ಪಾಕ್: ಹಿಂದೂ ಪರ ವಿಶ್ವಸಂಸ್ಥೆಯ ಮಹಿಳೆಗೆ ಗುಂಡು

ಖ್ಯಾತ ಹಿಂದೂವಾದಿ ಮಾರ್ವಿ ಸರಮೀದ್ ಮೇಲೆ ಗುರುವಾರ ಈ ದಾಳಿ ನಡೆದಿದೆ. ಪಾಕ್ ರಾಜಧಾನಿ ಇಸ್ಲಾಮಾಬಾದಿನಲ್ಲಿ ನೆಲೆಯೂರಿರುವ ಮಾರ್ವಿ ಸರಮೀದ್ ಅವರಿಗೆ ಈ ಹಿಂದೆಯೂ ಬೆದರಿಕೆಯ ಕರೆಗಳು ಬಂದಿದ್ದವು. ಮಾರ್ವಿ ಸರಮೀದ್ ಅವರು ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಯನ್ನು ಬಲಪಡಿಸಲು ವಿಶ್ವಸಂಸ್ಥೆಯಿಂದ ನಿಯುಕ್ತಿಗೊಂಡಿದ್ದಾರೆ.
ಕರಿ ಕಾರಿನಲ್ಲಿ ಬಂದ ದುಷ್ಕರ್ಮಿ ನಗರದ ಹೊರಭಾಗದಲ್ಲಿರುವ ಮುರ್ರೆ ರಸ್ತೆಯಲ್ಲಿ ಮಾರ್ವಿ ಸರಮೀದ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಈ ದಾಳಿ ನಡೆದಿದೆ.
ಗುರುವಾರದಂದು ಒಟ್ಟು ಎರಡು ಕಡೆ ನಮ್ಮ ಕಾರಿನ ಮೇಲೆ ಗುಂಡಿನ ದಾಳಿ ನಡೆಯಿತು. ಆದರೆ ನಮ್ಮ ಕಾರಿನ ಚಾಲಕ ಚಾಲಾಕಿತನದಿಂದ ಕಾರನ್ನು ಓಡಿಸಿ, ಅನಾಹುತವಾಗುವುದನ್ನು ತಪ್ಪಿಸಿದ ಎಂದು ಮಾರ್ವಿ ಸರಮೀದ್ ಹೇಳಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಪ್ರಬಲ ಪ್ರತಿಪಾದಕಿಯಾಗಿರುವ ಮಾರ್ವಿ ಸರಮೀದ್, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು, ಕ್ರೈಸ್ತರು ಮತ್ತು ಶಿಯಾಗಳ ಪರ ಒಲವು ಹೊಂದಿದ್ದಾರೆ. ಇದರಿಂದ ನಿರಂತರವಾಗಿ ಉಗ್ರಪಂಥೀಯರ ಕೆಂಗಣ್ಣಿಗೆ ಗುರಿಯಾದ ಮಾರ್ವಿ ಸರಮೀದ್ ಅನೇಕ ಬಾರಿ ತಮ್ಮ ವಾಸ್ತವ್ಯವನ್ನು ಬದಲಿಸಿದ್ದಾರೆ.
ಸದಾ ಸಾದಾ ಸೀರೆ ಮತ್ತು ಹಣೆಗೆ ಕುಂಕುಮವಿಟ್ಟುಕೊಳ್ಳುವ ಮಾರ್ವಿ ಸರಮೀದ್ ಅವರು 'ಭಾರತ-ಪರ' ನಿಲುವು ಹೊಂದಿದ್ದಾರೆಂದು ಉಗ್ರವಾದಿಗಳು ಅವರ ಮೇಲೆ ಸದಾ ಒಂದು ಕಣ್ಣಿಟ್ಟಿದ್ದಾರೆ. ಆದರೆ ಮಾರ್ವಿ ಸರಮೀದ್ ಎಂದಿಗೂ ಎದೆಗುಂದಿಲ್ಲ. ಸದಾ ಅಲ್ಪಸಂಖ್ಯಾತರ ಪರ ಹೋರಾಡಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications