ಯಡಿಯೂರಪ್ಪ ಬಿಜೆಪಿಗೆ ವಾಪಸಾದರೆ ಸ್ವಾಗತ: ಈಶ್ವರಪ್ಪ

'ತಾಯಿ ಸಮಾನವಾದ ಬಿಜೆಪಿಯನ್ನು ಬಿಎಸ್‌ವೈ ತೊರೆದು ಹೋಗುತ್ತಾರೆಂದು ಕನಸಲ್ಲೂ ಯೋಚಿಸಿರಲಿಲ್ಲ. ಯಡಿಯೂರಪ್ಪ ಮತ್ತೆ ಬಿಜೆಪಿಗೆ ಮರಳಿದರೆ ಬರಬೇಡಿ ಎಂದು ಯಾರು ಹೇಳಲು ಸಾಧ್ಯವಿಲ್ಲ. ಅವರು ಮನೆಗೆ ಮರಳಿ ಬಂದರೆ ಸ್ವಾಗತ ಕೋರುತ್ತೇನೆ. ಮರಳಿ ಬಂದರೆ ಅವರೇ ನಮ್ಮ ನಾಯಕರು. ಆದರೆ ಅವರು ಬಿಜೆಪಿಗೆ ಹಿಂದಿರುಗುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ' ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
'ಯಡಿಯೂರಪ್ಪ ಆತುರದ ನಿರ್ಧಾರ ತೆಗೆದುಕೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಅವರು ಇಷ್ಟು ದಿನ ನಮಗೆ ನಾಯಕರಾಗಿದ್ದರು. ಅವರಿನ್ನು ನಮ್ಮ ನಾಯಕರಲ್ಲ' ಎಂದೂ ಈಶ್ವರಪ್ಪ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
'ಬಿಎಸ್‌ವೈ ರಾಜೀನಾಮೆ ತಮಗೆ ವೈಯಕ್ತಿಕವಾಗಿ ನೋವು ತಂದಿದೆ. ಹೊಸ ಪಕ್ಷ ಕಟ್ಟಲು ಹೊರಟಿರುವ ಅವರಿಗೆ ರಾಜಕಾರಣದಲ್ಲಿ ಒಳ್ಳೆಯದಾಗಲಿ, ದೇವರು ಒಳ್ಳೆಯದು ಮಾಡಲಿ' ಎಂದೂ ಅವರು ಭಾವುಕರಾಗಿ ಶುಕ್ರವಾರ ಹೇಳಿದ್ದಾರೆ.
ಈಶ್ವರಪ್ಪ ಸವಾಲು: '70 ಶಾಸಕರು, ಹಲವು ಸಚಿವರು ತಮ್ಮೊಂದಿಗಿದ್ದಾರೆ ಎನ್ನುತ್ತಿದರು. ಇದೀಗ ಎಲ್ಲಿದ್ದಾರೆಂಬುವುದು ತೋರಿಸಲಿ?' ಎಂದು ಸವಾಲು ಹಾಕಿದರು. ಡಿ. 9ರಂದು ಹಾವೇರಿ ಸಮಾವೇಶದಲ್ಲಿ ಗುರುತಿಸಿಕೊಳ್ಳುವವರ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಇದೇ ವೇಳೆ ಪುನರುಚ್ಚರಿಸಿದ್ದಾರೆ.












Click it and Unblock the Notifications