ಸಿಎಂ ಶೆಟ್ಟರ್ ಗೆ ಸುದೀರ್ಘ ಪತ್ರ ಬರೆದ ಶೋಭಾ ಮೇಡಂ

ಬೆಂಗಳೂರು,ಜ.3: ಆಡಳಿತಾರೂಢ ಬಿಜೆಪಿ ಸರಕಾರದ ಏಕೈಕ ಮಹಿಳಾ ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಬುಧವಾರ ಮೂರು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ.

ಆದರೆ ಕುತೂಹಲದ ಸಂಗತಿಯೆಂದರೆ ದೆಹಲಿ ಅತ್ಯಾಚಾರ ಬಾಧಿತೆ ಸಿಂಗಾಪುರದಲ್ಲಿ ಮೃತಪಟ್ಟ ಸುದ್ದಿ ಕೇಳಿಬರುತ್ತಿದ್ದಂತೆ 'ಕರ್ನಾಟಕದಲ್ಲಿ ಅತ್ಯಾಚಾರ ಪ್ರಕರಣಗಳ ವಿರುದ್ಧ ಕಠಿಣಾತಿಕಠಿಣ ಕ್ರಮ ಕೈಗೊಳ್ಳಲಾಗುವುದು. ಹೆಣ್ಣುಮಕ್ಕಳೇ ಭಯಪಡಬೇಡಿ' ಎಂದೆಲ್ಲ ರೋಷಾವೇಶದಿಂದ ಮಾತನಾಡಿದ್ದ ಗೃಹ ಸಚಿವ ಆರ್ ಅಶೋಕ್ ಅವರು ರಾಜ್ಯದಲ್ಲಿ ನಿರಂತರವಾಗಿ ಅಂತಹ ಹೇಯ ಪ್ರಕರಣಗಳು ಜರುಗುತ್ತಿದ್ದರೂ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಹಿಂದೇಟುಹಾಕುತ್ತಿದ್ದಾರೆ.

ಅಷ್ಟೇ ಅಲ್ಲ. ಅತ್ಯಾಚಾರ ಮಾಡಿದ ಆರೋಪಿ ವಿರುದ್ಧ ಇನ್ನಿತರೆ ಯಾವುದೇ ದೂರು ಇಲ್ಲದಿದ್ದರೆ ಆತನ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಲು ಸಾಧ್ಯವೇ ಇಲ್ಲ ಎಂದು ಈ ಹಿಂದೆ ತಾವೇ ಹೆಣ್ಣುಮಕ್ಕಳಿಗೆ ನೀಡಿದ್ದ ವಚನದಿಂದ ಹಿಂದೆ ಸರಿದಿದ್ದಾರೆ. ಇದರಿಂದ ಈಗ ಶೋಭಾ ಅವರು ಬರೆದಿರುವ ಪತ್ರ ಯಾವ ಪರಿಣಾಮ ಬೀರುತ್ತದೋ ಕಾದುನೋಡಬೇಕಾಗಿದೆ.

ಗಮನಾರ್ಹವೆಂದರೆ ಸಚಿವೆ ಶೋಭಾ ಅವರು ಇಂತಹ ಗಂಭೀರ ವಿಷಯವನ್ನು ಸಚಿವ ಸಂಪುಟದಲ್ಲೇ ಚರ್ಚಿಸುವುದನ್ನು ಬಿಟ್ಟು ಹೀಗೆ ತಾವು ಬರೆದ ಪತ್ರವು ಮುಖ್ಯಮಂತ್ರಿ ಕೈ ಸೇರುವ ಮುನ್ನವೇ ಮಾಧ್ಯಮಗಳಿಗೆ ದೊರಕುವಂತೆ ಮಾಡಿರುವುದರ ಪುರುಷಾರ್ಥವೇನು? ಎಂಬುದು ಆಶ್ಚರ್ಯಕಾರಿಯಾಗಿದೆ. ಒಟ್ಟಿನಲ್ಲಿ ಅತ್ಯಾಚಾರದಂತಹ ಗಂಭೀರ ವಿಷಯವನ್ನೂ ಚುನಾವಣೆ ಕಾಲದಲ್ಲಿ ಘನಂಧಾರಿ ಸಚಿವರುಗಳು ರಾಜಕೀಯ ದಾಳವನ್ನಾಗಿ ಮಾಡಿಕೊಂಡಿದ್ದಾರೆ.

molestation-bjp-minister-shobha-karandlaje-letter-to-cm

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಬರೆದಿರುವ ಪತ್ರದ ಪೂರ್ಣಪಾಠ ಇಲ್ಲಿದೆ.

