ಪರ ಪುರುಷನ ವಾಸನೆ, ಪತ್ನಿಗೆ ಹಚ್ಚಿದ ಬೆಂಕಿ

ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯನ್ನು ಕೊಲೆ ಮಾಡಿ ಸೀಮೆಎಣ್ಣೆ ಹಾಕಿ ಸುಟ್ಟಿ ಹಾಕಿದ್ದಾನೆ. ಪತಿಯ ಶಂಕೆಗೆ ಬಲಿಯಾದ ದುರ್ದೈವಿಯನ್ನು 28 ವರ್ಷದ ಭಾಗ್ಯಮ್ಮ ಎಂದು ಗುರುತಿಸಲಾಗಿದೆ.
ಸೋಮಶೇಖರ ನಿನ್ನೆ ರಾತ್ರಿ ಎಂದಿನಂತೆ ಪತ್ನಿ ಭಾಗ್ಯಮ್ಮಳ ಜೊತೆ ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಹಿಗ್ಗಾ ಮುಗ್ಗಾ ಥಳಿಸಿದ್ದಾನೆ.
ಪತಿ ಹೊಡೆದ ತಾಳಲಾರದೆ ಭಾಗ್ಯಮ್ಮ ಸಾವನ್ನಪ್ಪಿದ್ದಾಳೆ. ನಂತರ ಆಕೆಯ ಮೇಲೆ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.
ಆಮೇಲೆ, ಮಾಳಿಗೆ ಹೆಂಚು ಸರಿಸಿ ಮನೆಯಿಂದ ಹೊರ ಬಂದು ಹೊರಗಿನಿಂದ ಮನೆ ಬಾಗಿಲಿಗೆ ಬೀಗ ಹಾಕಿ ಹೊರ ಹೋಗಿದ್ದಾನೆ.
ಸೋಮವಾರ ಬೆಳಗ್ಗೆ ನೆರೆ ಹೊರೆಯವರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೋಮಶೇಖರ ಹಾಗೂ ಭಾಗ್ಯಮ್ಮ ಇಬ್ಬರು ಪ್ರತಿದಿನ ಕಿತ್ತಾಡುತ್ತಿದ್ದರು. ಮಕ್ಕಳನ್ನು ತವರಿಗೆ ಬಿಟ್ಟು ಬಂದಿದ್ದಾರೆ ಎಂದು ನೆರೆ ಮನೆಯವರು ದೂರಿನಲ್ಲಿ ಹೇಳಿದ್ದಾರೆ.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಸೋಮಶೇಖರನನ್ನು ಸೋಮವಾರ (ಡಿ.10) ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ವಿವರಗಳು ಬೆಳಕಿಗೆ ಬಂದಿದೆ.
ಕಳೆದ 6 ವರ್ಷಗಳ ಹಿಂದೆ ಇಬ್ಬರ ಮದುವೆಯಾಗಿದೆ. ಚಿತ್ರದುರ್ಗದ ಬೊಮ್ಮಸನಹಳ್ಳಿಯ ಭಾಗ್ಯಮ್ಮಳೊಂದಿಗೆ ಮದುವೆಯಾಗಿದ್ದ ಸೋಮಶೇಖರ ಅವರಿಗೆ ಒಂದು ಗಂಡು ಹಾಗೂ 2 ಹೆಣ್ಣು ಮಕ್ಕಳಿದೆ.
ಗಾರೆ ಕೆಲಸ ಮಾಡಿಕೊಂಡಿದ್ದ ಸೋಮಶೇಖರ, ಇತ್ತೀಚೆಗೆ ಪರವೂರಿಗೆ ಕೆಲಸ ನಿಮಿತ್ತ ಹೋಗಿ ಬರುವುದು ಹೆಚ್ಚಾಗಿತ್ತು. ಈ ಸಮಯದಲ್ಲಿ ಮನೆಗೆ ಬಂದಾಗ ಪತ್ನಿ ಇರುತ್ತಿರಲಿಲ್ಲ.
ದಿನೇ ದಿನೇ ಭಾಗ್ಯಮ್ಮಳ ಮೇಲೆ ಅನುಮಾನ ಹೆಚ್ಚಿಸಿಕೊಂಡ ಸೋಮಶೇಖರ ಆಕೆಯನ್ನು ಕೋಪದ ಭರದಲ್ಲಿ ಕೊಂದು ಹಾಕಿದ್ದಾನೆ. ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.












Click it and Unblock the Notifications