'ಕಿತ್ತೋಗಿರೋ ಸಚಿವ' ವರ್ತೂರು ಪ್ರಕಾಶ್ ಗರಮಾಗರಂ

ಜವಳಿ ಖಾತೆ ಸಚಿವ ಸ್ಥಾನದಲ್ಲಿರುವ ವರ್ತೂರು ಪ್ರಕಾಶ ಎಂಬ ಅವಿವೇಕಿ ಸಚಿವ ತನ್ನನ್ನು ಆ ಸ್ಥಾನದಲ್ಲಿ ಕುಳ್ಳರಿಸಿದ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ 'ಆ ಸಚಿವ ಸ್ಥಾನವೊಂದು ಕಿತ್ಹೋಗಿರೋ ಖಾತೆಯದ್ದು. ಅಂತಹ 'ಕಿತ್ಹೋಗಿರೋ' ಸಚಿವಾಲಯದಿಂದ ಜನರಿಗೆ ಏನೂ ಸಹಾಯ ಮಾಡೋಕ್ಕಾಗೊಲ್ಲ' ಎಂದು ಮೈಯೆಲ್ಲ ಪರಚಿಕೊಂಡು ಕೋಲಾರದ ಡೂಮ್ ಲೈಟ್ ಸರ್ಕಲ್ ಬಳಿ ಉರುಳಾಡಿದ್ದಾರೆ.
ಇದರಿಂದ, ತೊಟ್ಟ ಜವಳಿಯನ್ನು ಬದಲಿಸಿದಷ್ಟೇ ವೇಗದಲ್ಲಿ ತನ್ನ ನಿಷ್ಠೆ/ಪಕ್ಷವನ್ನು ಬದಲಿಸುವ ಕೋಲಾರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಮತ್ತೊಮ್ಮೆ ರಾಜಕೀಯವಾಗಿ ನಗ್ನರಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮಹರ್ಷಿ ವಾಲ್ಮೀಕಿ ಜಯಂತಿ ದಿನದಂದು ಮತ್ತೊಬ್ಬ ಪಕ್ಷೇತರ ಶಾಸಕ ಶ್ರೀರಾಮುಲು ಅವರನ್ನು ಅಪ್ಪಿಮುದ್ದಾಡುವ ಮಾತನ್ನಾಡಿದ್ದ ವರ್ತೂರು, ನಿನ್ನೆ ಭಾನುವಾರ ರಜಾ ಮೂಡಿನಲ್ಲಿದ್ದಾಗ 'ಅಹಿಂದ ವರ್ಗದವರ ಉದ್ಧಾರವೇ ತನ್ನ ಗುರಿ' ಎಂದು ಮಗದೊಮ್ಮೆ ಕನವರಿಸಿದ್ದಾರೆ.
ವರ್ತೂರಿಗೆ ಐಎಎಸ್ ಶಿವರಾಂ ಸಾಥ್?: ಇದೇ ವೇಳೆ 'ಅಧಿಕಾರಕ್ಕಾಗಿ/ ಅಸ್ತಿತ್ವದಲ್ಲಿ ಉಳಿಯಲು ಆತ್ಮಾಹುತಿ ದಳದವರಂತೆ ರಾಜಕೀಯ ಮಾಡಬೇಕು' ಎಂದೂ ಅಹಿಂದ ಕಾರ್ಯಕರ್ತರಿಗೆ ಫರ್ಮಾನು ಮಾಡಿದ್ದಾರೆ ಸದರಿ ವರ್ತೂರು. ಆದರೆ ಸದ್ಯಕ್ಕೆ ವರ್ತೂರು ಪ್ರಕಾಶದು ತ್ರಿಶಂಕುವಿನಲ್ಲಿರುವ ಪ್ರೇತಾತ್ಮವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಅದೇ ಕೋಲಾರ ಜನತೆಯ ಚಿನ್ನದಂತ ಮಾತು.
ಇದೇ ವೇಳೆ, ಸೇವಾನಿರತ ಐಎಎಸ್ ಅಧಿಕಾರಿ ಕೆ ಶಿವರಾಂ ಅವರನ್ನೂ ತಮ್ಮೊಂದಿಗೆ ಕಟ್ಟಿಕೊಂಡು ಕೋಲಾರದಲ್ಲಿ ನೀರಿಲ್ಲದ ಬಾವಿಗೆ ಬೀಳಲು ವರ್ತೂರು ಪ್ರಕಾಶ್ 1,2,3 ಎಣಿಸುತ್ತಿದ್ದಾರೆ. ಐಎಎಸ್ ಶಿವರಾಂ ಏಪ್ರಿಲ್ ವೇಳೆಗೆ ಅಧಿಕಾರಕ್ಕೆ ತ್ಯಾಗಪತ್ರ ಒಗಾಯಿಸಿ, ವರ್ತೂರು ಜತೆ ಚುನಾವಣೆ ಕಣಕ್ಕೆ ಇಳಿಯುತ್ತಾರಂತೆ.












Click it and Unblock the Notifications