ಹೊಸವರ್ಷ ಮಜಾ ಮಾಡ್ರಿ, ಹುಚ್ಚಾಟ ಆಡೀರಿ ಜೋಕೆ

2012ನೇ ವರ್ಷವನ್ನು ಹಿಂದೆ ದಬ್ಬಿ 2013ರ ಹೊಸವರ್ಷವನ್ನು ಅಪ್ಪಿಕೊಳ್ಳುವ ಜನರು ಮತ್ತು ಮನಸೋ ಇಚ್ಛೆ ಕುಡಿದು ಕುಪ್ಪಳಿಸಬೇಕೆಂಬ ಯುವಕರು 2013ರ ಜನವರಿ 1ರ ಬೆಳಗಿನ ಜಾವ 1 ಗಂಟೆಯವರೆಗೆ ಮಜಾ ಮಾಡಬಹುದು ಎಂದು ಹೇಳಿ ಸಂತಸದ ನೊರೆಯನ್ನು ಚಿಮುಕಿಸಿದ್ದಾರೆ.
11.30ರ ಬದಲಾಗಿ ಬೆಳಗಿನ ಜಾವ 1 ಗಂಟೆಯವರೆಗೆ ಬಾರ್‌ಗಳು, ಪಬ್‌ಗಳು, ಹೋಟೆಲುಗಳು, ಫುಡ್ ಜಾಯಿಂಟ್‌ಗಳು, ರೆಸಾರ್ಟ್‌ಗಳು ತೆರೆದಿಡಲು ಅವಕಾಶ ನೀಡಲಾಗಿದೆ. ಆದರೆ, ಮದ್ಯವನ್ನು ಸರಬರಾಜು ಮಾಡುವ ಫುಡ್ ಜಾಯಿಂಟ್‌ಗಳು ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆದಿರಬೇಕು. ಬರೀ ಆಹಾರವನ್ನು ಒದಗಿಸುವ ಹೋಟೆಲುಗಳು ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆಯುವ ಅಗತ್ಯವಿಲ್ಲ.
ಕುಡಿದು ಮಜಾ ಮಾಡುವ ನೆಪದಲ್ಲಿ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವವರು, ನಾಗರಿಕರಿಗೆ ಕಿರಿಕಿರಿ ಉಂಟುಮಾಡುವವರು, ನೆಮ್ಮದಿ ಕೆಡಿಸುವವರು, ಮಹಿಳೆಯರ ಮೇಲೆ ಕಿರುಕುಳ ನೀಡುವವರು, ಕುಡಿದು ವಾಹನ ಓಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಜ್ಯೋತಿ ಪ್ರಕಾಶ್ ಮಿರ್ಜಿ ಎಚ್ಚರಿಕೆ ನೀಡಿದ್ದಾರೆ.
ನಿಬಂಧನೆಗಳು
* ಕುಡಿದು ವಾಹನ ಓಡಿಸುವಂತಿಲ್ಲ. ವಾಹನ ಓಡಿಸುವವರು ಮದ್ಯ ಸೇವಿಸಿರಬಾರದು.
* ನಿಬಂಧನೆಗಳನ್ನು ಮೀರಿ ಅತಿರೇಕದಿಂದ ವರ್ತಿಸುವವರನ್ನು ಸ್ಥಳದಲ್ಲಿಯೇ ಬಂಧಿಸಲಾಗುವುದು.
* ರಾತ್ರಿ 1 ಗಂಟೆಯ ನಂತರ ಬಾರ್, ಪಬ್, ಹೋಟೆಲ್, ರೆಸಾರ್ಟ್‌ಗಳು ತೆರೆದಿರುವಂತಿಲ್ಲ.
* ಬಾರ್, ಪಬ್‌ಗಳಲ್ಲಿ ಅಶ್ಲೀಲ ನರ್ತನಗಳನ್ನು ಆಯೋಜಿಸುವಂತಿಲ್ಲ.
* ಕುಡಿದ ಮತ್ತಿನಲ್ಲಿ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುವಂತಿಲ್ಲ.
* ಈ ನಿಬಂಧನೆಗಳು ಹೊಸವರ್ಷದ ಪಾರ್ಟಿ ನೀಡುವವರಿಗೂ ಅನ್ವಯವಾಗುತ್ತದೆ.
ಹೊಸವರ್ಷದ ಆಚರಣೆಯನ್ನು ಸುರಕ್ಷಿತವಾಗಿರಿಸಲು ಪೊಲೀಸ್ ಇಲಾಖೆ ಸರ್ವರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಯಾರಾದರೂ ನಿಮಯ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ನಗರದ ಎಲ್ಲ ಪ್ರದೇಶಗಳಲ್ಲಿ ಪೊಲೀಸ್ ಪಡೆ ಎಚ್ಚರಿಕೆಯಿಂದ ಕಾವಲು ಕಾಯಲಿದ್ದಾರೆ. ಸಲ್ಲದ ಘಟನೆಗಳಿಗೆ ಯಾರೂ ಅವಕಾಶ ಮಾಡಿಕೊಡಬಾರದು, ಹೊಸವರ್ಷವನ್ನು ಸಂತಸದಿಂದ ಸ್ವಾಗತಿಸಬೇಕು ಎಂದು ಮಿರ್ಜಿ ಹೇಳಿದ್ದಾರೆ.












Click it and Unblock the Notifications