ಇನ್ನಾರೇ ತಿಂಗಳಲ್ಲಿ ಮತ್ತೆ ಸಿಎಂ ಆಗುವೆ: ಯಡಿಯೂರಪ್ಪ

ಆದರೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಈ ಮಾತನ್ನು ಹೇಳಿದ್ದಾರೆ. 'ಜನರ ಸಮಸ್ಯೆ ಈಡೇರಿಸಲು ನನ್ನ ಬಳಿ ಈಗ ಯಾವ ಅಧಿಕಾರವೂ ಇಲ್ಲ. ಇನ್ನಾರು ತಿಂಗಳ ನಂತರ ನಿಮ್ಮ ಮುಂದೆ ಬಂದು ನಿಮ್ಮೆಲ್ಲ ಬೇಡಿಕೆ ಈಡೇರಿಸುತ್ತೇನೆ' ಎಂದು ತಾಲೂಕಿನ ಮುಡಬಸಿದ್ದಾಪುರ ಗ್ರಾಮದ ರೈತರು ಶುಕ್ರವಾರ ದೇಹೀ ಎಂದು ಬಂದಾಗ ಅವರಿಗೆ ಹೀಗೆ ಭರವಸೆ ನೀಡಿದ್ದಾರೆ.
'ಇನ್ನು ಕೇವಲ 6 ತಿಂಗಳು ಕಾಯಿರಿ. ಮತ್ತೆ ಪುನಃ ಅಧಿಕಾರದ ಗದ್ದುಗೆ ಏರುತ್ತೇನೆ. ಆಗ ನಿಮ್ಮ ಅರ್ಜಿಗಳನ್ನು ನನ್ನ ಬಳಿ ತನ್ನಿ, ಪರಿಹಾರ ಒದಗಿಸುತ್ತೇನೆ' ಎಂದು ಅದಮ್ಯ ಆತ್ಮವಿಶ್ವಾಸದಿಂದ ನುಡಿದಿದ್ದಾರೆ. ಆದರೆ ಇದಕ್ಕೆ ಮತದಾರ ಪ್ರಭು ತಥಾಸ್ತು ಅನ್ನಬೇಕು ಅಷ್ಟೇ.
'ಈ ಹಿಂದೆ ಅಧಿಕಾರ ನೀಡದೆ ಕುಮಾರಸ್ವಾಮಿ ನನ್ನನ್ನು ವಂಚಿಸಿದರು. ಈಗ ಅದೇ ರೀತಿಯಲ್ಲೇ ಬಿಜೆಪಿ ಹೈಕಮಾಂಡ್ ಮಾತಿಗೆ ತಪ್ಪಿ ನನಗೆ ಅಧಿಕಾರ ನೀಡದೆ ಅನ್ಯಾಯ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಿದ ನನಗೆ ಮುಂದಿನ ದಿನಗಳಲ್ಲಿ ರಾಜ್ಯದ ಜನ ಬೆಂಬಲಿಸಬೇಕು' ಎಂದು ಮನವಿ ಮಾಡಿದರು.
ಈ ಮಧ್ಯೆ ಬಳ್ಳಾರಿಯಲ್ಲಿ ಯಡಿಯೂರಪ್ಪನವರ ಶಿವಮೊಗ್ಗದ ಸನ್ಮಿತ್ರ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು 'ಕೆಲ ನಾಯಕರು ಬಿಜೆಪಿ ಪಕ್ಷದಲ್ಲಿದ್ದು ಅಧಿಕಾರ, ಸ್ಥಾನಮಾನ ಅನುಭವಿಸಿ, ಸ್ವಾರ್ಥ ಸಾಧನೆಗಾಗಿ ಪಕ್ಷ ತೊರೆಯುವುದರಿಂದ ಪಕ್ಷದ ಅಸ್ತಿತ್ವ, ಸಂಘಟನೆಗೆ ಯಾವುದೇ ಧಕ್ಕೆಯಾಗುವುದಿಲ್ಲ' ಎಂದು ಮನಸ್ಸಿನಲ್ಲಿ ಬಿಎಸ್‌ವೈ ಅವರನ್ನು ನೆನಪಿಸಿಕೊಂಡು ಹೇಳಿದ್ದಾರೆ.
ಶಿವಮೊಗ್ಗ ಸಮಕ್ಷಮ: ಇಂದು (ಅ.20) ಯಡಿಯೂರಪ್ಪ ನಗರದಲ್ಲಿ 'ಪರಾಮರ್ಶೆಯ ಪರಿಕ್ರಮ, ನಿಮ್ಮ ಸಮಕ್ಷಮ' ಎಂಬ ಕಾರ್ಯಕ್ರಮದ ಹೆಸರಿನಲ್ಲಿ ಬೆಂಬಲಿಗರ ಸಭೆ ನಡೆಸಿದ್ದಾರೆ. ಹೊಸ ಪಕ್ಷ ಕಟ್ಟುವ ಹಾದಿಯಲ್ಲಿರುವ ಯಡಿಯೂರಪ್ಪ ಇಂದು ಸಂಜೆ 4.30ಕ್ಕೆ ನಗರದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಸಾಕಷ್ಟು ಮಹತ್ವ ಬಂದಿದೆ. ಎಲ್ಲರ ಚಿತ್ತ ಇತ್ತ ಹರಿದಿದೆ.
ನಗರದ ಸಾಗರ ರಸ್ತೆಯಲ್ಲಿರುವ ಪಿಇಎಸ್ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಸಮಕ್ಷಮಕ್ಕೆ ಸಾಕ್ಷಿಯಾಗಲು ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು, ಸಾಹಿತಿಗಳು, ವೈದ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಯಡಿಯೂರಪ್ಪ ಅವರ ಸಹಿ ಇರುವ, ಅವರ ಮನದ ಮಾತುಗಳಿರುವ ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗಿದೆ.
ಸಮಕ್ಷಮದಲ್ಲಿ ಯಡಿಯೂರಪ್ಪ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆದರೆ, ಎಲ್ಲರ ಅಭಿಪ್ರಾಯಗಳನ್ನು ಆಲಿಸುತ್ತಾರೆ. ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಡುತ್ತಾರೆ ಎಂಬುದು ಅವರ ಕಟ್ಟಾ ಬೆಂಬಲಿಗರ ನುಡಿ.
ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಡಿಸೆಂಬರ್ 10ರಂದು ಹಾವೇರಿಯಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಹೊಸ ಪಕ್ಷ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.












Click it and Unblock the Notifications