ಯಾವ ಲೆಕ್ಕಾಚಾರದ ಮೇಲೆ ಶೆಟ್ಟರ್ ಸರಕಾರ ನಿಂತಿದೆ!

ಬಿಜೆಪಿ ಸರಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸ ಬೇಕಾಗಿರುವುದು ಪ್ರಮುಖವಾಗಿ ವಿರೋಧ ಪಕ್ಷ ಕಾಂಗ್ರೆಸ್. ಸಂಖ್ಯಾಬಲದ ಕೊರತೆಯಿಂದ ನಾವು ಅವಿಶ್ವಾಸ ಮಂಡಿಸುವ ಸ್ಥಿತಿಯಲಿಲ್ಲ ಎಂದು ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷರು ಸ್ಪಷ್ಟ ಪಡಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಬಿಜೆಪಿಗಿದ್ದ ಉಚ್ಛ್ರಾಯ ಸ್ಥಿತಿಯೇ ಬೇರೆ ಈಗಿನ ಸ್ಥಿತಿಯೇ ಬೇರೆ. ಅಲ್ಲಲ್ಲಿ ಹರಿದು ಹಂಚಿ ಹೋಗಿರುವ ಬಿಜೆಪಿಗೆ ಒಂದು ವೇಳೆ ಬಹುಮತ ಸಾಬೀತು ಪಡಿಸಬೇಕಾದ ಪರಿಸ್ಥಿತಿ ಉದ್ಭವವಾದರೆ ಕೆಳಗಿನ ಲೆಕ್ಕಾಚಾರದ ಪ್ರಕಾರ ಕಷ್ಟ ಕಷ್ಟ..
ಈ ಸತ್ಯ ಗೊತ್ತಿಲ್ಲದಷ್ಟು ದಡ್ಡರು ಕಾಂಗ್ರೆಸಿಗರಲ್ಲ. ಆದರೂ ಸರಕಾರ ಉರುಳುವುದು ಅವರಿಗೆ ಬೇಕಾಗಿಲ್ಲ, ಅವರಿಗಂತಲ್ಲಾ, ಯಾವ ಶಾಸಕರಿಗೂ ಬೇಕಾಗಿಲ್ಲ. ಅದಕ್ಕೆ ಹತ್ತು ಹಲವು ಕಾರಣ, ಸಬೂಬುಗಳಿರಬಹುದು.
ಒಂದು ವೇಳೆ ಘನವೆತ್ತ ರಾಜ್ಯಪಾಲರು ಜಗದೀಶ್ ಶೆಟ್ಟರ್ ಸರಕಾರಕ್ಕೆ ಬಹುಮತ ಸಾಬೀತು ಪಡಿಸಿ ಎಂದು ಸೂಚಿಸಿದರೆ ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರ ಉಳಿಯತ್ತೋ, ಪತನವಾಗುತ್ತೋ?
ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಬೇಕಾದರೂ ಕಂಡು ಹಿಡಿಯಬಹುದು, ಆದರೆ ಹೆಣ್ಣಿನ ಒಳ ಮರ್ಮವನ್ನಲ್ಲ ಎನ್ನುವ ಹಾಗೆ ಪ್ರಸಕ್ತ ವಿಧಾನಸಭೆಯಲ್ಲಿ ಕ್ಯಾಬಿನೆಟ್ ಸಚಿವರ, ಸಚಿವೆಯ, ಶಾಸಕರ ನಿಷ್ಠೆ ಯಾರಿಗಿರಬಹುದು ಎಂದು ಲೆಕ್ಕ ಹಾಕುವುದು ಅಷ್ಟು ಸುಲಭದ ಕೆಲಸವಲ್ಲ.
ಬಿಜೆಪಿಯಲ್ಲಿ ಇದ್ದುಕೊಂಡು ಕೆಜೆಪಿಗೆ ಮತ್ತು ಬಿಎಸ್ಆರ್ ಪಕ್ಷಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲ ಸೂಚಿಸಿರುವ ಶಾಸಕರು/ಸಚಿವರುಗಳು ಒಂದು ಕಡೆಯಾದರೆ ಪಕ್ಷೇತರ ಅಭ್ಯರ್ಥಿಗಳು ಇನ್ನೊಂದು ಕಡೆ.
