ನರೇಂದ್ರ ಮೋದಿ ಕೋತಿ ಆಗಿದ್ದಾಯ್ತು, ಈಗ ಇಲಿಯಂತೆ!

ಗುಜರಾತಿನ ಕಾಂಗ್ರೆಸ್ ಮುಖ್ಯಸ್ಥ ಅರ್ಜುನ್ ಮೋದ್ವಾಡಿಯಾ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕೋತಿ ಎಂದು ಜರಿದಿದ್ದಾಯ್ತು. ಈಗ ಮತ್ಯಾರೋ ಪುಣ್ಯಾತ್ಮ ಮೋದಿಯನ್ನು ಇಲಿಗೆ ಹೋಲಿಸಿ, ಧನ್ಯತಾ ಭಾವ ಅನುಭವಿಸಿದ್ದಾನೆ.
ಮಣಿಶಂಕರ್ ಅಯ್ಯರ್ ಎಂಬ ಕಾಂಗ್ರೆಸ್ಸಿನ ಪುರಾತನ ನಾಯಕ ಮೋದಿಯನ್ನು 'ಲಹು ಪುರುಷ್' ಅಂದರೆ ರಕ್ತಪಿಪಾಸು ಎಂದು ಬಣ್ಣಿಸಿದ್ದರೆ ಮತ್ತೊಬ್ಬರು ಮೋದಿ ಇಲಿಗೆ ಸಮಾನ ಎಂದು ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿದ್ದಾರೆ.
ಪೋರಬಂದರ್ ಬಳಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಮಣಿಶಂಕರ್, ಮೋದಿ ರಾವಣ ಇದ್ಹಾಂಗೆ. ಜತೆಗೆ ಆತ ಕ್ರೂರ ರಕ್ತಪಿಪಾಸುವೂ ಹೌದು ಎಂದು ಗಹಗಹಿಸಿದ್ದಾರೆ. ಮತ್ತೆಲ್ಲೋ ಪಲಾನಾಪುರದಲ್ಲಿ ಕಾಂಗ್ರೆಸ್ ಸಂಸದ ಹುಸೇನ್ ದಳವಿ ಮೋದಿಯನ್ನು ಇಲಿಗೆ ಹೋಲಿಸಿದ್ದಾರೆ. ಮೋದಿ ತನ್ನನ್ನು ಸರದಾರ್ ಪಟೇಲರಿಒಗೆ ಹೋಲಿಸಿಕೊಳ್ಳುತ್ತಾರೆ. ಆದರೆ ಆತ ವಾಸ್ತವದಲ್ಲಿ ಒಂದು ಇಲಿಯಷ್ಟೇ ಎಂದು ಹುಸೇನ್ ಹೇಳಿದ್ದಾರೆ.
ಇನ್ನು ಮೋದಿ ಮದ್ವೆ ಬಗ್ಗೆ ಈಗಾಗಲೇ ಸಾಕಷ್ಟು ಕಾಮೆಂಟುಗಳು ಬಂದಿವೆ. ಈ ಮಧ್ಯೆ ಪಕ್ಷದ ಹಿರಿಯ ನಾಯಕಿ ರೇಣುಕಾ ಚೌಧರಿ ಇದೇ ಮೋದಿ ಮದ್ವೆ ಬಗ್ಗೆ ಕಟಕಿಯಾಡಿದ್ದಾರೆ.
ಮಣಿಶಂಕರ್ ಅಯ್ಯರ್ ಗಾಂಧಿ ನಾಡು ಪೋರಬಂದರ್ ನಲ್ಲಿ ಹೇಳಿದ್ದೇನೆಂದರೆ - ನೀವೆಲ್ಲ ಅಂದುಕೊಂಡಂತೆ ಮೋದಿ ಲೋಹ್ ಪುರುಷ್ ಅಲ್ಲ; ಆತ ಲಹು ಪುರುಷ. ಉಕ್ಕಿನ ಮನುಷ್ಯನಲ್ಲ; ಬದಲಿಗೆ, ರಕ್ತಪಿಪಾಸು.
ಮೌತ್ ಆರ್ಗನ್ ಪಟು ಅಸ್ಕರ್ ಹೇಳೋದೇನು?
ಕರ್ನಾಟಕದ ಅಸ್ಕರ್ ಫರ್ನಾಂಡಿಸ್ ಸಹ ಮೋದಿಯನ್ನು ಹೀಯಾಳಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಖ್ಯಾತ ಮೌತ್ ಆರ್ಗನ್ ಪಟು, ನಮ್ಮ ಮಂಗಳೂರಿನ ಅಸ್ಕರ್ ಅವರು 'ಬೇರೆಯವರು (ಮೋದಿ ಹೆಸರು ಹೇಳದೆ) ಜನರನ್ನು ವಿಭಜಿಸುವುದರಲ್ಲೇ ಆನಂದ ಪಡುತ್ತಾರೆ. ಆದರೆ ನಮ್ಮ ಪಕ್ಷ ಎಲ್ಲರನ್ನೂ ಒಂದುಗೂಡಿಸುವ ತತ್ವದಲ್ಲಿ ನಂಬಿಕೆಯಿಟ್ಟಿದೆ. ಅದೇ ನಮ್ಮ ಗೆಲುವಿನ ಗುಟ್ಟು' ಎಂದು ವ್ಯಾಖ್ಯಾನಿಸಿದ್ದಾರೆ.
2007ರ ಚುನಾವಣೆಯಲ್ಲಿ ಏನಾಗಿತ್ತೆಂದರೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಂದಿ ಹೀಗೇ ಮೋದಿಯನ್ನು ಬಾಯಿಗೆ ಬಂದಂತೆ ಜರಿದಿದ್ದರು. ಆದರೆ ಮತದಾರ ಅದಕ್ಕೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದರು. ಈಗ ಹ್ಯಾಟ್ರಿಕ್ ಹಾದಿಯಲ್ಲಿರುವ ಮೋದಿಯನ್ನು ಅದೇ ಮತದಾರರು ಮಣೆ ಹಾಕುತ್ತಾರೋ ಅಥವಾ ಕಾಂಗ್ರೆಸ್ಸಿಗೆ ಅದೇ ಉತ್ತರ ನೀಡುತ್ತಾರೋ ಡಿಸೆಂಬರ್ 20ಕ್ಕೆ ತಿಳಿದುಬರಲಿದೆ.












Click it and Unblock the Notifications