ರೇಪ್ ಆರೋಪಿ 'ಪಿಂಕಿ' ಹೆಣ್ಣಲ್ಲ ಗಂಡು: ಪರೀಕ್ಷೆ ಸಾಬೀತು

ಮಧ್ಯಮಾಂತರದ ಓಟಗಾರ್ತಿಯಾಗಿದ್ದ ಪಿಂಕಿ, 2006ರ ದೋಹಾ ಏಶ್ಯನ್ ಗೇಮ್ಸ್‌ನ ರಿಲೇ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು. ಮಹಿಳಾ ಅಥ್ಲೀಟ್ ಎಂದೇ ತನ್ನನ್ನು ಗುರುತಿಸಿಕೊಂಡು, ಪಿಂಕಿ ಮಹಿಳಾ ಕ್ರೀಡಾಕೂಡಗಳಲ್ಲೇ ಭಾಗವಹಿಸಿದ್ದಳು ಎಂಬುದು ಗಮನಾರ್ಹ. ಇಂತಿಪ್ಪ ಪಿಂಕಿ, 2007ರಲ್ಲಿ ಕ್ರೀಡೆಯಿಂದ ನಿವೃತ್ತಿ ಪಡೆದಿದ್ದರು.
ಮದುರೈ ರಾಷ್ಟ್ರೀಯ ಕ್ರೀಡಾಕೂಟಕ್ಕೂ ಮುನ್ನ ಪಿಂಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ 'ವಿಪರೀತ ಎನಿಸುವಷ್ಟು ಪುರುಷ ಹಾರ್ಮೋನು' ಕಂಡುಬಂದಿತ್ತು. ಪಿಂಕಿ ಲಿಂಗದ ಬಗ್ಗೆ ಆಗಲೇ ಅನುಮಾನದ ಹೊಗೆ ಎದ್ದಿತ್ತು.
ಅದಾದನಂತರ ಪಿಂಕಿಯ ಲಿವ್ ಇನ್ ಪಾರ್ಟನರ್ ಅನಾಮಿಕಾ ಆಚಾರ್ಯ ಪಿಂಕಿ ವಿರುದ್ಧ ಅತ್ಯಾಚಾರ ಮತ್ತು ವಂಚನೆಯ ಆರೋಪ ಹೊರಿಸಿದರು. ಆಗ ಪಿಂಕಿ ಪ್ರಾಮಾಣಿಕ್ ಲಿಂಗದ ಕುರಿತು ಸಾಕಷ್ಟು ವಿವಾದ ಎದ್ದಿತು. ಇದೀಗ ನ್ಯಾಯಾಲಯಕ್ಕೆ ಸಲ್ಲಿಸಿರುವ ವೈದ್ಯಕೀಯ ಪರೀಕ್ಷೆಯ ಆಧಾರದಲ್ಲಿ ಆರೋಪಿಯು ''ಪುರುಷ'' ಎಂಬುದು ಸ್ಪಷ್ಟಗೊಂಡಿದೆ.
ನ್ಯಾಯಾಲಯ ಸೂಚನೆಯಂತೆ ಕೋಲ್ಕತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ವಿಶೇಷ ವೈದ್ಯರ ತಂಡ ಈ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದೆ. ಅದಕ್ಕೂ ಮೊದಲು ಬಾರಾಸಾತ್‌ನ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ನಡೆಸಿದ್ದ ಪಿಂಕಿ ಲಿಂಗ ಪರೀಕ್ಷೆಯ ವರದಿ ಅಸ್ಪಷ್ಟವಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಈಗ ಪಿಂಕಿ ಸ್ನೇಹಿತೆ ಅನಾಮಿಕಾ ಆಚಾರ್ಯ ಅವರ ದೂರಿನ ಮೇರೆಗೆ ಪಿಂಕಿ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣದಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ. 2012ರ ಜೂನ್‌ನಲ್ಲಿ ತನ್ನ ಗೆಳತಿ ವಿರುದ್ಧ ಅತ್ಯಾಚಾರ ನಡೆಸಿದ ಆರೋಪವನ್ನು ಪಿಂಕಿ ಮೇಲೆ ಹೊರಿಸಲಾಗಿತ್ತು. ಆ ಬಳಿಕ ಜೂನ್ 15ರಂದು ಆಕೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.












Click it and Unblock the Notifications