ಕಾವೇರಿ ವಿವಾದ: ಶಾಂತಿದೂತ ವರುಣನ ಆರ್ಭಟ

ಬೆಂಗಳೂರು, ಅ.16: ಮಳೆರಾಯ ಈ ಬಾರಿಯೂ ಕಾವೇರಿದ ರೈತರ ಕೈಬಿಟ್ಟಿಲ್ಲ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ತಮ್ಮ ಶಕ್ತ್ಯಾನುಸಾರ ಕದಡಿದ ಕಾವೇರಿ ನೀರಿನಲ್ಲಿ ಮೀನು ಹಿಡಿಯುತ್ತಿರುವಾಗ ಮಳೆರಾಯ ಎಂದಿನಂತೆ 'ನಾನಿದ್ದೇನೆ, ಡೋಂಟ್ ವರಿ' ಎಂದು ಅಪ್ಪಟ ಶಾಂತಿದೂತನಾಗಿ ಸಿಂಚನಗೈಯುತ್ತಿದ್ದಾನೆ.

ಈ ಬಾರಿಯೂ ಅಷ್ಟೇ ಮೊನ್ನೆ ಶನಿವಾರದಿಂದಲೇ ಮಳೆಯಾಗತೊಡಗಿದೆ. ಯಾವ್ಯಾವಾಗ ಕಾವೇರಿ ವಿವಾದ ವಿಕೋಪಕ್ಕೆ ಹೋಗಿದೆಯೋ ಆಗೆಲ್ಲ peacemaker ಮಳೆರಾಯ ನೆರವಿಗೆ ಧಾವಿಸಿದ್ದಾನೆ. ಅತ್ತ ಕಾವೇರಿ ಉಗಮ ಸ್ಥಳದಲ್ಲೂ ಮಳೆಯಾಗುತ್ತಿದ್ದು, ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ( ಅ. 17 ರ ಮುಂಜಾನೆ ) ಆರಂಭವಾಗಿದೆ.

cauvery-row-peacemaker-rains-in-karnataka-t-nadu

ದುರ್ದೈವವೆಂದರೆ ಈ ಮಳೆ ಕಾವೇರಿ ಕಣಿವೆಯಲ್ಲಿ ರೈತನಿಗೆ ಸಮಾಧಾನ ತಂದಿದ್ದರೆ ಕೆಲವು ಭಾಗಗಳಲ್ಲಿ ಜೀವಕ್ಕೆ ಎರವಾಗಿದ್ದಾನೆ. ಐದು ಮಂದಿಯ ಪ್ರಾಣವನನ್ನೂ ನೀಗಿದ್ದಾನೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರು, ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಒಬ್ಬ ಮಹಿಳೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಒಬ್ಬ ಯುವಕ ಸೇರಿ ಒಟ್ಟು ಐವರು ರಾಜ್ಯದಲ್ಲಿ ಭಾನುವಾರ ಸಿಡಿಲಿಗೆ ಬಲಿಯಾಗಿದ್ದಾರೆ. ಎರಡು ಎತ್ತುಗಳೂ ಸಾವನ್ನಪಿವೆ.

ಇತ್ತ ಮುಂಗಾರು ಹಂಗಾಮ ರಾಜ್ಯದಲ್ಲಿ ಕೊನೆಯ ಘಟ್ಟದಲ್ಲಿದ್ದರೆ, ಅತ್ತ ತಮಿಳುನಾಡಿನಲ್ಲೂ ಭರ್ಜರಿ ಮಳೆಯಾಗುತ್ತಿದೆ. ಇದರಿಂದ ತಾಯೆ ಜಯಲಲಿತಾ ಸಹ ಸಾಕು ನೀರಿನ ಸಹವಾಸ ಎನ್ನುತ್ತಾರಾ ಅಥವಾ ಸಮುದ್ರಕ್ಕೆ ಬೇಕಾದರೆ ನೀರು ಬಿಟ್ಟೇವು, ತವರು ಮನೆಯಿಂದ ನನಗೆ ಬರಬೇಕಾದ ಪಾಲು ನೀಡಿಬಿಡಿ ಎಂದು ರೊಳ್ಳೆ ತೆಗೆಯುತ್ತಾರೋ ಮುಂದಿನ ಶುಕ್ರವಾರದವರೆಗೂ ಕಾದು ನೋಡಬೇಕು.

ಈ ಮಧ್ಯೆ ರಾಜಧಾನಿ ಬೆಂಗಳೂರು ಸಹ ತಂಪಾಗಿದೆ. ಇನ್ನೂ ಒಂದೆರಡು ದಿನ ವ್ಯಾಪಕ ಮಳೆಯಾಗಬಹುದು. ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಬೆಂಗಳೂರು, ತುಮಕೂರು ಸೇರಿದಂತೆ ಈಶಾನ್ಯ ಹಾಗೂ ಮಂಡ್ಯ, ಮೈಸೂರು, ಮಡಿಕೇರಿ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳ ಕೊಲ್ಲಿ ಕಡೆಯಿಂದ ಈಶಾನ್ಯ ಮಾರುತ ರಾಜ್ಯದೊಳಗೆ ಪ್ರವೇಶಗೊಂಡಿದ್ದು, ಮಧ್ಯಾಹ್ನದವರೆಗೆ ಬಿಸಿಲು ಅಥವಾ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ನಂತರ ಗುಡುಗು ಸಹಿತ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಆದರೆ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವ ಕಡಿಮೆಯಿದೆ ಎನ್ನಲಾಗಿದೆ.

ಕಳೆಗಟ್ಟಿದ ಬೃಂದಾವನ: ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 29 ರಿಂದ ಬಂದ್ ಆಗಿದ್ದ ಕೃಷ್ಣರಾಜಸಾಗರದ ಬೃಂದಾವನವನ್ನು ಪ್ರವಾಸಿಗರಿಗೆ ಭಾನುವಾರ ಮುಕ್ತಗೊಳಿಸಲಾಗಿದೆ. ಇದು ರಜಾ ಕಾಲ ಜತೆಗೆ ದಸರಾ ಸುಸುಂದರ್ಭ. ಹಾಗಾಗಿ ಯಾವುದೋ ತೊಂದರೆಯಾಗದಂತೆ ಪ್ರವಾಸಿಗರು ಬೃಂದಾವನ ಹೋಗಿಬರಬಹುದಾಗಿದೆ. ಬೃಂದಾವನಕ್ಕೆ ದಿನಕ್ಕೆ ಸರಾಸರಿ 10 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ.

ಮಂಡ್ಯ ವರದಿ: ಶನಿವಾರ ರಾತ್ರಿ ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಪಾಂಡವಪುರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಪಾಂಡವಪುರ ತಾಲೂಕು ಕ್ಯಾತನ ಹಳ್ಳಿ ಗ್ರಾಮದಲ್ಲಿ ಮರದ ಕೆಳಗೆ ಕಟ್ಟಿದ್ದ ಎತ್ತಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದರೆ, ಕೆನ್ನಾಳುವಿನಲ್ಲಿ ನಾಲೆ ಒಡೆದಿದೆ. ಕ್ಯಾತನಹಳ್ಳಿಯಲ್ಲಿ ತಡರಾತ್ರಿ ಗಣಪತಿ ವಿಸರ್ಜನೆಗೆ ತೆರಳಿದ್ದ ವೇಳೆ ಗ್ರಾಮದ ಹೊರವಲಯದ ಈಶ್ವರ ದೇವಾಲಯದ ಬಳಿ ಸಿಡಿಲು ಬಡಿದು ಮತ್ತೊಂದು ಎತ್ತು ಸಾವನ್ನಪಿದೆ.

ತಾಲೂಕಿನಲ್ಲಿ ಮಳೆ ಸುರಿದ ಪರಿಣಾಮ ವಿ.ಸಿ. ಪಿಕಪ್ ನಾಲೆಯಲ್ಲಿ ನೀರು ಹೆಚ್ಚಾಗಿ ನಾಲೆ ಒಡೆದು ಭಾಸ್ಕರ್ ಎಂಬವರ 3 ಎಕರೆ ಬೆಳೆಗೆ ಹಾನಿ ಯಾಗಿದೆ ಎಂದು ವರದಿಯಾಗಿದೆ. ಕಳೆದ ಹಲವಾರು ತಿಂಗಳಿಂದ ಮಳೆ ಯಿಲ್ಲದೆ ಹಾಕಿರುವ ಅಲ್ಪಸ್ವಲ್ಪ ಬೆಳೆಗಳು ನೆಲಕಚ್ಚಿದ್ದವು. ಇದೀಗ ಮಳೆಯಾಗಿರುವುದು ರೈತರಲ್ಲಿ ಆಶಾ ಭಾವ ಮೂಡಿಸಿದೆ.

ಸಿಡಿಲಿನ ಆರ್ಭಟ:
ಕೊಳ್ಳೇಗಾಲ: ತಾಲ್ಲೂಕಿನ ಹನೂರು ಬಳಿಯ ಅಲಗಾಪುರ ಗ್ರಾಮದಲ್ಲಿ ಭಾನುವಾರ ಸಿಡಿಲು ಬಡಿದ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಅಲಗಾಪುರದ ಸಣ್ಣಮಾದಮ್ಮ (55), ರಾಜಮ್ಮ (35) ಮತ್ತು ಸಿದ್ದಪ್ಪ (28) ಮೃತಪಟ್ಟವರು.

ಸಣ್ಣಮಾದಮ್ಮ, ರಾಜಮ್ಮ ಸೇರಿದಂತೆ 20ಕ್ಕೂ ಹೆಚ್ಚು ಮಹಿಳೆಯರು ತೋಮಿಯಾರ್‌ಪಾಳ್ಯದ ರಸ್ತೆ ಸಮೀಪ ಇರುವ ರಾಜಮ್ಮ ಅವರ ಸಂಬಂಧಿಕರ ಜಮೀನಿಗೆ ಕಳೆ ಕೀಳಲು ಹೋಗಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಭಾರಿ ಮಳೆ ಬಂದಾಗ ಕೆಲವು ಮಹಿಳೆಯರು ಜಮೀನಿನಿಂದ ಇತರ ಸ್ಥಳಗಳಿಗೆ ಹೋಗಿ ಆಶ್ರಯ ಪಡೆದರು.

ಸಣ್ಣಮಾದಮ್ಮ ಮತ್ತು ರಾಜಮ್ಮ ಮಾತ್ರ ಜಮೀನಿನ ಬಳಿ ಇದ್ದ ಬೇವಿನ ಮರದ ಅಡಿಯಲ್ಲಿ ಆಶ್ರಯ ಪಡೆದರು. ಆಗ ಸಿಡಿಲು ಬಡಿದು ಇಬ್ಬರೂ ಸ್ಥಳದಲ್ಲೇ ಸಾವಿಗೀಡಾದರು. ಮಳೆ ಬರುವಾಗ ಸಿದ್ದಪ್ಪ ಅಲಗಾಪುರದ ಶ್ಯಾಗ್ಯ ರಸ್ತೆಯಲ್ಲಿರುವ ಕೆಂಜಗದಬೋರೆ ಬಳಿ ಹುಣಸೆ ಮರದ ಕೆಳಗೆ ನಿಂತಿದ್ದರು. ಆಗ ಸಿಡಿಲು ಬಡಿದು ಮೃತಪಟ್ಟರು.

ಎಚ್.ಡಿ.ಕೋಟೆ : ತಾಲ್ಲೂಕಿನ ಗುಜ್ಜಪ್ಪನಹುಂಡಿಯಲ್ಲಿ ತಮ್ಮಯ್ಯಣ್ಣ ಎಂಬುವವರ ಮಗಳು ಪುಟ್ಟಮ್ಮ (28) ಹೊಲದಲ್ಲಿ ಕೆಲಸ ಮಾಡಿ ಮನೆಗೆ ಮರಳುವಾಗ ಮಳೆಯಿಂದ ರಕ್ಷಣೆಗಾಗಿ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಮೃತರಾದರು.

ಬೆಳ್ತಂಗಡಿ: ಭಾನುವಾರ ಮಧ್ಯಾಹ್ನ ತಾಲ್ಲೂಕಿನ ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಕೋಡಿ ಗ್ರಾಮದಲ್ಲಿ ಬೆದ್ರಡ್ಕ ನಿವಾಸಿ ಮಹಮ್ಮದ್ (18) ಎಂಬ ಯುವಕ ಮನೆ ಬಳಿ ತೆಂಗಿನಮರದ ಬುಡದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲಿಗೆ ಬಲಿಯಾಗಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+