ಚಿನ್ನದ ಗಟ್ಟಿ ಸಾಗಿಸುತ್ತಿದ್ದ ಭಟ್ಕಳದ ವ್ಯಕ್ತಿ ಸೆರೆ ಸಿಕ್ಕ

ಭಟ್ಕಳದ ಯುವಕ 25 ವರ್ಷದ ಅಬ್ದುಲ್ ಖಾದಿರ್ ಸೆರೆ ಸಿಕ್ಕ ವ್ಯಕ್ತಿ. ಈತ ಮಂಗಳೂರಿನ ಫಿಷರೀಸ್ ಕಾಲೇಜಿನ ಪದವೀಧರ. ನಿನ್ನೆ ಬುಧವಾರ ಬೆಳಗ್ಗೆ (ನ.21) ದುಬೈನಿಂದ Air India Express ವಿಮಾನದಲ್ಲಿ ಬೆಳಗ್ಗೆ 6 ಗಂಟೆಗೆ ಬಂದಿಳಿದ ಅಬ್ದುಲ್ ನನ್ನು ಕಂದಾಯ ಜಾಗೃತದಳದ ಅಧಿಕಾರಿಗಳು ತಕ್ಷಣ ವಶಕ್ಕೆ ತೆಗೆದುಕೊಂಡರು. ಅಬ್ದುಲ್ ಖಾದಿರ್ ನನ್ನು ಡಿಸೆಂಬರ್ 15ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಬ್ದುಲ್ ಒಳ ಉಡುಪಿನಲ್ಲಿತ್ತು ಚಿನ್ನದ ಬಿಸ್ಕತ್ : ಅಬ್ದುಲ್ ಖಾದಿರ್ ತನ್ನ ಒಳ ಉಡುಪಿನಲ್ಲಿ ಭಾರಿ ಮೌಲ್ಯದ ಚಿನ್ನಾಭರಣಗಳ ಜತೆಗೆ 1.11 ಕೆಜಿ ತೂಕದ 35 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾನೆ ಎಂಬ ಮಾಹಿತಿ ಮೊದಲೇ ಬಂದಿತ್ತು. ಹಾಗಾಗಿ ಆತನನ್ನು ವಶಕ್ಕೆ ತೆಗೆದುಕೊಂಡೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧನದ ಬಳಿಕ ತಪಾಸಣೆ ಮಾಡಲಾಗಿ ಅಬ್ದುಲ್ ಖಾದಿರ್ ತನ್ನ ಬಳಿ ಕಳ್ಳ ಮಾಲು ಇಲ್ಲವೆಂದು ಅಧಿಕಾರಿಗಳಿಗೆ ತಿಳಿಸಿದ. ಆದರೆ ಖಚಿತ ಮಾಡಹಿತಿ ಪಡೆದಿದ್ದ ಅಧಿಕಾರಿಗಳು ಆತನ ಬಟ್ಟೆ ಬಿಚ್ಚಿ ನೋಡಿದಾಗ ಗುಪ್ತ ಸ್ಥಳಗಳಲ್ಲಿ ಚಿನ್ನ ಅಡಗಿ ಕುಳಿತಿದ್ದು ಪತ್ತೆಯಾಯಿತು. ಅದಕ್ಕೂ ಮುನ್ನ ಅಬ್ದುಲ್ ಖಾದಿರ್ ಕಸ್ಟಮ್ಸ್ ಮುಂದೆ ತನ್ನ ಬಳಿ ಚಿನ್ನಾಭರಣ ಯಾವುದೂ ಇಲ್ಲ ಎಂದು ಘೋಷಿಸಿದ್ದ.
ಕಳೆದೊಂದು ತಿಂಗಳಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡುಬಂದ ಮೂರನೆಯ ಕಳ್ಳ ಸಾಗಣೆ ಪ್ರಕರಣ ಇದಾಗಿದೆ.












Click it and Unblock the Notifications