ಒಳಸಂಚಿನ ಬಲಿಪಶು : ಬಿಎಸ್‌ವೈ ಮತ್ತೆ ಅಳಲು

ಹೀಗೆ ಅಳಲನ್ನು ತೋಡಿಕೊಂಡಿರುವುದು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ, ಅಖಿಲ ಭಾರತ ವೀರಶೈವ ಮಹಾಸಭಾದ ನೂತನ ಅಧ್ಯಕ್ಷ, ಕಾಂಗ್ರೆಸ್ಸಿನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಎದುರಿನಲ್ಲಿ. ಸೋಮವಾರ ನಡೆದ ಶಿವಶಂಕರಪ್ಪ ಅವರ ಅಭಿನಂದನಾ ಸಭೆಯಲ್ಲಿ ಬಿಜೆಪಿ ಪಕ್ಷದ ನಾಯಕರನ್ನೇ ಯಡಿಯೂರಪ್ಪ ವಾಚಾಮಗೋಚರವಾಗಿ ಟೀಕಿಸಿದ್ದಾರೆ.
ಕಾವೇರಿಗಾಗಿ ಮೌರ್ಯ ವೃತ್ತದಲ್ಲಿ ಹೋರಾಟ ನಡೆಸಿ ಸುಸ್ತಾಗಿದ್ದ ಯಡಿಯೂರಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದಲೇ ಶಿವಶಂಕರಪ್ಪ ಅಭಿನಂದನಾ ಸಮಾರಂಭಕ್ಕೆ ದೌಡಾಯಿಸಿದ ಅವರು, ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ್ ಅವರು ಅಂದು ಕಾಂಗ್ರೆಸ್ಸಿನಲ್ಲಿ ಎದುರಿಸಿದ ಹೀನಾಯ ಸ್ಥಿತಿಯನ್ನು ನಾನು ಕೂಡ ಬಿಜೆಪಿಯಲ್ಲಿ ಎದುರಿಸುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ವೀರೇಂದ್ರ ಪಾಟೀಲ್ ಕೂಡ ಕಾಂಗ್ರೆಸ್ಸಿನಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಅವರನ್ನು ತೊಲಗಿಸಲು ಕೂಡ ಸಂಚಿಗೆ ಅವರು ಬಲಿಪಶುವಾಗಬೇಕಾಯಿತು. ಈಗ ಸಂಚು ಹೂಡಿ ನನ್ನನ್ನು ಕೂಡ ರಾಜಕೀಯವಾಗಿ ಮುಗಿಸಿಹಾಕುವ ಹುನ್ನಾನ ನಮ್ಮ ಪಕ್ಷದವರಿಂದಲೇ ನಡೆಸಲಾಗುತ್ತಿದೆ. ಜೊತೆಗೆ ವೀರಶೈವರನ್ನು ಇಬ್ಭಾಗಿಸಲು ಕೂಡ ತಂತ್ರ ಹೂಡುತ್ತಿದ್ದಾರೆ" ಎಂದು ಹೇಳಿ ಯಡಿಯೂರಪ್ಪ ಕಾಂಗ್ರೆಸ್ಸಿಗರ ಮತ್ತು ವೀರಶೈವರ ಅನುಕಂಪ ಗಳಿಸಲು ಯತ್ನಿಸಿದರು.
"ಆದರೆ, ನಾನು ಯಾವುದೇ ಪಕ್ಷ ಸೇರಲು ಅಥವಾ ಹೊಸ ಪಕ್ಷ ರಚಿಸಲೂ ಯತ್ನ ನಡೆಸಿಲ್ಲ. ಅಂದು ವೀರೇಂದ್ರ ಪಾಟೀಲ್ ಅವರ ಹಿಂದೆ ಯಾವ ಶಾಸಕನೂ ಇರಲಿಲ್ಲ. ಆದರೆ, ನಾನು ಅಧಿಕಾರ ಕಳೆದುಕೊಂಡು ಒಂದು ವರ್ಷ ಗತಿಸಿದರೂ ಇಂದು ನನ್ನ ಬೆಂಬಲಕ್ಕೆ 60ಕ್ಕೂ ಹೆಚ್ಚು ಶಾಸಕರಿದ್ದಾರೆ" ಎಂದು ಹೇಳಿ ಬಿಜೆಪಿ ಹೈಕಮಾಂಡಿಗೆ ಯಡಿಯೂರಪ್ಪ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಲಿಂಗಾಯತ ಸಮುದಾಯದ ಅಗ್ರ ನಾಯಕನೆಂದೇ ಬಿಂಬಿತರಾಗಿರುವ ಯಡಿಯೂರಪ್ಪ ಅವರ ಈ ಮಾತುಗಳನ್ನು ವೀರಶೈವ ಮಹಾಸಭಾ ಹೃತ್ಪೂರ್ವಕವಾಗಿ ಸ್ವಾಗತಿಸಿದೆ. ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರು, ಯಡಿಯೂಪ್ಪ ಅವರು ಲಿಂಗಾಯತ ಸಮುದಾಯದ ಕಮಾಂಡರ್ ಎಂದು ಹೊಗಳಿದರಲ್ಲದೆ, ಮುಂದೆ ಅವರು ಯಾವುದೇ ಪಕ್ಷ ಸೇರಲಿ ಅಥವಾ ಹೊಸ ಪಕ್ಷವನ್ನೇ ರಚಿಸಲಿ ವೀರಶೈವರು ಅವರ ಬೆಂಬಲಕ್ಕೆ ