ನನಗೆ ಗೂಟ ಹೊಡೆದಿದ್ದು ಬಿಎಸ್‌ವೈ : ಬೇಳೂರು

ಬಿಜೆಪಿ ಸಂಸದನಾಗಿದ್ದುಕೊಂಡು ರಾಘವೇಂದ್ರ ಅವರು ಯಡಿಯೂರಪ್ಪನವರ ಜೊತೆ ಗುರುತಿಸಿಕೊಂಡು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅವರು ಮಾತ್ರವಲ್ಲ ಅವರ ಜೊತೆ ಗುರುತಿಸಿಕೊಂಡ ಎಲ್ಲ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಬೇಳೂರು ಗೋಪಾಲಕೃಷ್ಣ ಶನಿವಾರ ಬೆಂಗಳೂರಿನಲ್ಲಿ ಕೆಂಡ ಕಾರಿದ್ದಾರೆ.
ಅಪ್ಪನ ಜೊತೆ ಓಡಾಡುತ್ತಿರುವ ಸಂಸದ ರಾಘವೇಂದ್ರ ತಮ್ಮ ಸ್ಥಾನಕ್ಕೆ ಮತ್ತು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿ. ತಾಕತ್ ಇದ್ದರೆ ಈ ಬಾರಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿ.ವೈ. ರಾಘವೇಂದ್ರ ಗೆದ್ದು ತೋರಿಸಲಿ ನೋಡೋಣ ಎಂದು ಶಿವಮೊಗ್ಗ ಜಿಲ್ಲೆಯವರೇ ಆದ ಬೇಳೂರು ಗೋಪಾಲಕೃಷ್ಣ ಅವರು ಸವಾಲು ಹಾಕಿದ್ದಾರೆ.
ಅಲ್ಲದೆ, ಬಿಜೆಪಿಯ ಅನ್ನ ಉಂಡು ಎರಡು ಬಗೆದ ಬಿ.ಜೆ. ಪುಟ್ಟಸ್ವಾಮಿ ಅವರನ್ನು ಕೂಡಲೆ ಪಕ್ಷದಿಂದ ಒದ್ದು ಓಡಿಸಬೇಕು. ಅವರು ಮಾತ್ರವಲ್ಲ, ಶೋಭಾ ಕರಂದ್ಲಾಜೆ ಸೇರಿದಂತೆ ಯಡಿಯೂರಪ್ಪ ಜೊತೆ ಗುರುತಿಸಿಕೊಂಡಿರುವ ಯಾರನ್ನೂ ಪಕ್ಷದಲ್ಲಿ ಉಳಿಸಿಕೊಳ್ಳಬಾರದು. ಅವರನ್ನು ಉಚ್ಛಾಟಿಸದಿದ್ದರೆ ಇಲ್ಲದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಪಕ್ಷದ ವರಿಷ್ಠರಿಗೇ ಎಚ್ಚರಿಕೆ ನೀಡಿದ್ದಾರೆ.
ಯಡಿಯೂರಪ್ಪನವರು ಪಕ್ಷ ಬಿಟ್ಟು ಕೆಜೆಪಿ ಕಟ್ಟಿದ್ದರಿಂದ ಭಾರತೀಯ ಜನತಾ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷವಾದ್ದರಿಂದ ಬಿಜೆಪಿ ಸರಕಾರಕ್ಕೆ ಯಾವುದೇ ಹೆದರಿಕೆಯಿಲ್ಲ. ಎಷ್ಟೇ ಜನ ಬಿಜೆಪಿಯಿಂದ ಕೆಜೆಪಿ ಸೇರಿಕೊಂಡರೂ ಸರಕಾರ ಬೀಳುವುದಿಲ್ಲ. ಬೀಳದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಾವ ಹೊತ್ತಿನಲ್ಲಿ ಯಾರ ಪರವಾಗಿ ಹೇಳಿಕೆ ಕೊಡುತ್ತಾರೆ, ಯಾರ ವಿರುದ್ಧವಾಗಿ ಹೇಳಿಕೆ ಕೊಡುತ್ತಾರೆ ಎಂದು ಊಹಿಸಲೂ ಆಗದಂತಹ ಹೇಳಿಕೆ ನೀಡುವ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಈ ಬಾರಿ ಮತ್ತೆ ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿದ್ದಾರೆ. ಹಿಂದೊಮ್ಮೆ ಯಡಿಯೂರಪ್ಪ ಜೈಲು ಸೇರಿದಾಗ, ಅವರಿಗೆ ಅವಮಾನ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದರು.












Click it and Unblock the Notifications