ಸನ್ಮಾನ್ಯ ಮುಖ್ಯಮಂತ್ರಿಯವರಿಗೆ,
ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಜಾಸ್ತಿಯಾಗುತ್ತಿರುವುದು ತುಂಬಾ ಆತಂಕಕಾರಿ ಬೆಳವಣಿಗೆ. ನಮ್ಮ ಸಮಾಜದಲ್ಲಿ ನಿರಂತರವಾಗಿ ಇದು ನಡೆಯುತ್ತಾ ಬಂದಿದ್ದರೂ ದೆಹಲಿಯ ಘಟನೆ ದೇಶದ ಕಣ್ತೆರೆಸಿದೆ. ದೌರ್ಜನ್ಯದ ಹಲವಾರು ಪ್ರಕರಣಗಳು ಮುಚ್ಚಿ ಹೋಗುತ್ತಿದ್ದ ಸಂದರ್ಭದಲ್ಲಿ ದೆಹಲಿಯ ಪ್ರಕರಣದ ವಿರುದ್ಧ ನಡೆದ ಹೋರಾಟ, ಧ್ವನಿ ಇಲ್ಲದ ಹಲವಾರು ಮಹಿಳೆಯರಿಗೆ ಧೈರ್ಯ ತುಂಬಿದೆ. ರಾಜ್ಯದಲ್ಲೂ ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಅಪ್ರಾಪ್ತ ವಯಸ್ಕ ಹುಡುಗಿಯರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿದ್ದರೂ ಸೂಕ್ತ ಕಾನೂನಿನ ನೆರವು ಈ ಶೋಷಿತರಿಗೆ ಸಿಗುತ್ತಿಲ್ಲ. ಕಳೆದೆರೆಡು ತಿಂಗಳಿನಲ್ಲಿಯೇ 15ಕ್ಕಿಂತ ಹೆಚ್ಚು ಪ್ರಕರಣಗಳು ರಾಜ್ಯದಲ್ಲಿ ದಾಖಾಲಾಗಿವೆ. ಹಾಸನದಲ್ಲಿ ಚಿಕ್ಕ ಬಾಲಕಿಯನ್ನು ಒಂದು ವಾರಕ್ಕಿಂತಲೂ ಹೆಚ್ಚು ಕಾಲ ಕೂಡಿಟ್ಟು ಸಾಮೂಹಿಕವಾಗಿ ನಡೆಸಿದ ಅತ್ಯಾಚಾರ ಮನ ಕಲಕುವಂತಹುದು. ಇನ್ನು ಹಲವಾರು ಬಾರಿ, ಅತ್ಯಾಚಾರ ಮಾಡಿ ಕೊಲೆ ಮಾಡಿ ಪರಾರಿಯಾಗುತ್ತಿರುವುದನ್ನು ನೋಡಿದರೆ ಜನರಿಗೆ ಕಾನೂನಿನ ಭಯ ಇಲ್ಲದಂತಾಗಿದೆ.

ಇನ್ನೂ ಆತಂಕ ತರುವ ವರದಿಯೆಂದರೆ ರಕ್ಷಿಸಬೇಕಾದ ಪೋಲಿಸರೇ ಪೋಲಿಸ್‌ ಸ್ಟೇಷನ್‌ಗೆ ಹೋದ ಮಹಿಳೆಯರ ಮೇಲೆ ಅತ್ಯಾಚಾರ ವೆಸಗುತ್ತಿರುವುದು ನಮ್ಮ ವ್ಯವಸ್ಥೆಯ ವೈಫ‌ಲ್ಯಕ್ಕೆ ಹಿಡಿದಿರುವ ಕೈಗನ್ನಡಿ. ಇನ್ನು ಹಲವಾರು ಸಂದರ್ಭದಲ್ಲಿ ಪೋಲಿಸ್‌ ಸ್ಟೇಷನ್‌ಗೆ ದೂರು ಕೊಟ್ಟರೂ ಕೇಸ್‌ ದಾಖಲಿಸದೆ ಅಥವಾ ವಿಳಂಬ ಧೋರಣೆ ಅನುಸರಿಸಿ ಪ್ರಕರಣವನ್ನೇ ಮುಚ್ಚಿ ಹಾಕಿರುವ ಪ್ರಕರಣಗಳೂ ಇವೆ. ಬೇರೆ ಬೇರೆ ಕಡೆ ಪ್ರಭಾವಿಗಳೇ ಆರೋಪಿಗಳಿಗೆ ರಕ್ಷಣೆ ಕೊಡುವುದೂ ನಡೆದಿದೆ. ಇವತ್ತು ರಾಜ್ಯದಲ್ಲಿ ದಾಖಲಾಗುತ್ತಿರುವ ಬಹಳಷ್ಟು ಪ್ರಕರಣಗಳಲ್ಲಿ ಪೋಲಿಸರು ಪೂರ್ಣ ನಿಷ್ಕ್ರಿಯರಾಗಿರುವುದು ಕಂಡು ಬರುತ್ತದೆ. ರಾಜ್ಯ ಸರ್ಕಾರವು ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕಾದ ಅನಿವಾರ್ಯತೆ ಮತ್ತು ಅಗತ್ಯತೆ ಇಂದು ಸ್ಪಷ್ಟವಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂಬ ಭಯ ಬಂದರೆ ಮಹಿಳೆಯರ ಮೇಲಿನ ದೌರ್ಜನ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಈಗಲಾದರೂ ರಾಜ್ಯ ಸರ್ಕಾರ ಕಾನೂನನ್ನು ತಿದ್ದುಪಡಿ ಮಾಡಿ ಬಲಗೊಳಿಸುವ ಅಗತ್ಯವನ್ನು ಮನಗಾಣಬೇಕೆಂದು ಮತ್ತು ಈ ಕೆಳಗಿನ ಕೆಲವು ಅಂಶಗಳಿಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.

