70 ಶಾಸಕರೊಂದಿಗೆ ಬಿಜೆಪಿಗೆ ವಸುಂಧರಾ ಗುಡ್ ಬೈ?

ವರ್ಚಸ್ವಿ ನಾಯಕಿ ವಸುಂಧರಾ ರಾಜೇ ಅವರು ಯಾವುದೇ ಕ್ಷಣ ಪಕ್ಷ ಬಿಡುವ ಮುನ್ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿರುವ 79 ಬಿಜೆಪಿ ಶಾಸಕರ ಪೈಕಿ 70 ಮಂದಿಯೊಂದಿಗೆ ಹೊರನಡೆದು, ನೂತನ ಪಕ್ಷ ಸ್ಥಾಪಿಸುವುದಾಗಿ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಿದ್ದಾರೆ.
ಅಲ್ಲೂ ಹೈಕಮಾಂಡಿನದೇ ತಕರಾರು. ರಾಜಸ್ಥಾನದ ಮಾಜಿ ಸಿಎಂ/ಪ್ರಸ್ತುತ ವಿರೋಧ ಪಕ್ಷದ ನಾಯಕಿ ವಸುಂಧರಾ ಅವರು ನೂತನ ಪಕ್ಷದ ಹೊಸ್ತಿಲಲ್ಲಿದ್ದಾರೆ. ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಅಲ್ಲಿನ ವಿಧಾನಸಭೆಗೆ ಚುನಾವಣೆಗಳು ನಡೆಯಲಿದ್ದು, ಆ ವೇಳೆಗೆ ಭೂಮಿಕೆ ಸಿದ್ಧಪಡಿಸಿಕೊಳ್ಳಲು ವಸುಂಧರಾ ಯಾವುದೇ ಕ್ಷಣ ಬಿಜೆಪಿ ಬಿಡುವ ತವಕದಲ್ಲಿದ್ದಾರೆ ಎಂದು ಪಕ್ಷದ ಮೂಲಗಳು ಪಿಸುಗುಟ್ಟುತ್ತಿವೆ.
ಪ್ರಸ್ತುತ ರಾಜಸ್ಥಾನದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ತಮ್ಮ ಬೆಂಬಲಿಗರನ್ನೇ ಆಯ್ಕೆ ಮಾಡಬೇಕು. ಇನ್ನು ಮುಂದಿನ ಚುನಾವಣೆಗೆ ಅಭ್ಯರ್ಥಿಗಳಿಗೆ ಟಿಕೆಟ್ ಹಂಚುವ ಅಧಿಕಾರ ತಮಗೇ ನೀಡಬೇಕು ಎಂಬುದು ಸದ್ಯಕ್ಕೆ ಇವರ ಪ್ರಮುಖ ಬೇಡಿಕೆಯಾಗಿದೆ.
ರಾಜಸ್ಥಾನದ ಗಡಿಯಾಚೆಗೂ ವರ್ಷಸ್ಸನ್ನು ಹೊಂದಿರುವ ವಸುಂಧರಾ, ಕಳೆದ ಬಾರಿ ಚುನಾವಣೆಯಲ್ಲಿ ದಿಲ್ಲಿ ಮಂದಿ ಕೈಕೊಟ್ಟಿದ್ದರಿಂದ ಬಾಯೊಗೆ ಬಂದ ತುತ್ತು ಕೈಗೆ ಬರಲಿಲ್ಲ ಎಂಬಂತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾನಿ ಹಿಡಿಯದೇ ಹೋದರು.
ಈ ಮಧ್ಯೆ ವರಿಷ್ಠರು ಮತ್ತು ರಾಜ್ಯದಲ್ಲಿನ ಹಿರಿಯ ನಾಯಕರು ವಸುಂಧರಾಗೆ ಮಣೆ ಹಾಕಲು ಸುತರಾಂ ಸಿದ್ಧರಿಲ್ಲ. ಹಾಗಾಗಿ ಅವರು ಯಾವುದೇ ಕ್ಷಣ ಬಿಜೆಪಿಗೆ ಗುಡ್ ಬೈ ಎನ್ನಬಹುದು ಎನ್ನಲಾಗಿದೆ.
ಒಂದು ಮೂಲದ ಪ್ರಕಾರ ರಾಜ್ಯದಲ್ಲಿ ಚೆನ್ನಾಗಿ ಬೇರೂರಿರುವ ಬಿಎಸ್ ಪಿ ಜತೆ ವಸುಂಧರಾ ಹೊಂದಾಣಿಕೆ ಮಾಡಿಕೊಳ್ಳುವ ಲಕ್ಷಣಗಳೂ ಇವೆ ಎನ್ನಲಾಗಿದೆ. ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ಮತ್ತು ಜಾರ್ಖಂಡಿನಲ್ಲಿ ಬಾಬುಲಾಲ್ ಮರಾಂಡಿ ಅವರು ಪಕ್ಷದಿಂದ ಹೊರಹೋಗಿದ್ದು ಬಿಜೆಪಿಗೆ ಭಾರಿ ಹೊಡೆತ ನೀಡಿತ್ತು.
ನರೇಂದ್ರ ಮೋದಿಗೆ ಬಳುವಳಿಯಾಗಿ ನೀಡಿರುವ ಸ್ವಾಯತ್ತತೆಯನ್ನು ವಸುಂಧರಾ ರಾಜೆಗೂ ನೀಡಲು RSS ಸುತರಾಂ ಇಚ್ಛಿಸುತ್ತಿಲ್ಲ. ಹಾಗಾಗಿ, ವಸುಂಧರಾ ನಿರ್ಗಮನ ಬಹುತೇಕ ಖಚಿತ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications