ಚೆನ್ನೈನಲ್ಲಿ ವಾಯುಭಾರ ಕುಸಿತ, ಇಲ್ಲಿ 2 ದಿನ ಮಳೆ

ಎಂದಿನಂತೆ ಚೆನ್ನೈನಲ್ಲಿ ವಾಯು ಭಾರ ಕುಸಿತ ಉಂಟಾಗಿದೆ. ದಕ್ಷಿಣ ಒಳನಾಡಿನಲ್ಲಿ 2 ದಿನ ಮಳೆ ಬೀಳಲಿದೆ.
ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ ಸಣ್ಣ ಮಳೆ ಆಗುವ ನಿರೀಕ್ಷೆಯಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಮ್ಮಿಯಾಗುವವರೆಗೂ ಇದೇ ರೀತಿ ಹವಾಮಾನ ಮುಂದುವರೆಯಲಿದೆ. ಬೆಂಗಳೂರು, ಮೈಸೂರು, ಮಂಡ್ಯಗಳಲ್ಲಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಬಿ. ಪುಟ್ಟಣ್ಣ ಅವರು ಮುನ್ಸೂಚನೆ ನೀಡಿದ್ದಾರೆ.
2 ವಾರದ ಹಿಂದೆ ನೀಲಂ ಸೈಕ್ಲೋನ್ ಕಾಣಿಸಿಕೊಂಡಾಗಲೂ ಬೆಂಗಳೂರಿಗರು ಮನೆ ಬಿಟ್ಟು ಹೊರಗೆ ಬರಲಿಲ್ಲ. ಅಕಸ್ಮಾತ್ ಅಂತಹುದೇ ಒಂದು ಸೈಕ್ಲೋನ್ ಈಗೇನಾದರೂ ಬಂದರೆ ಮುಗೀತು ಕಥೆ. ಚಳಿ ವಿಪರೀತ ಎನಿಸುವಷ್ಟು ಬೆಂಗಳೂರಿಗರನ್ನು ಕಾಡಲಿದೆ. ಜೊತೆಗೆ ಮಳೆ ಕೂಡಾ ಸೇರಲಿದೆ.
ದಕ್ಷಿಣ ಭಾರತದಲ್ಲಿ ಮುಂಗಾರು ತನ್ನ ಕೆಲಸವನ್ನು ಮುಗಿಸಿ ಹೊರಟಿದ್ದು, ಹಿಂಗಾರಿಗೆ ದಾರಿಮಾಡಿ ಕೊಟ್ಟಿದೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ದಟ್ಟ ಕಾರ್ಮೋಡಗಳು ಆಕ್ರಮಿಸಿಕೊಂಡಿದ್ದು, ಭರ್ಜರಿಯಾಗಿ ಮಳೆ ಸುರಿಸುತ್ತಿವೆ. ಮುಂಗಾರು ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಿಂದಲೂ ಹಿಂದೆ ಸರಿದಿವೆ.
ವಾಸ್ತವವಾಗಿ ಚಳಿಗಾಲಕ್ಕೆ ಇನ್ನೂ 2 ವಾರ ಬಾಕಿಯಿದೆ. ಆದರೆ ಅದಾಗಲೇ ಮೂಡಣ ದಿಕ್ಕಿನಿಂದ ಕರ್ನಾಟಕದೊಳಕ್ಕೆ ಒಣ ಗಾಳಿ ನುಸುಳುತ್ತಿದೆ. ಹಾಗಾಗಿ ಈ ಚಳಿಗಾಲದ ದಿಢೀರ್ ಆಗಮನ, ದೂರದ ರಾಯಚೂರಿನಲ್ಲಿ 11.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಕೃಷಿ ಹವಾಮಾನ ತಜ್ಞ ಎಂಬಿ ರಾಜೇಗೌಡ ಅವರು ಹೇಳುವಂತೆ ಇಡೀ ಕರ್ನಾಟಕದ ಒಳ ಪ್ರದೇಶಗಳತ್ತ ಮೂಡಣ ದಿಕ್ಕಿನಿಂದ ಒಣಗಾಳಿ ಜತೆಗೆ ಶೀತಗಾಳಿಯೂ ನುಸುಳುತ್ತಿದೆ. ಆದ್ದರಿಂದ ದಿಢೀರನೆ ಚಳಿ ಕಾಣಿಸಿಕೊಂಡಿದೆ. ಕರ್ನಾಟಕದ ಇತರೆ ಭಾಗಗಳಲ್ಲು ಇದೇ ಪರಿಸ್ಥಿತಿ ಕಾಣಿಸಿಕೊಳ್ಳಲಿದೆ. ಇದು ಜನವರಿ ಮಧ್ಯ ಭಾಗದವರೆಗೂ ಮುಂದುವರಿಯಲಿದೆ.












Click it and Unblock the Notifications