ಮಡೆಸ್ನಾನ ಬೇಡ ಎಡೆಸ್ನಾನವಿರಲಿ ಎಂದ ಪೇಜಾವರ ಶ್ರೀ

'ಎಡೆಸ್ನಾನ ಅಂದರೆ ದೇವರಿಗೆ ಅರ್ಪಿಸುವ ನೈವೇದ್ಯದ ಮೇಲೆ ಭಕ್ತರು ಉರುಳು ಸೇವೆ ಮಾಡುವುದು ಎಂದರ್ಥ. ಆದರೆ ಹೀಗೆ ಮಾಡುವುದರಿಂದ ದೇವರ ಪ್ರಸಾದ ಅಪವಿತ್ರವಾಗುತ್ತದೆ ಎಂದು ವಾದಿಸಿದರೆ ಹೇಗೆ? ಈ ವಾದವನ್ನು ನಾನು ಒಪ್ಪುವುದಿಲ್ಲ. ಏಕೆಂದರೆ ಗಂಗಾ ನದಿಯಲ್ಲಿ ಸಾವಿರಾರು ಭಕ್ತರು ಮಿಂದು ಪಾವನರಾಗುತ್ತಾರೆ. ಹಾಗಂತ ಗಂಗಾನದಿಯನ್ನು ಅಪವಿತ್ರ ಎನ್ನಲು ಸಾಧ್ಯವೇ?' ಎಂದು ಅವರು ಪ್ರಶ್ನಿಸಿದ್ದಾರೆ.
'ಮಡೆಸ್ನಾನ ನಡೆಸುವ ಅಗತ್ಯವಿಲ್ಲ. ಅದರಿಂದ ಹಿಂದೂ ಧರ್ಮಕ್ಕೆ ಲಾಭವೂ ಇಲ್ಲ. ಈ ಬಗ್ಗೆ ನಾನು ನೀಡಿದ ಎಡೆಸ್ನಾನದ ಸಲಹೆಯನ್ನು ರಾಜ್ಯ ಸರಕಾರ ಪರಿಗಣಿಸಿತ್ತು. ಆದರೆ ಪ್ರಸಕ್ತ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಮಡೆಸ್ನಾನ ಮುಂದುವರಿದಿದೆ.
ಉಡುಪಿಯ ಕೃಷ್ಣ ಮಠದಲ್ಲಿ ಮಡೆಸ್ನಾನವಿಲ್ಲ. ಮಡೆಸ್ನಾನದ ಬದಲು ಎಡೆಸ್ನಾನದ ಪ್ರಸ್ತಾಪವನ್ನು ನಾನು ಮಾಡಿದಾಗ ನನ್ನನ್ನು ಸ್ವಾಗತಿಸಿದವರೇ (ನಿಡುಮಾಮಿಡಿ ಸ್ವಾಮೀಜಿ ಸೇರಿದಂತೆ ಅನೇಕರು) ಈಗ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಪೇಜಾವರಶ್ರೀ ವಿಷಾದಿಸಿದರು.
ನಕ್ಸಲ್ ಪ್ರದೇಶಗಳಲ್ಲಿ ನೀರಾ ರಾಡಿಯಾ ಸೇವೆ: ವಿವಾದಿತ ನೀರಾ ರಾಡಿಯಾ ಅವರು ಪೇಜಾವರ ಶ್ರೀಗಳ ಉಸ್ತುವಾರಿಯಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಲ್ಲಿನ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವಂತಾಗಲು 2 ಕೋಟಿ ರೂ. ಮೌಲ್ಯದ ಅತ್ಯಾಧುನಿಕ ಸಂಚಾರಿ ವೈದ್ಯಕೀಯ ವಾಹನ ನೀಡಿದ್ದಾರೆ. ಮುಂದಿನ ಜನವರಿ 15ರಿಂದ ಈ ಸೇವೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
'ನೀರಾ ರಾಡಿಯಾ ಮೇಲಿನ ಆರೋಪ ಇನ್ನೂ ಸಾಬೀತಾಗಿಲ್ಲ. ಅಲ್ಲದೆ ಅವರು ದೇಣಿಗೆ ನೀಡಿರುವುದು ಸಮಾಜ ಸೇವೆಗೆ. ಇದೀಗ ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಇದು ಸ್ವಾಗತಾರ್ಹ' ಎಂದು ಪೇಜಾವರಶ್ರೀ ಇದೇ ವೇಳೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications