ಸ್ಕರ್ಟ್ ಧರಿಸಿದ ಹುಡುಗರ ಕಂಡು ಬೆಚ್ಚಿಬೀಳದಿರಿ

ಮಹಿಳೆಯರು, ಅದರಲ್ಲೂ ಯುವತಿಯ ತಮಗಿಷ್ಟವಾದ (ಪ್ರಚೋದನಕಾರಿಯಾದ) ಉಡುಪು ಧರಿಸಿದ್ದರಿಂದಲೇ ಅತ್ಯಾಚಾರಗಳು ನಡೆಯುತ್ತಿವೆಯಾ? ಯುವತಿಯರು ತಡರಾತ್ರಿ ನಿರ್ಭಿಡೆಯಾಗಿ ಅಡ್ಡಾಡುತ್ತಿರುವುದರಿಂದಲೇ ದೌರ್ಜನ್ಯ ನಡೆಯುತ್ತಿದೆಯಾ? ಮಹಿಳೆಯರ 'ತಾರಾ'ಬಲ ಕುಗ್ಗಿದ್ದರಿಂದಲೇ ಬಲಾತ್ಕಾರಗಳಾಗುತ್ತಿವೆಯಾ? ಅಥವಾ ಮಹಿಳೆಯರು ಮಹಿಳೆಯರಾಗಿದ್ದಕ್ಕೇ ಇದೆಲ್ಲ ಅನಾಚಾರ ನಡೆಯುತ್ತಿದೆಯಾ?
ಸದ್ಯಕ್ಕೆ ಈ ಪ್ರಶ್ನೆಗಳಿಗೆ ಯಾವುದೇ ಉತ್ತರವಿಲ್ಲ. ಆದರೆ, ಯುವತಿಯರು ಸ್ಕರ್ಟ್ ಧರಿಸುತ್ತಿರುವುದರಿಂದಲೇ ಅತ್ಯಾಚಾರಗಳು ನಡೆಯುತ್ತಿವೆ ಎಂಬ ಹೇಳಿಕೆಯಿಂದ ಕುದ್ದುಹೋಗಿರುವ ಬೆಂಗಳೂರಿನ ಯುವಕ, ಯುವತಿಯರ ಪಡೆಯೊಂದು ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾಗಿದೆ. ಅದೇನೆಂದರೆ, ಹುಡುಗರೇ ಸ್ಕರ್ಟ್ ಧರಿಸಿ ನಿಲ್ಲುವುದು. ಹುಡುಗರು ಸ್ಕರ್ಟ್ ಧರಿಸಿದರೆ ಅವರ ಮೇಲೆ ಅತ್ಯಾಚಾರ ಮಾಡಲು ಸಾಧ್ಯವೆ? ಎಂದು ಪ್ರಶ್ನಿಸುತ್ತಿದ್ದಾರೆ.
ಇಂಥ ವಿಚಿತ್ರ ಮತ್ತು ವಿನೂತನವಾದ ಐಡಿಯಾ ಬಂದಿದ್ದು 25 ವರ್ಷದ ಪ್ರಕಾಶಕಿಯಾಗಿರುವ ಯವತಿ ಸಮರ್ಪಿತಾ ಸಮದ್ದಾರ್ ಎಂಬಾಕೆಗೆ. ದೆಹಲಿಯಲ್ಲಿ 23 ವರ್ಷದ ಯುವತಿಯ ಮೇಲೆ ದೌರ್ಜನ್ಯ ನಡೆದ ನಂತರ ರಾಜಕೀಯ ನಾಯಕರು, ಧಾರ್ಮಿಕ ಗುರುಗಳು ತೋರುತ್ತಿರುವ ಅಸಡ್ಡೆಯಿಂದ ಕೆಂಡಾಮಂಡಲವಾಗಿರುವ ಸಮರ್ಪಿತಾ, ಹುಡುಗರನ್ನು ಒಗ್ಗೂಡಿಸಿಕೊಂಡು ಈ ಪ್ರತಿಭಟನೆಗೆ ಮುಂದಾಗಿದ್ದಾರೆ.
