ಎಚ್ ಡಿ ಕುಮಾರಸ್ವಾಮಿ ಒಬ್ಬ ಕಾಡು ಮನುಷ್ಯ
ಹಾಸನ, ನ 26: ರಾಜಕೀಯ ನಾಯಕರುಗಳ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಒಬ್ಬ 'ಕಾಡು ಮನುಷ್ಯ' ಎಂದು ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ವಿ ಧನಂಜಯ ಕುಮಾರ್ ಆರೋಪಿಸಿದ್ದಾರೆ.
ಕುಮಾರಸ್ವಾಮಿ ಒಬ್ಬ ಮಾಜಿ ಮುಖ್ಯಮಂತ್ರಿ ಅನ್ನುವುದನ್ನು ಮರೆಯಬಾರದು. ನಮ್ಮ ಪಕ್ಷದ ವಿರುದ್ದ ಅವರು ಆಡಿದ ಮಾತು ಅವರಿಗೆ ಶೋಭೆ ತರುವಂತದಲ್ಲ, ಕಾಡು ಮನುಷ್ಯರ ರೀತಿಯಲ್ಲಿ ಅವರು ಮಾತನಾಡಿದ್ದಾರೆಂದು ಧನಂಜಯ ಕುಮಾರ್ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ನಮ್ಮ ಪಕ್ಷವನ್ನು ಕಳ್ಳರ ಜೈಲಿಗೆ ಹೋಗುವ ಪಕ್ಷ ಎಂದು ಟೀಕಿಸಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರ ಬಾಯಿಯಿಂದ ಇಂತಹ ಮಾತು ಬರಬಾರದು. ಅವರ ಮತ್ತು ಅವರ ಕುಟುಂಬದ ಮೇಲೂ ಭ್ರಷ್ಟಾಚಾರದ ಕೇಸುಗಳಿವೆ. ರಾಜ್ಯವನ್ನು ಯಾರು ಲೂಟಿ ಮಾಡಿದ್ದಾರೆನ್ನುವುದು ರಾಜ್ಯದ ಜನತೆಗೆ ಅರಿತಿದೆ ಎಂದು ಧನಂಜಯ ಕುಮಾರ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಕುಮಾರಸ್ವಾಮಿಯವರು ಮೊದಲು ತಾನು ಆರಿಸಿ ಬಂದ ಕ್ಷೇತ್ರದ ಅಭಿವೃದ್ದಿ ಬಗ್ಗೆ ಗಮನ ಹರಿಸಲಿ. ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಬೇರೆ ಪಕ್ಷದವರನ್ನು ಟೀಕಿಸಿವುದೇ ದೈನಂದಿನ ಕಾಯಕ ಎಂದು ಧನಂಜಯ ಕುಮಾರ್ ಲೇವಡಿ ಮಾಡಿದ್ದಾರೆ.
ದೇವೇಗೌಡರ ಕುಟುಂಬ ಎಲ್ಲರ ಬಗ್ಗೆ ಕೀಳು ಮಟ್ಟದಲ್ಲಿ ಟೀಕಿಸುವುದಕ್ಕೆ ಹೆಸರುವಾಸಿ ಅನ್ನೋದನ್ನಾ ನಮ್ಮ ರಾಜ್ಯದ ಜನತೆ ಅರಿತಿದಿದ್ದಾರೆ. ಅವರ ಹಾಗೆ ಕೀಳು ಶಬ್ದ ಬಳಸಿ ಚಪ್ಪಾಳೆ ಗಿಟ್ಟಿಸುವ ಅಗತ್ಯ ನಮಗಿಲ್ಲ. ಇನ್ನಾದರೂ ಮಾತನಾಡುವ ಭರದಲ್ಲಿ ಒಳ್ಳೆ ಶಬ್ದವನ್ನು ಬಳಸಿ ಎಂದು ಕುಮಾರಸ್ವಾಮಿಗೆ ಧನಂಜಯ ಕುಮಾರ್ ಕಿವಿಮಾತು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಹೊಸ ಪಕ್ಷಕ್ಕೆ ಕರ್ನಾಟಕ ಜನತಾ ಪಕ್ಷ ಎಂದು ನಾಮಕರಣ ಮಾಡುವ ಬದಲು 'ಕಳ್ಳರ ಜೈಲು ಪಕ್ಷ' ಎಂದು ಹೆಸರಿಡುವುದು ಸೂಕ್ತ ಎಂದು ಎಚ್ ಡಿ ಕುಮಾರಸ್ವಾಮಿ ಪಕ್ಷದ ಕಚೇರಿಯಲ್ಲಿ ಲೇವಡಿ ಮಾಡಿದ್ದರು.












Click it and Unblock the Notifications