ಜಗನ್ ರೆಡ್ಡಿಗೆ ಬೇಲ್ ಇನ್ನೂ ಮರೀಚಿಕೆ

ನ್ಯಾಯಮೂರ್ತಿ ಬಿ ಶೇಷಾಸಾಯನ ರೆಡ್ಡಿ ಅವರು ಜಗನ್ ಮೋಹನ್ ರೆಡ್ಡಿ ಅವರ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಜಗನ್ ಅವರು VANPIC ಒಪ್ಪಂದದಿಂದ ಗಳಿಸಿರುವ ಹಣದ ಲೆಕ್ಕಾಚಾರ ಇನ್ನೂ ಮುಗಿದಿಲ್ಲವಾದ್ದರಿಂದ ಜಾಮೀನು ನೀಡುವುದು ಸರಿಯಲ್ಲ ಎಂದು ಸಿಬಿಐ ಪರ ವಕೀಲರು ವಾದಿಸಿದ್ದಾರೆ.
ಉದ್ಯಮಿ ನಿಮ್ಮಗಡ ಪ್ರಸಾದ್ ಅವರ ಕನಸಿನ ಯೋಜನೆಯಾದ VANPIC ಗೆ ಅಗತ್ಯ ಭೂಮಿ ಒದಗಿಸಲು ಅಂದಿನ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಮುಂದಾಗಿದ್ದರು. ಸುಮಾರು 854 ಕೋಟಿ ರು ಮೊತ್ತದ ಡೀಲ್ ನಡೆದಿತ್ತು. ಜಗನ್ ಗೆ ಸೇರಿದ ಕಂಪನಿಗಳಿಗೆ ಅನುಕೂಲವಾಗುವಂತೆ ಆಂಧ್ರ ಸರ್ಕಾರ ನಿಯಮಗಳನ್ನು ರೂಪಿಸಿತ್ತು.
ಮೇ.27, 2012 ರಂದು ಭ್ರಷ್ಟಾಚಾರ ಆರೋಪದ ಮೇಲೆ ಬಂಧನಕ್ಕೊಳಗಾದ ಜಗನ್ ಮೋಹನ್ ರೆಡ್ಡಿ ಅವರು ಸದ್ಯ ಚಂಚಲಗುಡ ಜೈಲಿನಲ್ಲಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ, ಕಡಪ ಸಂಸದ ವೈಎಸ್ ಜಗನ್ ಮೋಹನ್ ರೆಡ್ಡಿಗೆ ಮತ್ತೊಮ್ಮೆ ಹಿನ್ನೆಡೆ ಉಂಟಾಗಿದೆ. ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಜಗನ್ ಗೆ ನಿರಾಶೆಯಾಗಿದೆ. ಜಗನ್ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ (ಆ.9) ವಜಾಗೊಳಿಸಿತ್ತು.
ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ರೆಡ್ಡಿ ಪರ ಸಮರ್ಥವಾಗಿ ವಾದ ಮಂಡಿಸಿದರೂ ಜಾಮೀನು ಕೊಡಿಸುವಲ್ಲಿ ವಿಫಲರಾಗಿದ್ದರು. ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ಕೂಡಾ ಜಗನ್ ಹಿಂಪಡೆದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್ ಹಾಗೂ ಸಿಬಿಐ ಕೋರ್ಟಿನ ತೀರ್ಪು ಜಗನ್ ಅವರ ವಿರುದ್ಧವಾಗಿ ಬಂದಿದೆ.
ಬಾಕಿ ಉಳಿದಿರುವ 7 ಪ್ರಕರಣಗಳ ಮೊತ್ತ ಸುಮಾರು 3000 ಕೋಟಿ ರು ದಾಟುತ್ತದೆ ಎಂದು ಸಿಬಿಐ ಹೇಳಿದೆ. ಹಾಗಾದರೆ ಸಮಸ್ತ ಆಸ್ತಿ ಲೆಕ್ಕಾಚಾರ ಇನ್ನೂ ಬಹಿರಂಗಗೊಂಡಿಲ್ಲ. ಹೀಗಾಗಿ ತನಿಖೆ ಬಾಕಿ ಇರುವುದರಿಂದ ಜಗನ್ ಗೆ ಬೇಲ್ ಸಿಗುವುದು ಕಷ್ಟಕರವಾಗಿದೆ.
ಸುಮಾರು 7 ಪ್ರಕರಣಗಳಲ್ಲಿ ಸೇರಿಸಿ ಚಾರ್ಚ್ ಶೀಟ್ ಹಾಕಬೇಕಾಗುತ್ತದೆ. ಸಂಡೂರು ಪವರ್ ಕಂಪನಿ, ಭಾರತಿ ರಘುರಾಮ್ ಸಿಮೆಂಟ್ಸ್, ಇಂಡಿಯಾ ಸಿಮೆಂಟ್ಸ್, ಪೆನ್ನಾ ಸಿಮೆಂಟ್ಸ್, ದಾಲ್ಮಿಯಾ ಸಿಮೆಂಟ್ಸ್, ಇಂಡಿಯಾ ಸಿಮೆಂಟ್ಸ್ ಹಾಗು ಕೋಲ್ಕತ್ತಾ ಭ್ರೀಫ್ ಕೇಸ್ ಕಂಪನಿ ಅಕ್ರಮ ಗಳಿಕೆ ಬಗ್ಗೆ ಚಾರ್ಚ್ ಶೀಟ್ ಹಾಕಿಲ್ಲ. ಲೇಪಾಕ್ಷಿ ನಾಲೆಡ್ಜ್ ಪಾರ್ಕ್ ಮುಂತಾದ ಕಂಪನಿಗಳ ಮೂಲಕ ಗಳಿಸಿದ ಅಕ್ರಮ ಆಸ್ತಿಗಳ ವಿವರ ಸಂಗ್ರಹಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.(ಪಿಟಿಐ)












Click it and Unblock the Notifications