ದೇವೇಗೌಡರಿಗೆ ಬೆಳೆಸಲು ಗೊತ್ತು, ಅಳಿಸಲು ಗೊತ್ತು

ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿ ನಡೆದ ಮಲ್ಲೇಶ್ವರ ಪ್ರೌಢಶಾಲೆ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ರೇವಣ್ಣ ಮಾತನಾಡಿದರು.
ಎಲ್ಲರ ವ್ಯಕ್ತಿತ್ವವನ್ನೂ ಸೂಕ್ಷವಾಗಿ ಗ್ರಹಿಸಬಲ್ಲ ಚಾಣಾಕ್ಷತೆ, ರಾಜಕೀಯ ಪ್ರೌಢಿಮೆ ಇರುವ ದೇವೇಗೌಡರಿಗೆ ಬೆಳೆಸುವುದೂ ಗೊತ್ತು, ತುಳಿಯುವುದೂ ಗೊತ್ತು ಎಂದರು.
ರೇವಣ್ಣ ಅವರು ಇದ್ದಕ್ಕಿದ್ದಂತೆ ಈ ರೀತಿ ದೇವೇಗೌಡರ ಬಗ್ಗೆ ಹೊಗಳಿಕೆ ಮಾತುಗಳನ್ನಾಡುತ್ತಿರುವುದು ಏಕೆ? ಎಂದು ಕಾರ್ಯಕರ್ತರು ಒಂದು ಕ್ಷಣ ಯೋಚಿಸತೊಡಗಿದರು.
ಆನಂತರ, ಪುತ್ರ ಪ್ರಜ್ವಲ್ ಹಾಗೂ ಪತ್ನಿ ಭವಾನಿ ಅವರು ಮುಂಬರುವ ಚುನಾವಣೆಗೆ ನಿಲ್ಲಲು ನಡೆಸಿರುವ ಯತ್ನಕ್ಕೆ ದೇವೇಗೌಡರು ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ ಎಂಬುದು ಸ್ಪಷ್ಟವಾಯಿತು.
ಜೆಡಿಎಸ್ ಬಿಟ್ಟವರ ಬಗ್ಗೆ: ಶಾಸಕ ಪುಟ್ಟೇಗೌಡ ಮತ್ತು ಮಾಜಿ ಶಾಸಕ ವಿಶ್ವನಾಥ್ ಅವರಿಗೆ ನಾನು ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ಅವರು ಪಕ್ಷ ಬಿಡುವ ನಿರ್ಧಾರಕ್ಕೆ ಬಂದಿದ್ದರು, ಹಾಗಾಗಿ ನನ್ನ ಮೇಲೆ ವಿನಾಕಾರಣ ಗೂಬೆ ಕೂರಿಸುತ್ತಿದ್ದಾರೆ
ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ಅವರು ಈ ಹಿಂದಿನ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಚ್.ಡಿ.ಕುಮಾರಸ್ವಾಮಿ ಅವರಿಂದ 1.5 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಿಸಿ, ಕೆಲವೇ ಮತಗಳನ್ನು ಮಾತ್ರ ಪಡೆದು ಠೇವಣಿ ಕಳೆದುಕೊಂಡು ಪಕ್ಷದ ಹೆಸರನ್ನೂ ಸಹ ಹಾಳು ಮಾಡಿದ್ದಾರೆ.
ಆನಂತರ ಎಷ್ಟೋ ಸಂದರ್ಭದಲ್ಲಿ ಪಕ್ಷದ ವಿರೋಧಿಯಾಗಿಯೂ ನಡೆದುಕೊಂಡಿದ್ದಲ್ಲದೆ ಅವರೇ ಜೆಡಿಎಸ್ನಿಂದ ಹಿಂದೆ ಸರಿದಿದ್ದಾರೆ. ಇದರಿಂದ ಯಾರಿಗೂ ನಷ್ಟವಿಲ್ಲ ಎಂದು ಕಿಡಿಕಾರಿದರು.
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರದ ಗದ್ದುಗೆ ಏರಲಿದ್ದು, ತಾವೇ ಖುದ್ದಾಗಿ ಈ ಕ್ಷೇತ್ರಕ್ಕೆ ಭೇಟಿ ಕೊಟ್ಟು ಎಲ್ಲಾ ವರ್ಗದ ಜನರ ಸಮಸ್ಯೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಸಾಧ್ಯವಾದಷ್ಟು ಬೇಗ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
ಮಲೆನಾಡು ಜನರ ಬಗ್ಗೆ ತಮಗೆ ಕಾಳಜಿ ಇದೆ. ತಾಲ್ಲೂಕಿನ ಮತದಾರರು ಪಕ್ಷವನ್ನು ಕೈಬಿಡುವುದಿಲ್ಲ ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದೆ. ಈ ಪೈಕಿ ಯಾವುದಾದರೂ ಒಂದು ಕ್ಷೇತ್ರದಿಂದ ಶ್ರೀಮತಿ ಭವಾನಿ ರೇವಣ್ಣ ಅವರನ್ನು ಸ್ಪರ್ಧಿಸಲು ಅವಕಾಶ ಮಾಡಿ ಕೊಡಿ ಎಂದು ಜೆಡಿಎಸ್‌ನ ಮಹಿಳಾ ವಿಭಾಗದ ಮುಖಂಡರು ಮತ್ತು ಕಾರ್ಯ ಕರ್ತರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications