ಗಂಡನ ಅನೈತಿಕ ಸಂಬಂಧ, ಹೆಂಡತಿಯ ಕಗ್ಗೊಲೆ

ಇಲ್ಲಿಗೆ ಸಮೀಪದ ದಂಟಳ್ಳಿ ಗ್ರಾಮದ ನಿವಾಸಿ ಸಿದ್ದಾಚಾರಿ ಹಾಗೂ ವಿಶಾಲಾಕ್ಷಿ ದಂಪತಿಗಳ ಎರಡನೆ ಪುತ್ರಿ ವಸಂತ (26) ಎಂಬಾಕೆಯೇ ಬರ್ಬರವಾಗಿ ಹತ್ಯೆಗೀಡಾದ ದುರ್ದೈವಿ. ಹತ್ಯೆ ಮಾಡಿರುವ ವಸಂತಳ ಗಂಡನ ಅಣ್ಣ ತಲೆಮರೆಸಿಕೊಂಡಿದ್ದಾನೆ.
ಕಳೆದ ಏಳು ವರ್ಷಗಳ ಹಿಂದೆ ಪೊನ್ನಾಚಿ ಗ್ರಾಮದ ಚಿಕ್ಕತಾಯಮ್ಮ ಎಂಬುವವರ ಎರಡನೆ ಪುತ್ರ ಸಿದ್ದಪ್ಪಾಜಿ ಎಂಬಾತನ ಜೊತೆ ಈಕೆಯ ವಿವಾಹವಾಗಿತ್ತು. ಮದುವೆ ಆಗಿ ಏಳು ವರ್ಷ ಕಳೆದರೂ ಸಂತಾನಪ್ರಾಪ್ತಿಯಾಗಿಲ್ಲದ ಕಾರಣ ಗಂಡನ ಮನೆಯಲ್ಲಿ ಆಗಾಗ ಕಲಹ ಉಂಟಾಗುತ್ತಿತ್ತು. ಇದರಿಂದ ಬೇಸತ್ತ ವಸಂತ ತವರುಮನೆಗೆ ಹೊರಟು ಹೋಗಿದ್ದಳು.
ಆದರೆ ಮೂರು ತಿಂಗಳ ಹಿಂದೆ, ಊರಿನ ಹಿರಿಯ ಮುಖಂಡರು ನ್ಯಾಯ ಪಂಚಾಯ್ತಿ ನಡೆಸಿ ಸಿದ್ದಪ್ಪಾಜಿ ಹಾಗೂ ವಸಂತರನ್ನು ಪೊನ್ನಾಚಿಯಲ್ಲೇ ಬೇರೆ ಮನೆ ಮಾಡಿ ಸಂಸಾರ ನಡೆಸಿಕೊಂಡು ಹೋಗಲು ಸೂಚಿಸಿದ್ದರು. ಅದರಂತೆ ಅವರ ಸಂಸಾರ ಸಾಗಿತ್ತು.
ಅನೈತಿಕ ಸಂಬಂಧ : ಈ ನಡುವೆ, ವಸಂತಳ ಗಂಡ ಸಿದ್ದಪ್ಪಾಜಿಗೂ ಹಾಗೂ ಆತನ ಅತ್ತಿಗೆಗೂ ಅನೈತಿಕ ಸಂಬಂಧವಿತ್ತು ಎನ್ನಲಾಗಿದ್ದು, ಇದು ಪತ್ನಿ ವಸಂತನಿಗೆ ತಿಳಿದಿದ್ದರಿಂದ ರಂಪಾಟವಾಗಿತ್ತು. ಇದರಿಂದ ಕುಪಿತಗೊಂಡ ಸಿದ್ದಪ್ಪಾಜಿ ಅಣ್ಣ ರಾಚಪ್ಪಾಜಿ ತಮ್ಮ ಇಲ್ಲದ ವೇಳೆ ಕುಡಿದ ಮತ್ತಿನಲ್ಲಿ ವಸಂತಳ ಮನೆಗೆ ಬಂದು ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆರೋಪಿ ರಾಚಪ್ಪಾಜಿ ಪರಾರಿಯಾಗಿದ್ದಾನೆ.
ವಿಷಯ ತಿಳಿದ ವಸಂತಳ ಅಣ್ಣ ರಾಜು ಮಲೈ ಮಹದೇಶ್ವರ ಬೆಟ್ಟ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಕೊಳ್ಳೇಗಾಲ ಡಿವೈಎಸ್ಪಿ ಚನ್ನಬಸವಣ್ಣ ಲಂಗೋಟಿ ಹಾಗೂ ಮಲೈ ಮಹದೇಶ್ವರಬೆಟ್ಟ ಠಾಣೆಯ ವೃತ್ತ ನಿರೀಕ್ಷಕ ಶಿವಸ್ವಾಮಿ ಮತ್ತು ಸಿಬ್ಬಂದಿ ಭೇಟಿ ನೀಡಿ, ಪೊನ್ನಾಚಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಲೋಕೇಶ್ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಶವವನ್ನು ಒಪ್ಪಿಸಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.












Click it and Unblock the Notifications