ಸರಣಿ 2 : ಒಕ್ಕಲಿಗರ ನಾಡಿನಲ್ಲಿ ಕೆಂಪೇಗೌಡ ಯಾರು?

ಲಿಂಗಾಯಿತರ ಮತ ಯಾರ ಕಡೆಗೆ ಎಂಬುದನ್ನು ಮೂರು ಲೇಖನಗಳಲ್ಲಿ ಓದಿದ ಮೇಲೆ ಉಳಿದ ಜಾತಿ ಮತ ಪಂಥದವರ ನಿಲುವು ಹೇಗಿದೆ ಎಂಬುದರ ಬಗ್ಗೆ ರವೀಂದ್ರ ಕೊಟಕಿ ಸರಣಿ ಲೇಖನ ಮುಂದುವರೆದ ಭಾಗ ಇಲ್ಲಿದೆ....
ರಾಜ್ಯದಲ್ಲಿ ಲಿಂಗಾಯಿತರ ನಂತರ ಎರಡನೆ ಅತಿದೊಡ್ಡ ಸಮುದಾಯವೆಂದರೆ ಅದು ಒಕ್ಕಲಿಗ ಸಮುದಾಯ. ಬೆಂಗಳೂರು ನಗರ ಸೇರಿದಂತೆ ಹಳೆಮೈಸೂರು ಪ್ರಾಂತ್ಯದಲ್ಲಿ ಅತ್ಯಂತ ಪ್ರಬಲವಾಗಿರುವ ಈ ಸಮುದಾಯ ನಾಯಕತ್ವಕ್ಕೆ ಬಂದರೆ ಈಗಲೂ ಮೇಲುನೋಟಕ್ಕೆ ದೇವೆಗೌಡರ ಕುಟುಂಬದೇ ಮೇಲುಗೈ.
ಇನ್ನೊಂದಡೆ ಎಸ್.ಎಂ.ಕೃಷ್ಣ ರಾಜ್ಯ ರಾಜಕಾರಣಕ್ಕೆ ಮರಳುವ ಅಂತೆ-ಕಂತೆಗಳ ಸುದ್ದಿ ಆಗಾಗ ಕಾಂಗ್ರೆಸಿನ ಪಡೆಸಾಲೆಯಿಂದ ಕೇಳಿಬಂದಿದ್ದು ಕೊನೆಗೂ ನಿಜವಾಗಿದೆ.
ಇತ್ತೀಚಿನ ದಿನಗಳಲ್ಲಿ ಲಿಂಗಾಯಿತರು ಏಕಪಕ್ಷೀಯವಾಗಿ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿರುವಂತೆಯೆ ಕಳೆದ ಕೆಲವು ವರ್ಷಗಳಿಂದ ಒಕ್ಕಲಿಗರು ಕೂಡ ಜೆಡಿಎಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ.
ಈಗಲೂ ಒಕ್ಕಲಿಗರ ಸಮುದಾಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರೇ ಕೆಂಪೇಗೌಡ. ಈ ಸಮುದಾಯದಲ್ಲಿ ಅವರ ನಾಯಕತ್ವಕ್ಕೆ ಪರ್‍ಯಾಯ ನಾಯಕತ್ವವೊಂದು ಸದ್ಯದ ಮಟ್ಟಿಗಂತೂ ಯಾವ ಪಕ್ಷದಲ್ಲೂ ಕಂಡು ಬರುತ್ತಿಲ್ಲ. ಅಷ್ಟರ ಮಟ್ಟಿಗೆ ಕುಮಾರಸ್ವಾಮಿ ಒಕ್ಕಲಿಗರ ಅಚ್ಚು-ಮೆಚ್ಚಿನ ನಾಯಕನಾಗಿ ರೂಪಗೊಂಡಿದ್ದಾರೆ.
ಹೌದು ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕುಮಾರಸ್ವಾಮಿಯವರ ಜನಪ್ರಿಯತೆಗೆ ಎಸ್.ಎಂ.ಕೃಷ್ಣ ಸೇರಿದಂತೆ ಯಾವುದೇ ನಾಯಕರು ಸಾಟಿಯಾಗಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಗ್ರಾಮೀಣಭಾಗದಲ್ಲಿ ಕುಮಾರಣ್ಣ ಜನಪ್ರಿಯರು.
ಆದರೆ ಇದೇ ಸಮಯದಲ್ಲಿ ಎಸ್.ಎಂ.ಕೃಷ್ಣ ಅವರು ವಾಪಾಸ್ ರಾಜ್ಯ ರಾಜಕಾರಣಕ್ಕೆ ಬಂದರೆ ಏನಾಗುತ್ತದೆ? ಎಸ್.ಎಂ. ಕೃಷ್ಣ ಅವರು ವಿಶೇಷವಾಗಿ ಬೆಂಗಳೂರು ನಗರ ಸೇರಿದಂತೆ ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯುವಂತ ಸಾಮರ್ಥ್ಯ ಹೊಂದಿದ್ದಾರೆ.
