ಕುಲಸಚಿವ ಬಿಸಿ ಮೈಲಾರಪ್ಪ ಮೇಲೆ ಎಫ್ ಐಆರ್

ಶನಿವಾರ ಬೆಂಗಳೂರು ವಿಶ್ವ ವಿದ್ಯಾಲಯದ ಜಾಗ ಒತ್ತುವರಿ ತೆರವು ಸಂದರ್ಭದಲ್ಲಿ ಪೊಲೀಸರ ಮೇಲೆ ದಬಾಯಿಸಿ ನಿಂದಿಸಿದ ಕುಲಸಚಿವ(ಆಡಳಿತ) ಮೈಲಾರಪ್ಪ ವಿರುದ್ಧ ಜೀವ ಬೆದರಿಕೆ ಸೇರಿದಂತೆ ಐಪಿಸಿ 504, 353, 183 ದಂಡ ಸಂಹಿತೆ ಅನ್ವಯ ಎಫ್‌ಐಆರ್ ದಾಖಲಾಗಿದೆ.
ಜ್ಞಾನಭಾರತಿ ಸಬ್ ಇನ್ಸ್‌ಪೆಕ್ಟರ್ ಸಿದ್ಧಲಿಂಗಪ್ಪ ಅವರು ನೀಡಿದ ದೂರಿನ ಅನ್ವಯ ಇಂದು ಎಫ್‌ಐಆರ್ ದಾಖಲಿಸಲಾಗಿದೆ. ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣಗಳು ಸೇರಿದಂತೆ ಹಲವು ನಿಯಮದಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಕುರಿತಂತೆ ಈಗಾಗಲೇ ಡಿಸಿಪಿ ಸಿದ್ಧರಾಮಪ್ಪ ಅವರು ಮಾಹಿತಿ ಪಡೆದಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
ಸಾರ್ವಜನಿಕರ ಎದುರೇ ಸಬ್‌ಇನ್ಸ್‌ಪೆಕ್ಟರ್ ಹಾಗೂ ಕಾನ್ಸ್‌ಟೆಬಲ್‌ಗಳನ್ನು ಬೈದಿದ್ದಲ್ಲದೆ ಧಮಕಿ ಹಾಕಿದ್ದು, ಸಾರ್ವಜನಿಕ ವಲಯದಲ್ಲಿ ಮೈಲಾರಪ್ಪ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಮೈಲಾರಪ್ಪ ಆಕ್ರೋಶ: ಇದೇ ವೇಳೆ ಸಾತ್ವಿಕ ಸಿಟ್ಟಿನಿಂದ ಈ ಮಾತುಗಳನ್ನು ಆಡಿದ್ದೇನೆ ಹೊರತು ಯಾವುದೇ ಉದ್ದೇಶವಿರಲಿಲ್ಲ ಎಂದು ಮೈಲಾರಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ವಿವಿಯ ಆಸ್ತಿಯನ್ನು ಪ್ರಭಾವಿ ವ್ಯಕ್ತಿಗಳು ಆಕ್ರಮಿಸಿಕೊಂಡಿದ್ದು, ಇದನ್ನು ತೆರವುಗೊಳಿಸಲು ನಾನು ಸಂಕಲ್ಪತೊಟ್ಟಿದ್ದೇನೆ. ಎಂತಹ ಪರಿಸ್ಥಿತಿ ಎದುರಾದರೂ ಎದೆಗುಂದದೆ ವಿವಿಯ ಘನತೆ, ಚಾರಿತ್ರ್ಯವನ್ನು ಹಾಗೂ ನೆಲವನ್ನು ಉಳಿಸುತ್ತೇನೆ ಎಂದಿದ್ದಾರೆ.
ತೆರವು ಸಂದರ್ಭದಲ್ಲಿ ಕೆಲ ಗುಂಪು ನನ್ನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದರೂ ಆದರೂ ನಾನು ಎದೆಗುಂದಲಿಲ್ಲ. ಪೊಲೀಸರು ತಡವಾಗಿ ಬಂದಿದ್ದರಿಂದ ನಾನು ಸಿಟ್ಟಾದೆ ಅಷ್ಟೇ. ಇದರಲ್ಲಿ ಬೇರೆ ಯಾವುದೇ ಅರ್ಥ ಕಲ್ಪಿಸುವುದು ಬೇಡ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
1974ರಲ್ಲಿ ಸ್ಥಾಪನೆಯಾದಾಗ ವಿವಿ ಬಳಿ 1319 ಎಕರೆ ಆಸ್ತಿ ಇತ್ತು ಈಗ 280 ಎಕರೆ ಕಬಳಿಕೆಯಾಗಿದೆ. ಒತ್ತುವರಿ ಆರೋಪ ಹೊತ್ತಿರುವ ಕನ್ಯಾಕುಮಾರಿ ಶಿಕ್ಷಣ ಸಂಸ್ಥೆ ವಿರುದ್ಧ ಮೈಲಾರಪ್ಪ ಕಿಡಿಕಾರಿದ್ದಾರೆ. ಸ್ವಾಧೀನಪಡಿಸಿಕೊಂದ ಪ್ರದೇಶ ಸುಮಾರು 15 ಕೋಟಿ ರು ಬೆಲೆ ಬಾಳುತ್ತದೆ ಎಂದು ತಿಳಿದು ಬಂದಿದೆ.












Click it and Unblock the Notifications