ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಸ್ ವಿರುದ್ಧ ಲೋಕಾ ನ್ಯಾ ಸುಧೀಂದ್ರರಾವ್ ಛಡಿಯೇಟು

By Srinath
|
Google Oneindia Kannada News

kheny-nice-scam-lokayukt-court-order-confiscation-probe
ಬೆಂಗಳೂರು, ಅ.26: ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್ ಕೆ ಸುಧೀಂದ್ರ ರಾವ್ ಅವರು ಮತ್ತೊಮ್ಮೆ ಭ್ರಷ್ಟಾಚಾರದ ವಿರುದ್ಧ ನ್ಯಾಯದಂಡವನ್ನು ಝಳಪಿಸಿದ್ದಾರೆ. ರಾಜ್ಯ ಸರಕಾರ ಸೇರಿದಂತೆ ಅನೇಕರ ವಿರುದ್ಧ ಫಟೀರನೆ ಚಾಟಿಯೇಟು ಬೀಸಿದ್ದಾರೆ. ಇದರಿಂದ ನ್ಯಾಯ ವ್ಯವಸ್ಥೆಯಲ್ಲಿ ಮತ್ತೊಮ್ಮೆ ವಿಶ್ವಾಸ ಮೂಡುವಂತಾಗಿದೆ.

ಸರಕಾರಕ್ಕೆ ತುರ್ತು ಆದೇಶ: ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ಎಂಬ ಕಂಪನಿ ನಿರ್ಮಿಸುತ್ತಿರುವ ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯ ರಸ್ತೆಗಳಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಂಗ್ರಹಿಸಿದ ಶುಲ್ಕ ಮುಟ್ಟುಗೋಲು ಹಾಕಿಕೊಳ್ಳುವಂತೆ ಸರಕಾರಕ್ಕೆ ತುರ್ತು ಆದೇಶ ನೀಡಿದ್ದಾರೆ. ಇದರಿಂದ ನೈಸ್‌ ಸಂಸ್ಥೆಗೆ ಭಾರೀ ಹಿನ್ನೆಡೆಯುಂಟಾಗಿದೆ. ಜತೆಗೆ, ನೈಸ್‌ ಅಕ್ರಮ ನಡೆಸಿದೆ ಎಂದು ಸದಾ ಆರೋಪಿಸುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡಗೂ ಬಿಸಿಮುಟ್ಟಿದೆ.

