ಹರ್ಯಾಣ: 16 ರ ಬಾಲೆ ಮೇಲೆ ಅತ್ಯಾಚಾರ

ಇಲ್ಲಿನ ಕರ್ನಾಲ್ ಪ್ರದೇಶದಲ್ಲಿ 16 ರ ಹರೆಯದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.
ಚಂಡೀಗಢದಿಂದ ಸುಮಾರು 130 ಕಿ.ಮೀ ದೂರವಿರುವ ಕರ್ನಾಲ್ ನಲ್ಲಿ 16 ವರ್ಷ ವಯಸ್ಸಿನ ಯುವತಿ ಮೇಲೆ ಸುಮಾರು 10 ಜನ ದುಷ್ಕರ್ಮಿಗಳು ಮುಗಿಬಿದ್ದು ಅತ್ಯಾಚಾರ ಎಸೆಗಿ, ನಂತರ ರೈಲ್ವೆ ನಿಲ್ದಾಣದ ಬಳಿ ಎಸೆದು ಹೋಗಿದ್ದಾರೆ. ರೈಲ್ವೆ ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿ ರೈಲ್ವೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ತರ್ವಾರಿ ಪ್ರದೇಶದ ನಿವಾಸಿಯಾಗಿರುವ ಯುವತಿಯನ್ನು ಸುಮಾರು 10 ರಿಂದ 11 ಜನ ಬಲಾತ್ಕಾರ ಮಾಡಿದ್ದಾರೆ. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ವ್ಯಕ್ತಿ ಆಕೆಗೆ ಮೋಸ ಮಾಡಿದ್ದಾನೆ. ತನ್ನ ಗೆಳೆಯರೊಂದಿಗೆ ಆಕೆ ಮೇಲೆ ಅತ್ಯಾಚಾರ ಎಸೆಗಿದ್ದಾನೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.
ಯುವತಿಯ ವೈದ್ಯಕೀಯ ಪರೀಕ್ಷೆ ಫಲಿತಾಂಶ ಹೊರಬೀಳಬೇಕಿದೆ. ನಂತರ ಪ್ರಕರಣ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಮಹಿಳೆಯರ ವಿರುದ್ಧ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಹರ್ಯಾಣ ಸರ್ಕಾರ 24 ತಾಸುಗಳ ಸಹಾಯವಾಣಿ 81466-93100 ಒದಗಿಸಿತ್ತು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಳ ಸೇರಿದಂತೆ ಹಲವಾರು ಮಹತ್ವದ ಕ್ರಮಗಳನ್ನು ಪ್ರಕಟಿಸಿತ್ತು. ಅದರೆ, ಯಾವುದೂ ಪ್ರಯೋಜನಕ್ಕೆ ಬರುತ್ತಿಲ್ಲ.
ರೋಹ್ತಕ್, ಹಿಸಾರ್, ಜಿಂದ್, ಭಿವಾನಿ, ಯಮುನಾನಗರ, ಪಾಣಿಪತ್, ಸೋನಿಪತ್, ಅಂಬಾಲಾ, ಕರ್ನಲ್ ಮತ್ತು ಫರೀದಾಬಾದ್ ಪೊಲೀಸ್ ಠಾಣೆಗಳಲ್ಲಿ ಬಲಾತ್ಕಾರ ಮತ್ತು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣಗಳು ದಾಖಲಾಗುತ್ತಲೇ ಇದೆ. ಇದುವರೆವಿಗೂ ಕಳೆದ ಎರಡು ತಿಂಗಳಿನಲ್ಲಿ ಸುಮಾರು 20ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ.
ಖಾಪ್ ಪಂಚಾಯಿತಿ ಮುಖ್ಯಸ್ಥರು, ಮದುವೆ ವಯಸ್ಸಿನ ಬಗ್ಗೆ ತಾರತಮ್ಯ ತೆಗೆದಿದ್ದರು. ಈಗ ಚಾಲ್ತಿಯಲ್ಲಿರುವ ಮದುವೆಯಾಗಲು ಬೇಕಾದ ಕನಿಷ್ಠ ವಯೋಮಿತಿಯನ್ನು ತೆಗೆದು ಹಾಕಬೇಕು. ಹುಡುಗಿಯರು ಋತುಮತಿಯಾಗುತ್ತಿದ್ದಂತೆ ಮದುವೆ ಮಾಡಿಬಿಡಬೇಕು.
ಹುಡುಗ ಹಾಗೂ ಹುಡುಗಿಯರ ವಯಸ್ಸು 16 ವರ್ಷ ಆಗುತ್ತಿದ್ದಂತೆ ಮದುವೆ ಮಾಡುವುದು ಒಳ್ಳೆಯದು. ಇದರಿಂದ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಖಾಪ್ ಪ್ರತಿನಿಧಿಗಳು ತಾಕೀತು ಮಾಡಿದ್ದರು.
ನಂತರ, ರಾತ್ರಿ ವೇಳೆ ನಡೆಯುವ ಮದುವೆ ಸಮಾರಂಭಗಳಿಗೆ ನಿರ್ಬಂಧ ಹೇರುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಪೂರ್ವಕ ಮನವಿ ಸಲ್ಲಿಸಿದ್ದರು. ಸರ್ಕಾರದ ಕ್ರಮ ಹಾಗೂ ಖಾಪ್ ಗಳ ನಿಯಮಗಳ ನಡುವೆಯೂ ಹರ್ಯಾಣದಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇದೆ.












Click it and Unblock the Notifications