ಆತ್ಮಹತ್ಯಾ ನಗರಿಯಲ್ಲಿ ಮೂರು ಜೀವ ನಂದಿದೆ

ಕಾಟನ್ ಪೇಟೆಯ ಭಕ್ಷಿ ಗಾರ್ಡನ್ ನಲ್ಲಿ 14 ವರ್ಷದ ಹುಡುಗಿ, ಪಾಪರೆಡ್ಡಿ ಪಾಳ್ಯದಲ್ಲಿ 9ನೇ ತರಗತಿ ವಿದ್ಯಾರ್ಥಿ, ಕೆಂಪೇಗೌಡ ಲೇಔಟ್ ನಲ್ಲಿ 18 ವರ್ಷದ ಯುವತಿ ಜೀವನ ಅಂತ್ಯಗೊಂಡಿದೆ.
ಕಾಟನ್ ಪೇಟೆ ಕೇಸ್: ಪ್ರೀತಿ ಪ್ರೇಮ ಎಂದು ಬೆನ್ನತ್ತಿದ್ದ ಹುಡುಗನ ಕಾಟಕ್ಕೆ ಬೇಸತ್ತು 9ನೇ ತರಗತಿ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾಟನ್‌ಪೇಟೆ ಭಕ್ಷಿಗಾರ್ಡನ್‌ನ 14 ವರ್ಷ ವಯಸ್ಸಿನ ಕಲೈವಾಣಿ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಕೂಲಿ ಕಾರ್ಮಿಕರಾದ ಆದಿವೇಲು ಮತ್ತು ಲತಾ ದಂಪತಿಯ ಮಗಳಾದ ಕಲೈವಾಣಿ, ಭಕ್ಷಿ ಗಾರ್ಡನ್ ನಲ್ಲಿರುವ ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಇತ್ತೀಚೆಗಷ್ಟೆ ಪರಿಚಯವಾಗಿದ್ದ ನಾಯಂಡಹಳ್ಳಿಯ ಅರವಿಂದ ಪರಿಚಯವನ್ನೇ ದುರುಪಯೋಗ ಪಡಿಸಿಕೊಂಡು ಕಲೈವಾಣಿಗೆ ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಕಲೈವಾಣಿ ನಿರಾಕರಿಸುತ್ತಾ ಬಂದಿದ್ದಳು. ಆದರೆ, ಶನಿವಾರ ಸಂಜೆ ಮನೆ ಹತ್ತಿರವೇ ಬಂದ ಅರವಿಂದ ನನ್ನನ್ನು ಪ್ರೀತಿಸು ಇಲ್ಲವಾದರೆ ಕೊಲೆ ಮಾಡಿ ಮನೆಯವರನ್ನೂ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಇದರಿಂದ ಭಯಗೊಂಡ ಕಲೈವಾಣಿ ಶನಿವಾರಸಂಜೆ 6 ಗಂಟೆ ಸುಮಾರಿನಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೋಡಿಕೊಂಡು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಕಿರುಚಾಟ ಕೇಳಿದ ನೆರೆ ಹೊರೆಯವರು ಕೂಡಲೇ ಬೆಂಕಿ ನಂದಿಸಿ ಕಲೈವಾಣಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಭಾನುವಾರ ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಸಾಯುವ ಮುನ್ನ ಕಲೈವಾಣಿ ಹೇಳಿಕೆ ಪಡೆದಿರುವ ಕಾಟನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿದ್ಯಾರ್ಥಿನಿ ಸಾವಿಗೆ ಕಾರಣನಾದ ಅರವಿಂದನ ಪತ್ತೆಗೆ ಬಲೆ ಬೀಸಿದ್ದಾರೆ.
ವಿದ್ಯಾರ್ಥಿ ನೇಣಿಗೆ ಶರಣು: ಮತ್ತೊಂದು ಪ್ರಕರಣದಲ್ಲಿ ಕಿರು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಹಿನ್ನೆಲೆಯಲ್ಲಿ ಮನನೊಂದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಪಾಪರೆಡ್ಡಿಪಾಳ್ಯದ 13 ವರ್ಷ ವಯಸ್ಸಿನ ವಿನೋದ್ ಎಂದು ಗುರುತಿಸಲಾಗಿದೆ. ನ್ಯೂ ಪಬ್ಲಿಕ್ ಶಾಲೆಯಲ್ಲಿ 9ನೇ
ತರಗತಿ ಓದುತ್ತಿದ್ದ ಈತ ಶಾಲೆಯಲ್ಲಿ ನಡೆದ ಕಿರು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದ. ಇದರಿಂದ ಕೆಲ ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಶನಿವಾರ ಸಂಜೆ 7 ಗಂಟೆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದಾಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನೋದ್ ಅವರ ತಂದೆ ಜಯರಾಮ್ ಅವರು ವೆಲ್ಡರ್ ಆಗಿದ್ದು, ಮಗನ ಸಾವಿನಿಂದ ತೀವ್ರ ದುಃಖಕ್ಕೊಳಗಾಗಿದ್ದಾರೆ.
ಬಡತನಕ್ಕೆ ನೊಂದು ಸಾವು: ರಾಜಗೋಪಲ ನಗರದಲ್ಲಿ 18 ವರ್ಷ ವಯಸ್ಸಿನ ಯುವತಿಯೊಬ್ಬರು ಬಡತನಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತಪಟ್ಟವರನ್ನು ತಮಿಳುನಾಡು ಮೂಲದ ಜಯಂತಿ ಎಂದು ಗುರುತಿಸಲಾಗಿದೆ. ಕೆಂಪೇಗೌಡ ಲೇಔಟ್ ನ ರಾಜಗೋಪಾಲ ನಗರದಲ್ಲಿ ತಾಯಿ ಸುಶೀಲಮ್ಮ ಹಾಗೂ ಅಣ್ಣ ಜಯಶೀಲ ಅವರೊಂದಿಗೆ ಜಯಂತಿ ನೆಲೆಸಿದ್ದರು.
ರಾತ್ರಿ ವೇಳೆ ಎಲ್ಲರೂ ಮಲಗಿರುವಾಗ ಜಯಂತಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸುಶೀಲಮ್ಮ ಕೂಲಿ ಕೆಲಸ ಮಾಡಿಕೊಂಡಿದ್ದರೆ, ಜಯಶೀಲ ಪೈಂಟರ್ ವೃತ್ತಿಯಲ್ಲಿದ್ದಾರೆ. ಗೊರಗುಂಟೆ ಪಾಳ್ಯದಲ್ಲಿರುವ ರೆಡಿಮೇಡ್ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಜಯಂತಿ ಉದ್ಯೋಗಿಯಾಗಿದ್ದರು.
ಜಯಂತಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಅಣ್ಣ ಜಯಶೀಲ ಕೊಟ್ಟಿರುವ ಹೇಳಿಕೆ ಪ್ರಕಾರ, ಜಯಂತಿ ಬಡತನದ ಜೀವನದಿಂದ ರೋಸಿಹೋಗಿದ್ದಳು, ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಇದೇ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಇರಬಹುದು ಎಂದು ಶಂಕಿಸಲಾಗಿದೆ.












Click it and Unblock the Notifications