1. ದೌರ್ಜನ್ಯಕ್ಕೊಳಗಾದ ಮಹಿಳೆ ಕೇಸ್‌ ದಾಖಲಿಸಲು ಪೋಲಿಸ್‌ ಸ್ಟೇಷನ್‌ನಲ್ಲಿ ಪೂರಕ ವಾತಾವರಣ ನಿರ್ಮಾಣ ಮಾಡಬೇಕು.

2. ಗ್ರಾಮೀಣ ಪ್ರದೇಶದಲ್ಲಿ ತಾಲ್ಲೂಕಿಗೊಂದು ಪೋಲಿಸ್‌ ಸ್ಟೇಷನ್‌ನಲ್ಲಿ ಮತ್ತು ನಗರದಲ್ಲಿ ಎಲ್ಲಾ ಪೋಲಿಸ್‌ ಠಾಣೆಗಳಲ್ಲಿ ಮಹಿಳೆಯರು ದೂರು ಕೊಡಲು ಪ್ರತ್ಯೇಕವಾದ ವಿಭಾಗ ನಿರ್ಮಾಣ ಮಾಡಬೇಕು. ಅದಕೊಬ್ಬರು ಪೋಲಿಸ್‌ ಅಧಿಕಾರಿಯನ್ನು ಜವಾಬ್ದಾರರನ್ನಾಗಿ ಮಾಡಬೇಕು.

3. ಎಲ್ಲಾ ಪೋಲಿಸ್‌ ಠಾಣೆಗಳಲ್ಲಿ ಸಿ.ಸಿ. ಕ್ಯಾಮೆರಾವನ್ನು ಕಡ್ಡಾಯವಾಗಿ ಅಳವಡಿಸಬೇಕು. ಠಾಣೆಗೆ ಬರುವ ಎಲ್ಲಾ ಕೇಸ್‌ಗಳ ಪಾರದರ್ಶಕತೆಯನ್ನು ಕಾಪಾಡಲು ಮತ್ತು ಸ್ಟೇಷನ್‌ಗಳಲ್ಲಿ ಅಪರಾಧಿಗಳು ಶಾಮೀಲಾಗುವುದನ್ನು ಸ್ವಲ್ಪಮಟ್ಟಿಗೆ ತಡೆಯಲು ಈ ಸಿ.ಸಿ.ಕ್ಯಾಮೆರದ ಅನುಕೂಲತೆಯನ್ನು ಪಡೆಯುವುದು.

4. ಮಹಿಳಾ ಆಯೋಗಕ್ಕೆ ಹೆಚ್ಚಿನ ಅಧಿಕಾರವನ್ನು ನೀಡುವುದು.

5. ಮಹಿಳಾ ದೌರ್ಜನ್ಯದ ಮೇಲಿರುವ ಈಗಿರುವ ಕಾನೂನನ್ನು ತಿದ್ದುಪಡಿ ಮಾಡಿ ಬಿಗಿಯಾದ ಕಾನೂನನ್ನು ಮಾಡುವುದು.