ಶುಕ್ರವಾರದಿಂದಲೇ ನೈಸ್ ಶುಲ್ಕ ಸರಕಾರದ ಖಜಾನೆಗೆ: ನ್ಯಾಯಾಧೀಶ ಸುಧೀಂದ್ರ ರಾವ್ ಅವರು ಚಾಟಿಯೇಟು ಬೀಸುತ್ತಿರುವುದನ್ನು ಗಮನಿಸಿ, ಅದರಿಂದ ಪ್ರೇರಿತರಾದ ಅಬ್ರಹಾಂ ಪರ ವಕೀಲರು My Lord ನಾಳೆಯಿಂದಲೇ (ಶುಕ್ರವಾರ) ನೈಸ್ ರಸ್ತೆಗಳಲ್ಲಿ ಶುಲ್ಕ ವಸೂಲಿ ಮಾಡದಂತೆ ಆದೇಶ ಹೊರಡಿಸಿಬಿಡಿ ಎಂದು ಮನವಿ ಮಾಡಿದರು. ಆದರೆ ಅದನ್ನು ನ್ಯಾಯಾಧೀಶರು ಮಾನ್ಯ ಮಾಡಲಿಲ್ಲವಾದರೂ 'ಈಗಿನಿಂದ ಸಂಗ್ರಹಿಸುವ ಎಲ್ಲ ಶುಲ್ಕವೂ ಸರ್ಕಾರದ ಹಣ' ಎಂದು ಆದೇಶಿಸಿದರು. ತನಿಖೆ ನಡೆಯುವುದಕ್ಕೂ ಮೊದಲೇ ಜಪ್ತಿ ಮಾಡಿಕೊಳ್ಳುವಂತೆ ಆದೇಶಿಸಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಇದು ಅಶೋಕ್ ಖೇಣಿಗೆ ನೈಸ್ ನೈಸ್ ಮರ್ಮಾಘಾತವಾಗಿದೆ. ಹಾಗೆ ನೋಡಿದರೆ ನೈಸ್ ಆರಂಭದಿಂದಲೂ ಅಷ್ಟೂ ಟೋಲ್ ಹಣವನ್ನು ಸರಕಾರ ವಶಪಡಿಸಿಕೊಳ್ಳಬೇಕು ಎಂದು ಅರ್ಜಿದಾರ ಅಬ್ರಹಾಂ ಅವರು ಅಲವತ್ತುಕೊಂಡಿದ್ದರು. ಆದರೆ, ಈ ಬೇಡಿಕೆಯನ್ನು ಸಂಪೂರ್ಣವಾಗಿ ಮಾನ್ಯ ಮಾಡದ ನ್ಯಾಯಾಲಯ, ಹಿಂದಿನ 2 ವರ್ಷಗಳ ಅವಧಿಯಲ್ಲಿ ನೈಸ್ ನ ಸಂಪರ್ಕ ಮತ್ತು ಪೆರಿಫೆರಲ್ ವರ್ತುಲ ರಸ್ತೆಗಳಲ್ಲಿ ಸಂಗ್ರಹಿಸಿರುವ ಶುಲ್ಕವನ್ನು ಮಾತ್ರ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿತು.

ಆ ಎರಡು ವರ್ಷಗಳಲ್ಲಿ ಈ ಮಾರ್ಗದಲ್ಲಿ ಸಂಚರಿಸಿದ ವಾಹನಗಳ ಸಂಖ್ಯೆಯನ್ನು ಖಚಿತವಾಗಿ ತಿಳಿಯಲು ಸ್ಥಳೀಯ ಪೊಲೀಸರ ಸಹಾಯ ಪಡೆಯುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿತು.

ಸುಪ್ರೀಂಕೋರ್ಟ್ ವರೆಗೂ ಹೋಗಿ ಆಗಾಗ ತಮ್ಮ ಪರ ನ್ಯಾಯದೇವತೆಯನ್ನು ವಾಲಿಸಿಕೊಳ್ಳುತ್ತಿದ್ದ ಖೇಣಿ ಸಾಹೇಬರಿಗೆ ಮುಳುಗುನೀರು ತಂದಿರುವವರು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ. ಅಬ್ರಹಾಂ ಅವರು ಸಲ್ಲಿಸಿದ್ದ ಖಾಸಗಿ ದೂರನ್ನು ಆಲಿಸಿದ ನ್ಯಾಯಾಧೀಶ ಸುಧೀಂದ್ರ ರಾವ್ ಅವರು ಅವರಿವರೆನ್ನದೆ ಎಲ್ಲರಿಗೂ ಬಿಸಿಮುಟ್ಟಿಸಿದ್ದಾರೆ.

ಮತ್ತೂ ಒಂದು ಗಮನಾರ್ಹ ಆದೇಶವೆಂದರೆ ಯೋಜನೆಗೆ ನೀಡಿರುವ ಸಾವಿರಾರು ಎಕರೆ ಜಮೀನಿ ಪೈಕಿ 350 ಎಕರೆಯನ್ನು ತಕ್ಷಣಕ್ಕೆ ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ನ್ಯಾ ಸುಧೀಂದ್ರ ರಾವ್ ಅವರು ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ನೈಸ್ ಯೋಜನೆಯಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ 102 ಜನರ ವಿರುದ್ಧ ತನಿಖೆಗೆ ಆದೇಶಿಸಲು ಕೋರಿ ಅಬ್ರಹಾಂ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಆದರೆ ಆ ಪೈಕಿ 30 ಜನರ ವಿರುದ್ಧ ತನಿಖೆ ಸಾಕು ಎಂದು ಲೋಕಾಯುಕ್ತ ಕೋರ್ಟ್ ಗುರುವಾರ ಆದೇಶ ಹೊರಡಿಸಿದೆ.

