ಐದು ನಿಮಿಷ ತಡವಾಗಿದ್ದಕ್ಕೆ ವಿದ್ಯಾರ್ಥಿಗಳಿಗೆ ಬಸ್ಕಿ ಶಿಕ್ಷೆ

ಈ ಮಹಾನುಭಾವ ಶಿಕ್ಷಕ ಬಸ್ಕಿ ಹೊಡೆಸಿ ಕ್ರೌರ್ಯ ಮೆರೆದಿರುವುದು ಶಾಲಾ ಬಾಲಕರಿಗಲ್ಲ, ಕಾಲೇಜು ವಿದ್ಯಾರ್ಥಿಗಳಿಗೆ, ಅದೂ ತರಗತಿಗೆ ಐದು ನಿಮಿಷ ತಡವಾಗಿ ಬಂದಿದ್ದಕ್ಕೆ. ವಿದ್ಯಾರ್ಥಿಗಳೊಂದಿಗೆ ಅಮಾನವೀಯವಾಗಿ ನಡೆದುಕೊಂಡ ಉಪನ್ಯಾಸಕನನ್ನು ಸೇವೆಯಿಂದ ವಜಾ ಮಾಡಲಾಗಿದೆ.
ಘಟನೆಯ ವಿವರ : ಪಟ್ಟಣದಲ್ಲಿರುವ ರಚನಾ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮಧ್ಯಾಹ್ನ ಊಟಕ್ಕೆ ಹೋಗಿ ಮತ್ತೆ ವಾಪಸ್ಸು ತರಗತಿಗೆ ಬರುವಾಗ ಐದು ನಿಮಿಷ ತಡವಾಗಿ ಬಂದಿದ್ದಾರೆ ಎಂಬ ಕಾರಣಕ್ಕೆ ಏಳು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಇಎಂ ವಿಭಾಗದಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿರುವ ಯೂಸೂಫ್ ಅಲಿ ಸುಡುವ ಬಿಸಿಲಿನಲ್ಲಿ ಅಮಾನವೀಯವಾಗಿ ಮೂನ್ನೂರು ಬಸ್ಕಿ ಹೊಡೆಸಿದ್ದಾರೆ.
ಇದರಿಂದ ಬೆನ್ನು ಮತ್ತು ಮೈನೋವಿನಿಂದ ರಾತ್ರಿಯೆಲ್ಲಾ ನರಳುತ್ತಿದ್ದ ವಿದ್ಯಾರ್ಥಿಗಳ ಪೋಷಕರು ವಿಚಾರಿಸಿದಾಗ ವಿದ್ಯಾರ್ಥಿಗಳು ನಡೆದ ಘಟನೆಯನ್ನು ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೋಷಕರು ಕಾಲೇಜಿಗೆ ಹೋಗಿ ಉಪನ್ಯಾಸಕನನ್ನು ತೀವ್ರ ತರಾಟೆಗೆ ತೆಗೆದುಕೊಂಡು ಮಾನವೀಯತೆಯನ್ನು ಮರೆತು ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕನ್ನು ಸೇವೆಯಿಂದ ವಜಾ ಮಾಡಬೇಕು ಇಲ್ಲದಿದ್ದರೆ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವುದಿಲ್ಲ ಮತ್ತು ಮಾನವ ಹಕ್ಕು ಆಯೋಗಕ್ಕೆ ದೂರು ನೀಡುವುದಾಗಿ ಹೇಳಿ ಪ್ರತಿಭಟನೆ ನಡೆಸಿದರು.
ಇದರಿಂದ ಅನ್ಯ ಮಾರ್ಗವಿಲ್ಲದೆ ಸಂಸ್ಥೆಯ ಮುಖ್ಯಸ್ಥರಾದ ಪ್ರಕಾಶ್‌ರವರು ವಿದ್ಯಾರ್ಥಿಗಳಿಗೆ ಅಮಾನವೀಯ ಶಿಕ್ಷೆ ನೀಡಿದ ಉಪನ್ಯಾಸಕ ಯೂಸೂಫ್ ಅಲಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾ ಮಾಡಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ವಜಾ ಮಾಡುವ ಬದಲು ಅದೇ ಬಿಸಿಲಲ್ಲಿ ಅದೇ ಶಿಕ್ಷಕನನ್ನು ಮುನ್ನೂರರ ಬದಲು ಆರುನೂರು ಬಸ್ಕಿ ಹೊಡೆಸಬಹುದಿತ್ತಲ್ಲ?












Click it and Unblock the Notifications