ಕೆಜೆಪಿ ಲಾಂಛನ ಹಿಡಿದು ಬಿಜೆಪಿಗೆ ಬಿಎಸ್ ವೈ ಗುಡ್ ಬೈ
ಬೆಂಗಳೂರು, ನ. 28: ಬಿಜೆಪಿ ಬಿಟ್ಟು ಹೊಸ ಪಕ್ಷ ಕಟ್ಟುತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಶುಕ್ರವಾರ(ನ.30)ದ ಕಾರ್ಯಕ್ರಮಗಳ ವಿವರಗಳನ್ನು ಕರ್ನಾಟಕ ಜನತಾ ಪಕ್ಷ ಹೊರ ಹಾಕಿದೆ.
ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ(ನ.30,2012) ಬೆಳಗ್ಗೆ 10.30ರ ಸುಮಾರಿಗೆ ಶಿಕಾರಿಪುರದ ಬಿಜೆಪಿ ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಈ ಮೂಲಕ ಮೂರು ದಶಕಗಳಿಗೂ ಅಧಿಕ ಕಾಲದ ಬಿಜೆಪಿ ನಂಟನ್ನು ಕಡೆದುಕೊಳ್ಳಲಿದ್ದಾರೆ ಎಂದು ಕೆಜೆಪಿ ವಕ್ತಾರರು ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಭೆ ಸೇರಲಾಗುತ್ತೆ. ಅಲ್ಲಿಂದ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ವಿಧಾನಸೌಧದವರೆಗೂ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವಿಧಾನಸೌಧಕ್ಕೆ ತೆರಳಿ ಕೆಜೆ ಬೋಪಯ್ಯ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ ರಾಜಭವನದ ತನಕ ಪಾದಯಾತ್ರೆ ನಡೆಸಿದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಾಗಲೂ ಪಾದಯಾತ್ರೆ ಹೊರಡುವುದಾಗಿ ಬಿಎಸ್ ಯಡಿಯೂರಪ್ಪ ಹೇಳಿದ್ದರು. ಆದರೆ, ಈಗ ಪ್ಲ್ಯಾನ್ ಚೇಂಜ್ ಮಾಡಲಾಗಿದೆ.
ಬೋಪಯ್ಯ ಅವರ ಕೈ ಕುಲುಕಿ ಹೊರ ಬಿದ್ದನಂತರ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರಿಗೆ ರಾಜೀನಾಮೆ ಪತ್ರ ತಲುಪಲಿದೆ. ಈಶ್ವರಪ್ಪ ಅವರಿಗೆ ರಾಜೀನಾಮೆಯನ್ನು ಖುದ್ದು ಯಡಿಯೂರಪ್ಪ ನೀಡುತ್ತಾರೋ, ಅಥವಾ ಫ್ಯಾಕ್ಸ್ ಮೂಲಕ ಕಳುಹಿಸುತ್ತಾರೋ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ರಾಜೀನಾಮೆ ಸಲ್ಲಿಸಿದ ಬಳಿಕ ಮುಕ್ತವಾಗಿ ರಾಜ್ಯದೆಲ್ಲೆಡೆ ಸಂಚರಿಸಲಿದ್ದಾರೆ. ಡಿ.9ರಂದು ಹಾವೇರಿ ಸಮಾವೇಶದಲ್ಲಿ ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಉದಯವಾಗಲಿದೆ ಎಂದು ಕೆಜೆಪಿ ಮೂಲಗಳು ಹೇಳಿದೆ.

ಕೆಜೆಪಿ ವಿಶೇಷ ಲಾಂಛನ: ಹೊಸ ಪ್ರಾದೇಶಿಕ ಪಕ್ಷ ಕೆಜೆಪಿಗೆ ಚುನಾವಣಾ ಚಿನ್ಹೆ ಸಿಗಬೇಕಾದರೆ ಕನಿಷ್ಠ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನ ತನಕವಾದರೂ ಕಾಯಬೇಕು. ಮುಂದಿನ ಚುನಾವಣೆ ವೇಳೆಗೆ ಸರಿಯಾಗಿ ಸಿಗುವ ಸಾಧ್ಯತೆಯೂ ಇದೆ. ಅಲ್ಲಿ ತನಕ ಯಡಿಯೂರಪ್ಪ ಅವರು ಕಾಯಬೇಕು.
ಕೆಜೆಪಿಗೆ ಸೈಕಲ್ ಅಥವಾ ಉಳುವ ರೈತನ ಚಿನ್ಹೆ ಸಿಗುವುದಕ್ಕೂ ಮುನ್ನ ವಿಶಿಷ್ಟ ಲಾಂಛನ ತಯಾರಿಸಲಾಗಿದೆ. ನ.30 ರಂದೇ ಹೊಸ ಲಾಂಛನ ಬಿಡುಗಡೆಯಾಗಲಿದೆ. ಕೆಜೆಪಿ ಲಾಂಛನ ಹಿಡಿದುಕೊಂಡು ಯಡಿಯೂರಪ್ಪ ಸಂಚರಿಸಲಿದ್ದಾರೆ.
ಕೆಜೆಪಿ ಲಾಂಛನದಲ್ಲಿ ಹಳದಿ, ಬಿಳಿ ಹಾಗೂ ಹಸಿರು ಬಣ್ಣಗಳಿದೆ. ಮಧ್ಯಭಾಗದಲ್ಲಿ ಸೈಕಲ್ ಹಾಗೂ ನೇಗಿಲು ಉಳುವ ರೈತನ ಚಿತ್ರ ಇದೆ.
ಹಳದಿ ಬಣ್ಣ ಆಕ್ರಮಣವನ್ನು ಎತ್ತಿ ಹಿಡಿದು ಸ್ನೇಹ ಭಾವ ತೋರುತ್ತದೆ, ಬಿಳಿ ಬಣ್ಣ ಶಾಂತಿ ಸಂಕೇತ, ಹಸಿರು ಪ್ರಗತಿಯ ಸಂಕೇತ ಎಂದು ಕೆಜೆಪಿ ಹೇಳಿದೆ.
ಕೆಜೆಪಿಗೆ ಸೈಕಲ್ ನೀಡುವುದೋ ಅಥವಾ ನೇಗಿಲು ಉಳುವ ರೈತನ ಚಿನ್ಹೆ ನೀಡುವುದೋ ಎಂದು ಚುನಾವಣಾ ಆಯೋಗ ತಲೆ ಕೆಡಿಸಿಕೊಳ್ಳಬಾರದೆಂದು ಯಡಿಯೂರಪ್ಪ ಈ ರೀತಿ ಉಪಾಯ ಮಾಡಿದ್ದಾರೆ.
ಒಂದು ವೇಳೆ ಆಯೋಗ ಕೂಡಾ ಇದೇ ಲಾಂಛನಕ್ಕೆ ಒಪ್ಪಿಗೆ ನೀಡಿದರೆ, ಹೊಸ ಇತಿಹಾಸ ರಚನೆಯಾಗಲಿದೆ. ಒಂದೇ ಗುರುತಿನಲ್ಲಿ ಎರಡು ಚಿತ್ರಗಳಿರುವ ವಿಶೇಷ ಲಾಂಛನ ಕೆಜೆಪಿ ಪಕ್ಷದ ಪಾಲಾಗಲಿದೆ.
ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ಹಂಚುವ ಯೋಜನೆ ಆರಂಭಿಸಿದ ನೆನಪಿನಲ್ಲಿ 'ಸೈಕಲ್' ಹಾಗೂ ತಾವು ರೈತ ಪರ ಎಂದು ಕಾಳಜಿ ವ್ಯಕ್ತಪಡಿಸಲು 'ನೇಗಿಲು ಉಳುವ ರೈತ' ನ ಚಿನ್ಹೆ ಬಳಸಲು ಯಡಿಯೂರಪ್ಪ ಯೋಜಿಸಿದ್ದಾರೆ.












Click it and Unblock the Notifications