6. ಮಹಿಳೆಯರು ಪುರುಷ ಅಧಿಕಾರಿಗಳು, ಪುರುಷ ಡಾಕ್ಟರ್‌, ಪುರುಷ ನ್ಯಾಯಾಧೀಶರೊಂದಿಗೆ ತಮಗಾದ ಅನ್ಯಾಯದ ಬಗ್ಗೆ ಹೇಳಿಕೊಳ್ಳುವುದು ಕಷ್ಟಸಾಧ್ಯ. ಅದಕ್ಕಾಗಿ ಪ್ರತ್ಯೇಕವಾದ ಒಂದು ವ್ಯವಸ್ಥೆ ನಿರ್ಮಾಣ ಮಾಡಿ ಅದರಲೊಬ್ಬರು ನಿವೃತ್ತ ನ್ಯಾಯಾಧೀಶರು, ಒಬ್ಬರು ಪೋಲಿಸ್‌ ಅಧಿಕಾರಿ, ಸ್ವಯಂಸೇವಾ ಸಂಸ್ಥೆ ಪ್ರಮುಖರು, ವೈದ್ಯೆ ಇವರನ್ನೊಳಗೊಂಡ ಒಂದು ಸಮಿತಿಯನ್ನು ಪ್ರತಿ ಜಿಲ್ಲೆಯಲ್ಲಿ ರಚನೆ ಮಾಡಬೇಕು. ಮಹಿಳಾ ದೌರ್ಜನ್ಯದ ಪ್ರಕರಣಗಳು ನಡೆದಾಗ ಮಹಿಳೆಯರು ನೇರವಾಗಿ ಭೇಟಿ ಮಾಡುವ, ಅದನ್ನು ತನಿಖೆ ಮಾಡುವ ಮತ್ತು ಶೀಘ್ರ ಕ್ರಮ ಕೈಗೊಳ್ಳಲು ಅನುಕೂಲವಾಗುವ ವ್ಯವಸ್ಥೆ ನಿರ್ಮಾಣ ಮಾಡಬೇಕು.

7. ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ಶಾಶ್ವತವಾದ ಪರಿಹಾರ ಕೊಡಬೇಕು ಮತ್ತು ಅತ್ಯಾಚಾರಕ್ಕೊಳಗಾದ ಮಹಿಳೆಗೆ ಅತ್ಯಾಚಾರ ಮಾಡಿದ ವ್ಯಕ್ತಿಗಳ ಚರ ಮತ್ತು ಸ್ಥಿರಾಸ್ತಿಯಲ್ಲಿ ಅರ್ಧ ಭಾಗ ಕೊಡುವ ಕಾನೂನನ್ನು ಮಾಡಬೇಕು.

8. ಅತ್ಯಾಚಾರಕ್ಕೊಳಗಾದ ಮಹಿಳೆ ನಮ್ಮ ಸಮಾಜದಲ್ಲಿ ದಿನಾ ಸಾಯಬೇಕಾಗುತ್ತದೆ. ಅವಮಾನ ಅನುಭವಿಸಬೇಕಾಗುತ್ತದೆ. ಅತ್ಯಾಚಾರ ಮಾಡುವ ಮಾನಸಿಕತೆಯ ಪುರುಷನಿಗೆ ಭಯ ನಿರ್ಮಾಣವಾಗಬೇಕಾದರೆ ಸರ್ಜಿಕಲ್‌ ಕ್ಯಾಷ್ಟ್ರೇಷನ್‌ (ಶ್ವಾಶತ ಪುರುಷತ್ವ ಹರಣ) ಶಸ್ತ್ರ ಚಿಕಿತ್ಸೆಯ ಶಿಕ್ಷೆ ನೀಡಬೇಕು. ಈ ಶಿಕ್ಷೆ ನೀಡಬೇಕಾದರೆ ರಾಜ್ಯದಲ್ಲಿರುವ ಕಾನೂನಿಗೆ ತಿದ್ದುಪಡಿ ಆಗಬೇಕಿದೆ. ತಕ್ಷಣ ಕಾನೂನಿನ ತಿದ್ದುಪಡಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವಂತಾಗಬೇಕು.

ಈ ಮೇಲಿನ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳು ತಕ್ಷಣ ಗಮನಿಸಬೇಕು ಮತ್ತು ಈಗಾಗಲೇ ನಡೆದಿರುವ ಪ್ರಕರಣಗಳಲ್ಲಿ ಕೇಸ್‌ ದಾಖಲಿಸಿಕೊಂಡು ತಕ್ಷಣ ಅಪರಾಧಿಗಳನ್ನು ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ವಿನಂತಿಸುತ್ತೇನೆ.

ಗೌರವಗಳೊಂದಿಗೆ,
ತಮ್ಮ ವಿಶ್ವಾಸಿ (ಶೋಭಾ ಕರಂದ್ಲಾಜೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+