕೂಡಲೇ ಯೋಧನ ದೇಹವನ್ನು ಎಕ್ಸ್‌ರೇಗೆ ಗುರಿಪಡಿಸಲಾಯಿತು. ಈ ವೇಳೆ ಆತನ ದೇಹದಲ್ಲಿ ಬಾಂಬ್ ಇರಿಸಿರುವುದು ಬೆಳಕಿಗೆ ಬಂದಿತ್ತು.
ಬಳಿಕ ಬಯಲಿನಲ್ಲಿ ಯೋಧನ ಹೊಟ್ಟೆಗೆ ಹಾಕಲಾಗಿದ್ದ ಹೊಲಿಗೆಯನ್ನು ಬಾಂಬ್ ನಿಷ್ಕ್ರಿಯ ಸಿಬ್ಬಂದಿ ತೆರೆದರು. ಈ ವೇಳೆ ಇನ್ನೂ ಸ್ಫೋಟಗೊಳ್ಳದ ಸ್ಥಿತಿಯಲ್ಲಿದ್ದ 1.5 ಕೆಜಿ ತೂಕದಷ್ಟು ಸುಧಾರಿತ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿವೆ. ಹೀಗೆ ಹೊಟ್ಟೆಯಲ್ಲಿ ಬಾಂಬ್ ಪತ್ತೆಯಾದ ಯೋಧನನ್ನು ಉತ್ತರ ಪ್ರದೇಶ ಮೂಲದ ಬಾಬುಲಾಲ್ ಪಟೇಲ್ ಎಂದು ಗುರುತಿಸಲಾಗಿದೆ.
ಅದಕ್ಕೂ ಮುನ್ನ ವಿಮಾನದಲ್ಲಿ ಇದೇ ಬಾಂಬು ತುಂಬಿದ್ದ ಯೋಧನ ಶವ ರವಾನೆಯಾಗಿದೆ. ಆಗೇನಾದರೂ ಅನಾಹುತ ಸಂಭವಿಸಿದ್ದರೆ. ಇಂತಹ ವಿಧ್ವಂಸಕ ತಂತ್ರಗಾರಿಕೆಯನ್ನು ನಕ್ಸಲರು ಭಾರತದಲ್ಲಿ ನಡೆಸಿರುವುದು ಇದೇ ಮೊದಲು.












Click it and Unblock the Notifications