ಸುವರ್ಣ ಸೌಧ ಗಲಭೆ, ಎಸ್ಪಿ ಪಾಟೀಲ್ ತಲೆಗೆ ಪೆಟ್ಟು

ಸುವರ್ಣ ವಿಧಾನಸೌಧದ ಹೊರಗೆ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪೊಲೀಸರು ಹರಸಾಹಸ ಪಟ್ಟು ಪ್ರತಿಭಟನಾಕಾರರನ್ನು ತಡೆ ಹಿಡಿದರು.
ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಗಲಭೆ, ಗದ್ದಲ ಇನ್ನಷ್ಟು ಉಲ್ಬಣಗೊಂಡಿತ್ತು. ಕಿಡಿಗೇಡಿಗಳು ಎಸೆದ ಕಲ್ಲೊಂದು ಹಾರಿ ಎಸ್ ಪಿ ಸಂದೀಪ್ ಪಾಟೀಲ್ ಹಣೆಗೆ ಬಡಿಯಿತು. ಅಲ್ಲೇ ಹಣೆಗೆ ಪಟ್ಟಿ ಕಟ್ಟಿಕೊಂಡು ಪ್ರಥಮ ಚಿಕಿತ್ಸೆ ಪಡೆದ ಸಂದೀಪ್ ಪಾಟೀಲ್ ಮತ್ತೆ ಗಲಭೆ ಸ್ಥಳಕ್ಕೆ ಧಾವಿಸಿ ಬಂದು ಕರ್ತವ್ಯ ನಿರ್ವಹಿಸಿದರು.
ಪರಿಸ್ಥಿತಿ ಕೈ ಮೀರ ತೊಡಗಿದಾಗ ಎಸ್ ಪಿ ಸಂದೀಪ್ ಪಾಟೀಲ್ ನೇತೃತ್ವದ ತಂಡ ಅಶ್ರುವಾಯು ಪ್ರಯೋಗಕ್ಕೆ ಮುಂದಾಗಬೇಕಾಯಿತು. ಅದರೂ, ಪ್ರತಿಭಟನೆಕಾರರು ಸುವರ್ಣ ಸೌಧದ ಕಡೆಗೆ ಹೆಜ್ಜೆ ಹಾಕತೊಡಗಿದರು. ಸುಮಾರು 5 ಬಾರಿ ಅಶ್ರುವಾಯು ಪ್ರಯೋಗ ಮಾಡಿದ ಮೇಲೆ ಪರಿಸ್ಥಿತಿ ಸ್ವಲ್ಪ ಹತೋಟಿಗೆ ಬಂದಿದೆ.
ಆದರೆ, ಈ ನಡುವೆ ನಾಲ್ಕು ಪೊಲೀಸ್ ವಾಹನ ಸೇರಿದಂತೆ ಸುಮಾರು 18 ವಾಹನಗಳು ಜಖಂಗೊಂಡಿದೆ. 15 ಜನ ಪೊಲೀಸರು ಸೇರಿದಂತೆ ಒಟ್ಟು 28 ಮಂದಿಗೆ ಗಾಯಗಳಾಗಿದೆ.
ದಲಿತರಿಗೆ ಒಳ ಮೀಸಲಾತಿ ಕಲ್ಪಿಸುವ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಡಿ.12 ರಂದು ದಲಿತ ಸಂಘಟನೆಗಳು ಒಟ್ಟಾಗಿ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದವು.
ಈ ಬಗ್ಗೆ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನ ಸಮಿತಿ ಕೂಡಾ ಘೋಷಣೆ ಹೊರಡಿಸಿತ್ತು. ಆದರೆ, ಒಂದು ದಿನ ಮುಂಚಿತವಾಗೇ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪೊಲೀಸರಿಗೂ ಗೊಂದಲ ಮೂಡಿಸಿತು.
ಸದಾಶಿವ ಆಯೋಗ ವರದಿ ಜಾರಿಗೆ ಹಲವಾರು ಬಾರಿ ಆಗ್ರಹಿಸಿದ್ದರೂ ಪ್ರಯೋಜನವಾಗಿಲ್ಲ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿತ್ತು,
ಆದರೆ, ಅಧಿಕಾರಕ್ಕೆ ಬಂದ ನಂತರ ತಾನು ನೀಡಿದ್ದ ವಾಗ್ಧಾನವನ್ನು ಮರೆತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು ಈ ವರದಿ ಜಾರಿಗೆ ತರಲು ಮುಂದಾಗಬೇಕು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಎ. ಮುನಿಯಪ್ಪ ಹೇಳಿದ್ದರು. ಮಾದಿಗ ಬಂಡೋರ ಸಮಿತಿ ಕೂಡಾ ಸಮನ್ವಯ ಸಮಿತಿ ಜೊತೆ ಕೈ ಜೋಡಿಸಿತ್ತು.
ಕೊರವ ಸಮಾಜದ ಕೊರಗು: ಅಧಿಕಾರ ಲಾಲಸೆಯಿಂದ ಇತ್ತೀಚಿನ ದಿನಗಳಲ್ಲಿ ಮತದಾರರನ್ನು ಅಂಕಿ ಸಂಖ್ಯೆಗಳನ್ನಾಧರಿಸಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮತ ಸೆಳೆಯುವ ಉದ್ದೇಶದಿಂದ ಅರ್ಥವಿಲ್ಲದ ಇಂತಹ ಆಯೋಗ ರಚಿಸಿದ್ದಲ್ಲದೇ ಅವೈಜ್ಞಾನಿಕ ಪುಟಗಳಿಗೆ ಮನ್ನಣೆ ನೀಡಲಾಗುತ್ತಿದೆ ಎಂದು ಕೊರವ ಸಮಾಜದ ಅಧ್ಯಕ್ಷ ಹನುಮಂತಪ್ಪ ಭಜಂತ್ರಿ ಈ ಹಿಂದೆ ಕಿಡಿಕಾರಿದ್ದರು,
ಸರ್ಕಾರಿ ಮೀಸಲಾತಿ ಪ್ರಕಟಿಸಿದ್ದರೂ ಪುನರ್ ವಿಮರ್ಶೆ ಮಾಡಲು ಆಯೋಗ ನೇಮಿಸುವ ಮೂಲಕ ಸಂವಿಧಾನದ ಮೂಲಕ ನಮಗೆ ಸಿಕ್ಕಿರುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದಿದ್ದರು.











Click it and Unblock the Notifications