ಕರ್ನಾಟಕದ ಕರೆಂಟ್ ಮೇಲೆ ಜಯಾ ಕಣ್ಣು

Jayalalithaa
ಚೆನ್ನೈ, ಅ.25: ಕಾವೇರಿಗಾಗಿ ಒಂದು ಸುತ್ತಿನ ಕ್ಯಾತೆ ತೆಗೆದು ಇಷ್ಟಾರ್ಥ ಪೂರೈಸಿಕೊಂಡ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಈಗ ಕೇಂದ್ರದಿಂದ ಕರ್ನಾಟಕ ಪಾಲಿಗೆ ಸಿಗಬೇಕಾದ ವಿದ್ಯುತ್ ಮೇಲೂ ಕಣ್ಣು ಹಾಕಿದ್ದಾರೆ.

ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಸೆಂಟ್ರಲ್ ಪವರ್ ಗ್ರಿಡ್‌ನಿಂದ ಉತ್ಪಾದನೆಯಾಗುವ ವಿದ್ಯುತ್ ಪ್ರಮಾಣದಿಂದ ತನಗೆ ಸಿಂಹಪಾಲು ಬೇಕೆಂದು ಆಗ್ರಹಿಸಿ ಪ್ರಧಾನಿ ಮನಮೋಹನಸಿಂಗ್ ಅವರಿಗೆ ಜಯಲಲಿತಾ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರ ತಮಿಳುನಾಡು ಮನವಿಗೆ ಪುರಸ್ಕರಿಸಿದರೆ, ಕರ್ನಾಟಕಕ್ಕೂ ಕರೆಂಟ್ ಶಾಕ್ ತಟ್ಟುವ ಸಾಧ್ಯತೆ ಇದೆ. ಕೇಂದ್ರಕ್ಕೆ ಜಯಾ ಬರೆದಿರುವ ಪತ್ರದಂತೆ,ತಮಿಳುನಾಡಿನಲ್ಲೀಗ ತೀವ್ರ ವಿದ್ಯುತ್ ಕೊರತೆ ಇದೆ.

ಅಲ್ಲದೆ ಈ ರಾಜ್ಯದಿಂದ ಕೇಂದ್ರಕ್ಕೆ ಉದಾರವಾಗಿ ಈ ಹಿಂದೆ ನೀಡಿದ್ದ ವಿದ್ಯುತ್ ಪ್ರಮಾಣವನ್ನು ತಮಿಳುನಾಡಿಗೇ ವಾಪಸ್ ನೀಡಬೇಕೆಂದೂ ಜಯಾ ಮನವಿ ಮಾಡಿದ್ದಾರೆ.

ಇದೇ ನವೆಂಬರ್ 1ರಿಂದ ಮುಂದಿನ ವರ್ಷ ಮಾರ್ಚ್ ಕೊನೆ ವೇಳೆಗೆ ತಮಿಳುನಾಡಿಗೆ 1700 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ ಎಂದು ಜಯಲಲಿತಾ
ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ತಮಿಳುನಾಡು ಸುಮಾರು 4000 ಮೆ.ವ್ಯಾ ವಿದ್ಯುತ್ ಕೊರತೆ ಅನುಭವಿಸುತ್ತಿದೆ. ಇದು ದಕ್ಷಿಣ ಭಾರತದಲ್ಲೇ ಅತ್ಯಧಿಕ ಕೊರತೆ ಪ್ರಮಾಣ ಎಂದು ಜಯಲಲಿತಾ ತಮ್ಮ ಪತ್ರದಲ್ಲಿ ಹೇಳಿದ್ದಾರೆ. TANGEDCO(ತಮಿಳುನಾಡಿನ ವಿದ್ಯುತ್ ಪ್ರಸರಣ ಸಂಸ್ಥೆ) ಪ್ರಕಾರ ಸುಮಾರು 1721 ಮೆ.ವ್ಯಾ ವಿದ್ಯುತ್ ಅಗತ್ಯವಿದೆ.

ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ವಿದ್ಯುತ್ ಬೇಡಿಕೆ ಹೊಂದಿರುವ ಕರ್ನಾಟಕಕ್ಕೆ ಸೆಂಟ್ರಲ್ ಗ್ರಿಡ್‌ನಿಂದ ದೊರೆಯುತ್ತಿರುವ ಕೋಟಾ ಅತಿ ಕಡಿಮೆ. ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು 1700 ಮೆ.ವ್ಯಾ ವಾರದೊಳಗೆ ಹರಿಸುತ್ತೇವೆ ಎಂದು ಹೇಳಿಕೆ ನೀಡಿದ್ದರೂ ಕರ್ನಾಟಕ ಅಷ್ಟು ಪ್ರಮಾಣ ಪಡೆಯಲು ಸಾಧ್ಯವಾಗುತ್ತಿಲ್ಲ.

ಆಂಧ್ರದ ರಾಮಗುಂಡಂ ಶಾಖೋತ್ಪನ್ನ ಕೇಂದ್ರ ತಮಿಳುನಾಡಿನ ಕಲ್ಪಕಂ ಅಣು ವಿದ್ಯುತ್ ಸ್ಥಾವರದಿಂದ ಕರ್ನಾಟಕಕ್ಕೆ ಒಪ್ಪಂದಂತೆ ಸಮರ್ಪಕ ರೀತಿಯಲ್ಲಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಕರ್ನಾಟಕ ನಿತ್ಯವೂ ವಿದ್ಯುತ್ ಸಂಕಷ್ಟ ಎದುರಿಸುವಂತಾಗಿದೆ.

ತಮಿಳುನಾಡಿನ ಕಾವೇರಿ ಕಣಿವೆಯಲ್ಲಿ ನೀರಿನ ಕೊರತೆ ಇದೆಯೆಂದು ಬೊಬ್ಬೆಯಿಟ್ಟ ಜಯಲಲಿತಾ ಎರಡು ತಿಂಗಳ ಹಿಂದೆ ತನಗೆ ಅ.15 ರವರೆಗೆ ನಿತ್ಯ 2 ಟಿಎಂಸಿ ನೀರು ಬೇಕೆಂದು ರಚ್ಚೆ ಹಿಡಿದು ಪ್ರಧಾನಿಗೆ ಪತ್ರ ಬರೆದು ತೀವ್ರ ಒತ್ತಡ ಹೇರಿದ್ದರು.

ಉತ್ತರ ಭಾರತ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವಾಗ ರಾಜ್ಯಕ್ಕೆ ಹೆಚ್ಚುವರಿಯಾಗಿ ವಿದ್ಯುತ್ ಪೂರೈಕೆ ಮಾಡಲು ಹೇಗೆ ಸಾಧ್ಯ. ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಐದು ರಾಜ್ಯಗಳಿಗೆ ಉತ್ತರ ಭಾರತದಿಂದ ವಿದ್ಯುತ್ ಒದಗಿಸಲು ಇರುವ ಕಾರಿಡಾರ್ ನ ಗಾತ್ರ ತೀರಾ ಸಣ್ಣದಾಗಿದೆ.

ಆದರೆ, ಇರುವ ಕಾರಿಡಾರ್ ಮೂಲಕ ಕೇವಲ 750 ಮೆಗಾವ್ಯಾಟ್ ವಿದ್ಯುತ್ ನ್ನು ಮಾತ್ರ ಪೂರೈಸಬಹುದು. ವೀರಪ್ಪ ಮೊಯ್ಲಿ ಅವರು ಕರ್ನಾಟಕಕ್ಕೆ 1500 ಮೆಗಾವ್ಯಾಟ್ ವಿದ್ಯುತ್ ಪೂರೈಸಿದರೆ ನನಗಂತೂ ತುಂಬಾ ಖುಷಿಯಾಗುತ್ತದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ವೀರಪ್ಪ ಮೊಯ್ಲಿ ಹೇಳಿಕೆ ಪ್ರತಿಕ್ರಿಯೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+