ಟಿಕೆಟ್ ಕೇಳಿದ ರೈಲ್ವೆ ಇನ್ಸ್‌ಪೆಕ್ಟರಿಗೆ ಗುಂಡಿಕ್ಕಿ ಹತ್ಯೆ

ದೆಹಲಿಯತ್ತ ಹೊರಟಿದ್ದ ಮಹಾನಂದ ಎಕ್ಸ್ ಪ್ರೆಸ್ ರೈಲಿನಲ್ಲಿ ಶುಕ್ರವಾರ ಈ ದುರ್ಘಟನೆ ನಡೆದಿದೆ. ಪಾತಕಿಗಳು ಹತ್ಯೆಯ ನಂತರ ಪರಾರಿಯಾಗಿದ್ದಾರೆ.
ಖಿಫಾಯತುಲ್ಲಾ ಮೃತ ದುರ್ದೈವಿ. ಇವರು ಉತ್ತರಪ್ರದೇಶದ ಮೊರಾದಾಬಾದಿನವರು. ಷಹೀಬಾಬಾದ್ ಸ್ಟೇಷನ್ ಬಳಿ ಈ ಹತ್ಯೆ ನಡೆದಿದೆ. ಗುಂಡೇಟು ತಿಂದ ಮುಖ್ಯ ಟಿಕೆಟ್ ಇನ್ಸ್‌ಪೆಕ್ಟರ್ ಖಿಫಾಯತುಲ್ಲಾ ಅವರನ್ನು ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅತೀವ ರಕ್ತಸ್ರಾವದಿಂದ ಅವರು ಅಸುನೀಗಿದರು.
ದುಷ್ಕರ್ಮಿಗಳು ಅಧಿಕಾರಿಗೆ ಗುಂಡೇಟು ಹೊಡೆಯುತ್ತಿದ್ದಂತೆ ಆಘಾತಕ್ಕೊಳಗಾದ ಇತರೆ ಪ್ರಯಾಣಿಕರು ರೈಲಿನ ತುರ್ತು ನಿಲುಗಡೆ ಚೈನ್ ಎಳೆದು ರೈಲನ್ನು ನಿಲ್ಲಿಸಿದರು. ಅದರ ಸದುಪಯೋಗಪಡಿಸಿಕೊಂಡ ದುಷ್ಕರ್ಮಿಗಳು ರೈಲಿಳಿದು ಪರಾರಿಯಾಗಿದ್ದಾರೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.












Click it and Unblock the Notifications