ಆರ್.ವಿ.ದೇಶಪಾಂಡೆ ಹೇಳೊ ಮಾತೂ ಕೇಳಿ:
ಈ ಹಿಂದೆಯೂ ಕೆಲವರು ನೈಸ್‌ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಮತ್ತು ಇತರರ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ, ಅರ್ಜಿದಾರರಿಗೆ ತಲಾ 50 ಸಾವಿರ ರೂ. ನಂತೆ ದಂಡ ವಿಧಿಸಿತ್ತು. ಈ ವಿಷಯ ಲೋಕಾಯುಕ್ತ ನ್ಯಾಯಾಲಯದ ಗಮನಕ್ಕೆ ಬಂದಿದಿಯೋ ಇಲ್ಲವೋ ಗೊತ್ತಿಲ್ಲ.

ಲೋಕಾಯುಕ್ತ ಕೋರ್ಟ್ ಆದೇಶದ ಇತರೆ ಮುಖ್ಯಾಂಶಗಳು:
* ಅರ್ಜಿದಾರ ಅಬ್ರಹಾಂ ಪರ ವಾದ ಮಂಡಿಸುತ್ತಿರುವವರು ಹಿರಿಯ ವಕೀಲ ಕೆ ವಿ ಧನಂಜಯ.
* ನೈಸ್ ಕಂಪನಿಗೆ ಸರ್ಕಾರ ನೀಡಿದ್ದ 6,999 ಎಕರೆ ಜಮೀನನ್ನೂ ಮುಟ್ಟುಗೋಲು ಹಾಕಿಕೊಳ್ಳುವಂತೆ ಅಬ್ರಹಾಂ ಮನವಿ.
* ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಅಬ್ರಹಾಂ ಖಾಸಗಿ ದೂರು ಸಲ್ಲಿಸಿದ್ದು ಜುಲೈ 18ರಂದು.
* 3 ಮಾಜಿ ಮುಖ್ಯಮಂತ್ರಿಗಳಿಗೂ ನೈಸ್ ಉರುಳು
* ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ರಾಜ್ಯ ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ, ಐಎಎಸ್‌ ಅಧಿಕಾರಿಗಳಾದ ಶಂಕರಲಿಂಗೇ ಗೌಡ, ಚಿರಂಜೀವಿ ಸಿಂಗ್‌, ಕೆ.ಕೆ. ಮಿಶ್ರಾ ಸೇರಿದಂತೆ 72 ಜನರು ನೈಸ್ ಉರುಳಿನಿಂದ ಪಾರು.
* ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ. 4 ಡಿವೈ.ಎಸ್‌ಪಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ರಚನೆ. ತನಿಖೆಗೆ ಇಂತಿಷ್ಟೇ ಎಂದು ಕಾಲಾವಧಿ ನಿಗದಿಯಿಲ್ಲ.
* ಕ್ರಿಮಿನಲ್‌ ದಂಡಸಂಹಿತೆ 156/3ರ ಅಡಿ ತನಿಖೆ. ಇದೇ ವೇಳೆ ನ್ಯಾಯಾಲಯ ಯೋಜನೆಯಿಂದಾಗಿ ಭೂಮಿ ಕಳೆದುಕೊಂಡು ನಷ್ಟ ಹೊಂದಿರುವವರ ಪಟ್ಟಿ ನೀಡುವಂತೆಯೂ ಅರ್ಜಿದಾರರಿಗೆ ಸೂಚನೆ.

