ಸ್ವಾತಂತ್ರ್ಯ ಅಂದ್ರೆ ಸ್ವೇಚ್ಛೆಯಲ್ಲ : ಪಬ್ಲಿಕ್ ಟಿವಿ ರಂಗನಾಥ್

ಅವರು ಶುಕ್ರವಾರ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ, ರಾಜ್ಯ ವಾರ್ತಾ ಇಲಾಖೆ ಹಾಗೂ ಭಾರತೀಯ ವಿದ್ಯಾಭವನದ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿ ಏರ್ಪಡಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಉದ್ಘಾಟನೆ ಹಾಗೂ 'ಮಾಧ್ಯಮ ಸ್ವಾತಂತ್ರ್ಯ' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.
ದೇಶದಲ್ಲಿ ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿಯೂ ಇರುವಂತೆ ಪತ್ರಿಕಾ ಸ್ವಾತಂತ್ರ್ಯದ ಜೊತೆಗೆ ಮಾಧ್ಯಮವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಮಾಧ್ಯಮಗಳ ವಿಸ್ತಾರ, ಆಳ, ಅಗಲದಲ್ಲಿ ಸರ್ಕಾರ ಮಾಧ್ಯಮಗಳನ್ನು ನಿಯಂತ್ರಿಸುವುದು ಸಾಧ್ಯವೆ ಇಲ್ಲ. ಆದರೆ ಮಾಧ್ಯಮ ಒಳಗೆ ಇರುವ ಲೋಪಗಳು ಮಾಧ್ಯಮವನ್ನು ತಿನ್ನುತ್ತಿವೆ. ಮಾಧ್ಯಮದ ಮೇಲೆ ಸರ್ಕಾರದ ನಿಯಂತ್ರಣ ಸಾಧುವಲ್ಲ, ಅದು ಆಗುವುದೂ ಇಲ್ಲ. ಪತ್ರಕರ್ತರು ಭ್ರಷ್ಟತೆಯ ಬಗ್ಗೆ ಬರೆಯಬೇಕೆ ವಿನಹ ಅದನ್ನು ಬಯಸಬಾರದು ಎಂದು ರಂಗನಾಥ್ ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ಮಾತನಾಡಿ, ಸರ್ಕಾರ ಎಂದರೆ ಗುಲಾಮಿ ಸಂಸ್ಥೆಯಲ್ಲ. ಜನತೆ ಒಳಿತು ಬಯಸುವ ಸಂಸ್ಥೆ. ಜನರಿಗಾಗಿ ಕಾರ್ಯ ನಿರ್ವಹಿಸುತ್ತದೆ. ಅಭಿವೃದ್ಧಿ ಕಾರ್ಯಗಳನ್ನೂ ಮಾಡುತ್ತದೆ. ಅದರಲ್ಲಿರುವ ಸಣ್ಣ ಪುಟ್ಟ ಲೋಪಗಳೇ ಪ್ರಧಾನವಾಗಬಾರದು ಎಂದರು.
ಮಾಧ್ಯಮ ಸ್ವಾತಂತ್ರ್ಯ ಬಗ್ಗೆ ಮಾಧ್ಯಮದವರೇ ಅರಿವು ಮೂಡಿಸಲಿ ಎಂಬುದು ಸರ್ಕಾರದ ಆಶಯ. ಇಳಿವಯಸ್ಸಿನಲ್ಲೂ ಪತ್ರಿಕಾ ದಿನಾಚರಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಹಿರಿಯರು ಇಲ್ಲಿದ್ದಾರೆ. ನಮ್ಮಲ್ಲಿ ಅಪರಾಧಿ ಪ್ರಜ್ಞೆ ಮೂಡಿದಾಗ ಮಾತ್ರ ಸಾಮಾಜಿಕ ಬದಲಾವಣೆ ಪ್ರಕ್ರಿಯೆ ಸಾಧ್ಯ ಈ ನಿಟ್ಟಿನಲ್ಲಿ ಆರಂಭವಾಗಿರುವ ಚರ್ಚೆ ಬದಲಾವಣೆಯ ಆರಂಭದ ಸೂಚನೆಯಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಭಾರತೀಯ ವಿದ್ಯಾಭವನದ ಮಾಧ್ಯಮ ಭಾರತಿ ನಿರ್ದೇಶಕ ಜಯರಾಮ ಅಡಿಗ ಅವರು 'ಕುಲಪತಿ ಡಾ: ಕೆ.ಎಂ. ಮುನ್ಶಿ 125ನೇ ವರ್ಷೋತ್ಸವ ಸ್ಮರಣೆ : ಧ್ಯೇಯನಿಷ್ಠ ಪತ್ರಿಕೋದ್ಯಮ' ಕುರಿತು ಮಾತನಾಡಿದರು. ಭಾರತೀಯ ವಿದ್ಯಾಭವನದ ಎಚ್.ಎನ್. ಸುರೇಶ್, ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications