ಇದು ಅಧಿಕೃತ- ಮಹಾತ್ಮ ಗಾಂಧೀಜಿ ರಾಷ್ಟ್ರಪಿತ ಅಲ್ಲ

ಆದರೆ ಈಗ ಅಧಿಕೃತವಾಗಿ ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಮಹಾತ್ಮ ಗಾಂಧೀಜಿ ಅವರನ್ನು 'ರಾಷ್ಟ್ರಪಿತ' ಎಂದು ಕರೆಯಲಾಗದು. ಅವರಿಗೆ ಆ ಬಿರುದನ್ನು ನೀಡಲಾಗದು ಎಂದು ತಿಳಿಸಿದೆ. ಶಿಕ್ಷಣ ಮತ್ತು ಮಿಲಿಟರಿ ವಿಚಾರಗಳಿಗೆ ಹೊರತಾಗಿ, ಬೇರೆ ಯಾವುದೇ ಕ್ಷೇತ್ರದಲ್ಲಿ ಬಿರುದುಗಳನ್ನು ನೀಡುವುದಕ್ಕೆ ಭಾರತದ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದು ಗೃಹ ಸಚಿವಾಲಯ ಸ್ಪಷ್ಟನೆ.
ಲಕ್ನೋದ 6ನೆ ತರಗತಿಯ ವಿದ್ಯಾರ್ಥಿನಿ ಐಶ್ವರ್ಯಾ ಪರಾಶರ್ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಗೃಹ ಸಚಿವಾಲಯವು ಹೀಗೆ ಉತ್ತರಿಸಿದೆ. ಮಹಾತ್ಮ ಗಾಂಧೀಜಿ ಅವರನ್ನು ರಾಷ್ಟ್ರಪಿತ (Father of the Nation) ಎಂದು ಘೋಷಿಸಬೇಕೆಂದು ಕೋರಿ ಐಶ್ವರ್ಯಾ ಪರಾಶರ್ ರಾಷ್ಟ್ರಪತಿಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ತಾನು ಯಾವುದೇ ಕ್ರಮವನ್ನು ಕೈಗೊಂಡಿಲ್ಲವೆಂದು ಹೇಳಿದೆ.
ಶಿಕ್ಷಣ ಹಾಗೂ ಸೇನೆಯನ್ನು ಹೊರತುಪಡಿಸಿ ಉಳಿದ ಯಾವುದೇ ಕ್ಷೇತ್ರದಲ್ಲಿ ಬಿರುದುಗಳನ್ನು ನೀಡುವುದಕ್ಕೆ ಸಂವಿಧಾನದ 18(1)ನೆ ಅನುಚ್ಛೇದದಡಿ ಅನುಮತಿ ನೀಡುವುದಿಲ್ಲವೆಂದು ಅದು ಸ್ಪಷ್ಟಪಡಿಸಿದೆ.
ಈ ಹಿಂದೆಯೂ, ಮಹಾತ್ಮ ಗಾಂಧಿ ಅವರನ್ನು ರಾಷ್ಟ್ರಪಿತ ಎಂದು ಕರೆಯುತ್ತಿರುವ ಬಗ್ಗೆ ವಿವರಗಳನ್ನು ಕೇಳಿ ಐಶ್ವರ್ಯಾ ಹಲವಾರು ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದರು. ಇದಕ್ಕೆ ಕಳೆದ ವರ್ಷ ಪ್ರತಿಕ್ರಿಯಿಸಿದ್ದ ಗೃಹ ಸಚಿವಾಲಯವು ಮಹಾತ್ಮ ಗಾಂಧಿಗೆ ಅಂತಹ ಯಾವುದೇ ಬಿರುದನ್ನು ನೀಡಿಲ್ಲ ಎಂದು ತಿಳಿಸಿತ್ತು.
ಐಶ್ವರ್ಯಾ ಪರಾಶರ್ ತದನಂತರ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಪ್ರಧಾನಿ ಮನಮೋಹನ್ ಸಿಂಗ್‌ಗೆ ಪತ್ರ ಬರೆದು, ಮಹಾತ್ಮ ಗಾಂಧೀಜಿ ಅವರನ್ನು ರಾಷ್ಟ್ರಪಿತ ಎಂದು ಘೋಷಿಸುವ ಬಗ್ಗೆ ಅಧಿಸೂಚನೆಯೊಂದನ್ನು ಹೊರಡಿಸಬೇಕೆಂದು ಆಗ್ರಹಿಸಿದ್ದಳು. ಈಗ ಹೊಸದಾಗಿ, ತನ್ನ ಆ ಪತ್ರಕ್ಕೆ ಸಂಬಂಧಿಸಿ ರಾಷ್ಟ್ರಪತಿ ಹಾಗೂ ಪ್ರಧಾನಿ ಯಾವ ಕ್ರಮವನ್ನು ಕೈಗೊಂಡಿದ್ದಾರೆಂದು ಕೋರಿ ಆಕೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದಳು.












Click it and Unblock the Notifications