ಒಂದು ವೇಳೆ ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಸಂಖ್ಯಾಬಲದ ಕೊರತೆ ಕಂಡುಬಂದು, ಆದರೂ ಪೂರ್ಣಾವಧಿ ಆಡಳಿತ ನಡೆಸಿಯೇ ತೀರೋಣ ಎಂದು ಬಿಜೆಪಿ ಬಯಸಿದರೆ ಮುಂದೆ ನಡೆಯಬಹುದಾದ 'ಕುದುರೆ ವ್ಯಾಪಾರಕ್ಕೆ' ಮುನ್ನ ಒಂದು ಲೆಕ್ಕಾಚಾರ ಹೀಗಿದೆ ನೋಡಿ:
ಒಟ್ಟು ಸ್ಥಾನ - 225
ಖಾಲಿ ಇರುವ ಕ್ಷೇತ್ರಗಳು - 2 (ಯಡಿಯೂರಪ್ಪ - ಶಿಕಾರಿಪುರ, ಹಾಲಾಡಿ ಶ್ರೀನಿವಾಸ ಶೆಟ್ಟಿ- ಕುಂದಾಪುರ)
ಬಿಜೆಪಿ - 117
ಕಾಂಗ್ರೆಸ್ - 71
ಜೆಡಿಎಸ್ - 26
ಪಕ್ಷೇತರರು - 6 ( ಶ್ರೀರಾಮುಲು, ಡಿ ಸುಧಾಕರ್, ವೆಂಕಟರಮಣಪ್ಪ, ಗೂಳಿಹಟ್ಟಿ ಶೇಖರ್, ವರ್ತೂರು ಪ್ರಕಾಶ್, ಶಿವರಾಜ್ ತಂಗಡಗಿ)
ನಾಮನಿರ್ದೇಶನ -1
ಸ್ಪೀಕರ್ - 1 (ಬಿಜೆಪಿ ಬೆಂಬಲಿತ)
ಬಹುಮತಕ್ಕೆ ಬೇಕಾಗಿರುವುದು 113
ಬಿಜೆಪಿಯಲ್ಲಿನ ಈಗಿನ 117 ಶಾಸಕರ ಪೈಕಿ 14 ಜನ ಬಿಜೆಪಿ ಶಾಸಕರು ಕೆಜೆಪಿ ಜೊತೆ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಅಲ್ಲಿಗೆ ಬಿಜೆಪಿಯ ಬಲ 103ಕ್ಕೆ ಇಳಿಯಿತು.
ಇದಲ್ಲದೆ ಶ್ರೀರಾಮುಲು ಪಕ್ಷದ ಜೊತೆ ಬಿಜೆಪಿಯ ಮೂರು ಜನ ಶಾಸಕರಿದ್ದಾರೆ. ಅವರೆಂದರೆ ಸೋಮಶೇಖರ್ ರೆಡ್ಡಿ, ಕೂಡ್ಲಗಿ ನಾಗೇಂದ್ರ ಮತ್ತು ಸುರೇಶ್ ಬಾಬು. ಅಲ್ಲಿಗೆ ಬಿಜೆಪಿಯ ಸಂಖ್ಯಾಶಾಸ್ತ್ರ 100ಕ್ಕೆ ಇಳಿಯಿತು.
ಸ್ಪೀಕರ್ ಮತ್ತು ಒಬ್ಬರು ನಾಮನಿರ್ದೇಶನ ಶಾಸಕರ ಬೆಂಬಲ ಬಿಜೆಪಿಗೆ ದಕ್ಕಿದರೂ ಅಲ್ಲಿಗೆ ಒಟ್ಟು ಲೆಕ್ಕ 102.
ಆರು ಜನ ಪಕ್ಷೇತರ ಶಾಸಕರಲ್ಲಿ ಶ್ರೀರಾಮುಲು ಹೊರತು ಪಡಿಸಿದರೆ ಉಳಿದ ಐದು ಜನ ಶಾಸಕರು. ಅದರಲ್ಲಿ ಒಬ್ಬರು ವರ್ತೂರು ಪ್ರಕಾಶ್, ಅವರೇ ಹೇಳಿದಂತೆ 'ಅದ್ಯಾವುದೋ ಕಿತ್ತೋದ' ಜವಳಿ ಖಾತೆಯನ್ನು ಹೊಂದಿದ್ದರೂ ಅವರ ಅಚಲ ನಿಷ್ಠೆ ರಾಮುಲು ಕಡೆಗೆ.
ಉಳಿದ ನಾಲ್ಕು ಶಾಸಕರು ಯಾವ ಕಾರಣಕ್ಕೂ ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಈಗಾಗಲೇ ಹೇಳಿಕೆ ನೀಡಿದ್ದಾರೆ. ಹಾಗೇ ಫಾರಿನ್ ರಿಟರ್ನ್ ಎಸ್ ಎಂ ಕೃಷ್ಣ ಮನೆಯ ಗಾರ್ಡನಿನಲ್ಲಿ ಸುತ್ತಾಡಿ ಕೊಂಡೂ ಬಂದಿದ್ದಾರೆ.
ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿ ಒಂದು ವೇಳೆ ಪಕ್ಷೇತರರು ಬಿಜೆಪಿಗೆ ಬೆಂಬಲಿಸಿ, ಬೇರೇನಾದರೂ ವ್ಯವಹಾರ ಕುದುರಿ ಜಗದೀಶ್ ಶೆಟ್ಟರ್ ಸರಕಾರ ಉಳಿದರೆ ಅದು ಊಹೆಗೂ ನಿಲುಕದ ರಾಜಕೀಯ ಲೆಕ್ಕಾಚಾರವಲ್ಲದೆ ಮತ್ತೇನು?












Click it and Unblock the Notifications