ಲೋಕಾ ತನಿಖೆ ಯಾರ ಯಾರ ವಿರುದ್ಧ?
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಬಿ.ಎಸ್. ಯಡಿಯೂರಪ್ಪ, ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್, ಅಮೆರಿಕದ ಮೆಸಾಚುಸೆಟ್ಸ್ ರಾಜ್ಯದ ಹಿಂದಿನ ಗವರ್ನರ್ ವಿಲಿಯಂ ವೆಲ್ಡ್, ಕಲ್ಯಾಣಿ ಸಮೂಹದ ಉಪಾಧ್ಯಕ್ಷ ಬಾಬಾ ಕಲ್ಯಾಣಿ, ನೈಸ್ ಮುಖ್ಯಸ್ಥ ಅಶೋಕ್ ಖೇಣಿ, ಅಮೆರಿಕದ ವನಸ್ಸೆ ಹಂಗೆನ್ ಬ್ರಸ್ಟ್‌ಲಿನ್ ಇಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಚರ್ಡ್ ಹಂಗೆನ್, ಲೋಕೋಪಯೋಗಿ ಇಲಾಖೆಯ ಹಿಂದಿನ ಕಾರ್ಯದರ್ಶಿ ಸಿ.ಆರ್. ರಮೇಶ್,
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಹಿಂದಿನ ವಿಶೇಷ ಜಿಲ್ಲಾಧಿಕಾರಿ ಅನೀಸ್ ಸಿರಾಜ್, ಬಿಎಂಐಸಿ ಯೋಜನೆಯ ಹಿಂದಿನ ಯೋಜನಾ ಸಂಚಾಲಕ ಆರ್. ಬಸವರಾಜ್, ನೈಸ್ ಕಂಪೆನಿ, ನೆಸೆಲ್ ನಿರ್ದೇಶಕ ಶಿವಕುಮಾರ್ ಖೇಣಿ, ಐಎಎಸ್ ಅಧಿಕಾರಿಗಳಾದ ಸುಬೀರ್ ಹರಿಸಿಂಗ್, ಟಿ. ಶಾಮ್ ಭಟ್, ಎಂ.ಬಿ. ದ್ಯಾಬೇರಿ, ನಿವೃತ್ತ ಐಎಎಸ್ ಅಧಿಕಾರಿಗಳಾದ ಜಿ.ವಿ. ಕೊಂಗವಾಡ, ಬಿ.ಎಸ್. ಪಾಟೀಲ್, ವಿಜಯ್ ಗೋರೆ,
ನೆಸೆಲ್ ಕಂಪನಿ, ಐಸಿಐಸಿಐ ಬ್ಯಾಂಕ್, ಬ್ಯಾಂಕ್‌ನ ಜಂಟಿ ಪ್ರಧಾನ ವ್ಯವಸ್ಥಾಪಕ ಮೋಹಿತ್ ಬಾತ್ರಾ, ಸರ್ಕಾರದ ಉಪ ಕಾರ್ಯದರ್ಶಿ ಟಿ.ಬಿ. ರೇಣುಕಾಪ್ರಸಾದ್, ಬಿಎಂಐಸಿ ಪ್ರದೇಶ ಯೋಜನಾ ಪ್ರಾಧಿಕಾರದ ಹಿಂದಿನ ಕಾರ್ಯದರ್ಶಿ ಎಸ್.ಎಸ್. ಟೊಪಗಿ, ಹಿಂದಿನ ಮುಖ್ಯ ಎಂಜಿನಿಯರ್ ಮೃತ್ಯುಂಜಯಸ್ವಾಮಿ, ಮುಖ್ಯ ಎಂಜಿನಿಯರ್ ಬಿಸ್ಸೇಗೌಡ, ಕೆಐಎಡಿಬಿ ವ್ಯವಸ್ಥಾಪಕ ನರಸಿಂಹಮೂರ್ತಿ ಮತ್ತು ಐಸಿಐಸಿಐ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣ ವಗುಲ್.

English summary
The Special Lokayukta Court in Bangalore on Thursday (Oct 25) ordered an enquiry into the alleged Bangalore-Mysore expressway scam (Ashok Kheny NICE Plan), which is already being heard by various courts, including the Karnataka High Court and the Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X