"ಅತ್ಯಾಚಾರ ನಿಯಂತ್ರಿಸಬೇಕಿದ್ದರೆ ಹುಡುಗಿಯರು ಸ್ಕರ್ಟ್ ಹಾಕಿಕೊಳ್ಳುವುದನ್ನು ನಿಷೇಧಿಸಬೇಕು ಎಂಬ ಮಾತು ಕೇಳಿಬರುತ್ತಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸಂಗತಿಯೇ ನನಗೆ ಕೋಪ ತರಿಸಿರುವುದು. ಬಹುದಿನಗಳಿಂದ ಈ ಸಮಸ್ಯೆ ಕುರಿತು ಏನಾದರೂ ಮಾಡಬೇಕೆಂಬ ಬಯಕೆಯಿತ್ತು. ಈಗ ಸ್ಕರ್ಟ್ ದಿ ಇಶ್ಯೂ ಪ್ರತಿಭಟನೆಗೆ ಮುಂದಾಗಿದ್ದೇವೆ" ಎನ್ನುತ್ತಾರೆ ಸಮರ್ಪಿತಾ.
ಅಸಲಿಗೆ, ಈ ವಿಚಿತ್ರ ಐಡಿಯಾ ಬಂದಿದ್ದು ಸಮರ್ಪಿತಾ ಅವರ ಸ್ನೇಹಿತಗೆ. 'ಸ್ಕರ್ಟ್ ಬ್ಯಾನ್ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಹುಡುಗರೇ ಸ್ಕರ್ಟ್ ಧರಿಸಿದರೆ ಅವರ ಮೇಲೂ ಅತ್ಯಾಚಾರ ನಡೆಯುತ್ತದಾ' ಎಂದು ಚಿಂತಿಸಿದ ಸಮರ್ಪಿತಾ ಸ್ನೇಹಿತ, ಈ ರೀತಿ ಪ್ರತಿಭಟಿಸಲು ಸಲಹೆ ನೀಡಿದ್ದಾರೆ. ಈ ಅಭಿಯಾನಕ್ಕೆ ಫೇಸ್‌ಬುಕ್‌ನಲ್ಲಿ ನೂರಾರು ಯುವಕ, ಯುವತಿಯರಿಂದ ಬೆಂಬಲ ಸಿಕ್ಕಿದೆಯಂತೆ.
ಇಂಥ ಯೋಚನೆ ಬಂದು ಫೇಸ್ ಬುಕ್ಕಿನಲ್ಲಿ ಹಾಕಿದಾಗ, ಹೆಚ್ಚಾಗಿ ಯುವತಿಯರಿಂದಲೇ ಸ್ಪಂದನೆ ಬಂದಿತು. ಆದರೆ, ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವಾಗ ಹುಡುಗರು ಸುಮ್ಮನೆ ಕೂತರೆ ಹೇಗೆ? ಹಾಗಾಗಿ ಹುಡುಗರಿಗೆ ಸ್ಕರ್ಟ್ ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕೋರಲಾಗಿತ್ತು ಎನ್ನುತ್ತಾರೆ ಸಮರ್ಪಿತಾ. ಇದರಲ್ಲಿ ಮಹಿಳೆಯರೂ ಭಾಗವಹಿಸುತ್ತಿದ್ದಾರೆ.
ಶನಿವಾರ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ನೂರಾರು ಯುವಕರು ಬ್ರಿಗೇಡ್ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಸ್ಕರ್ಟ್ ಹಾಕಿಕೊಂಡು ಅಡ್ಡಾಡಲಿದ್ದಾರೆ. ಬ್ರಿಗೇಡ್ ರಸ್ತೆಯಲ್ಲಿ ಶನಿವಾರ ಈ ಅಚ್ಚರಿ ಕಂಡು ಬೆಚ್ಚಿಬೀಳಬೇಡಿ. ಇಂಥ ಪ್ರತಿಭಟನೆಯಿಂದ ಅತ್ಯಾಚಾರಗಳನ್ನು ತಡೆಯಲು ಅಥವಾ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾ?












Click it and Unblock the Notifications