ಪಟಾಕಿ ಲೋಟ ಎದೆಗೆ ಬಡಿದು ಬಾಲಕನ ಸಾವು

ಮೂರನೆಯ ತರಗತಿಯಲ್ಲಿ ಓದುತ್ತಿದ್ದ ಸಾದಿಕ್ ಪಾಷ (7) ಪಟಾಕಿ ಆಸೆಗೆ ಬಲಿಯಾದ ಮಗು. ಶುಕ್ರವಾರ ಸಂಜೆ ಏನಾಯಿತು ಅಂದರೆ ಶಾಲೆ ಮುಗಿಸಿ ಮನೆಗೆ ಬಂದವನೆ ಶಾಲಾ ಬ್ಯಾಗ್ ಮನೆಯಲ್ಲಿ ಬಿಸಾಕಿ ಪಟಾಕಿ ಹಚ್ಚಲು ಓಡಿದ್ದಾನೆ.
ಮಕ್ಕಳೇ ಹಾಗೆ ಪಟಾಕಿ ಹಚ್ಚುವಾಗ ತಮ್ಮದೇ ಆದ ನೂತನ ವಿಧಾನಗಳನ್ನು ಕಂಡುಕೊಳ್ಳುತ್ತವೆ. ಆದರೆ ವಿಧಿ ಹೊಂಚಿಹಾಕುತ್ತಿದೆ ಎಂಬುದು ಅವುಗಳ ಅರಿವಿಗೆ ಬರುವುದಿಲ್ಲ. ಸ್ವಲ್ಪ ಜಾಗ್ರತೆ ವಹಿಸೋಣ ಅನ್ನೋ ಮಾತೇ ಇಲ್ಲ.
ಸಾದಿಕ್ ಸಹ ಅದನ್ನೇ ಮಾಡಿದ್ದಾನೆ. ಪಟಾಕಿ ಸಿಕ್ತು ಅಂತ ಹೊಡೆಯೋಕ್ಕೆ ಹೋಗಿದ್ದಾನೆ... ಹಚ್ಚಿದ ಪಟಾಕಿಯ ತಲೆ ಮೇಲೆ ಲೋಟ ಮುಚ್ಚಿಟ್ಟಿದ್ದಾನೆ. ಆದರೆ ಅವನಿಗೆ ಧಾವಂತ ಶುರುವಾಗಿದೆ. ಪಟಾಕಿ ಹೊತ್ತಿಕೊಂಡಿದೆಯೋ ಇಲ್ವೋ ಎಂದು ಬಗ್ಗಿ ನೋಡಿದ್ದಾನೆ. ಅಷ್ಟೇ... ಪಟಾಕಿ ಹಚ್ಚಿದ್ದ ಲೋಟ ಸೀದಾ ಅವನೆದೆಗೆ ಬಡಿದು ಹೃದಯದ ಕವಾಟು ಸಿಡಿದಿದೆ. ಮುಗ್ಧ ಬಾಲಕ ಸಾದಿಕ್ ಸ್ಥಳದಲ್ಲೇ ... ಸಾವಿಗೀಡಾಗಿದ್ದಾನೆ.
ಇದಲ್ಲದೆ ಬೆಂಗಳೂರು ಸೇರಿದಂತೆ ಹಲವು ಕಡೆ ಪ್ರತಿ ಬಾರಿಯಂತೆ ಈ ಸಲವೂ ದೀಪಾವಳಿ ಸಂದರ್ಭದಲ್ಲಿ ಒಂದಷ್ಟು ಅವಘಡಗಳು ಸಂಭವಿಸಿವೆ. ಅನೇಕ ಮಕ್ಕಳು ಕಣ್ಣುಗಳನ್ನು ಕಳೆದುಕೊಂಡಿವೆ. ಕೆಲವು ಮೈಕೈಗೆ ಗಾಯ ಮಾಡಿಕೊಂಡಿವೆ.
ಆದರೂ ಮಾಧ್ಯಮಗಳು/ ಸರಕಾರದ ಪ್ರಚಾರ ಕಾರ್ಯಗಳಿಂದ ಪಟಾಕಿ ಹಚ್ಚುವ ಅಥವಾ ಹಚ್ಚುವ ತಂಟೆಯೇ ಬೇಡ ಎನ್ನುವುದರ ಬಗ್ಗೆ ಜನರಲ್ಲಿ ಸಾಕಷ್ಟು ತಿಳಿವಳಿಕೆ ಬಂದಿದೆ. ಆದ್ರೂ ಇಂತಹ ಅವಘಡಗಳು ನಡೆದುಹೋಗುತ್ತವೆ. ದೀಪಾವಳಿಯಲ್ಲಿ ಬೆಳಕು ರಾರಾಜಿಸಬೇಕು. ಆದರೆ ಕೆಲ ಮನೆಗಳಲ್ಲಿ ಅಂಧಕಾರ ಮೂಡಿ, ಎಲ್ಲಡೆ ವಿಷಾದದ ಛಾಯೆ ಮೂಡಿಸುತ್ತದೆ.












Click it and Unblock the Notifications