ನಗರ ಹೊರತು ಪಡಿಸಿ ಇತರ ಭಾಗದಲ್ಲಿ ನಾವು ಅವಲೋಕಿಸಿದಾಗ ನೇರವಾಗಿ ಅದರ ಪೆಟ್ಟು ಬಿಳೋದು ಜೆಡಿಎಸ್ ಪಕ್ಷಕ್ಕೆ. ಇದರ ಜೊತೆಗೆ ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಲ್ಲ ಎಂಬುವುದಕ್ಕೆ ಹಿರಿಯ ಜೆಡಿಎಸ್ ಶಾಸಕ ಪುಟ್ಟೆಗೌಡರು ಕಾಂಗ್ರೆಸ್ ಸೇರುತ್ತಾರೆಂಬ ಮಾತುಗಳು ಕೇಳಿಬರುತ್ತಿದೆ. ಮಾಜಿ ಸಚಿವ ಡಿ.ಮಂಜುನಾಥ್ ಈಗಾಗಲೇ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ.
ಸದಾನಂದಗೌಡರಿಂದ ಯಾವುದೇ ಸಕಾರಣವಿಲ್ಲದೆ ಅಧಿಕಾರವನ್ನು ಕಸಿದುಕೊಂಡ ಮೇಲೆ ಬಿಜೆಪಿ ಒಕ್ಕಲಿಗರ ಕೋಪಕ್ಕೆ ತುತ್ತಾಗಿದೆ. ಇದರಿಂದ ಹಳೆಮೈಸೂರು ಭಾಗದಲ್ಲಿ ಈಗಿರುವ ಸ್ಥಾನಗಳಲ್ಲಿ ಅದು ಕೆಲವೊಂದನ್ನು ಕಳೆದುಕೊಳ್ಳಬಹುದು.
ಇದಕ್ಕಿಂತ ಮತ್ತೊಂದು ಗಮನಸಿಬೇಕಾದ ಅಂಶವೆಂದರೆ ಅಧಿಕಾರದಲ್ಲಿರುವವರಿಗೂ ಒಕ್ಕಲಿಗರು ಸದಾನಂದಗೌಡರನ್ನು ತಮ್ಮ ನಾಯಕನಾಗಿ ಸ್ವೀಕರಿಸಲ್ಲೇ ಇಲ್ಲ. ಅದೇ ಅವರ ಪದಚ್ಯುತಿ ಕ್ಷಣದಲ್ಲಿ ಅವರು ಒಕ್ಕಲಿಗ ಸಮುದಾಯದ ಹೊಸ ನಾಯಕನಾಗಿ ಹೊರಹೊಮ್ಮಿದ್ದು ವಿಶೇಷ.
ಈ ದಿನ ಒಕ್ಕಲಿಗರ ಭೂಭಾಗದಲ್ಲಿ ಯಡಿಯೂರಪ್ಪನವರ ಮೇಲೆ ಆಕ್ರೋಶ, ಸದಾನಂದಗೌಡರ ಮೇಲೆ ಮಮಕಾರ ವ್ಯಕ್ತವಾಗುತ್ತಿದೆ. ಆದರೆ ಇದು ಚುನಾವಣೆಯ ಸಂದರ್ಭದಲ್ಲಿ ಮತಗಳಾಗಿ ಪರವರ್ತನೆಯಾಗೋದು ಕಷ್ಟಸಾಧ್ಯವೆ ಸರಿ.
ಇನ್ನು ಹಳೆಮೈಸೂರನ್ನು ರಾಜಕೀಯವಾಗಿ ಅವಲೋಕಿಸಿ ನೋಡಿದಾಗ ಬೆಂಗಳೂರು ನಗರದಲ್ಲಿ ಬಹುತೇಕ ಕಡೆ ಹಣಾಹಣಿ ಬಿಜೆಪಿ-ಕಾಂಗ್ರೆಸ್ ನಡುವೆ ಇರುತ್ತದೆ. ಇದು ಹೊರತಾಗಿ ಮಂಡ್ಯ-ಮೈಸೂರು-ರಾಮನಗರ-ಹಾಸನ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ (ಒಂದೆರಡು ಕಡೆ ತ್ರಿಕೋನ ಅಥವಾ ಜೆಡಿಎಸ್-ಬಿಜೆಪಿ ಮಧ್ಯೆ) ನೇರ ಹಣಾಹಣಿ. ಇನ್ನು ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಕೆಲವು ಸ್ಥಾನಗಳಲ್ಲಿ ಜೆಡಿಎಸ್-ಬಿಜೆಪಿ ಮಧ್ಯೆ ಹಣಾಹಣಿ ಮತ್ತೆ ಕೆಲವು ಸ್ಥಾನಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮಧ್ಯೆ ನಡುವೆ ಇರಲಿದೆ.












Click it and Unblock the Notifications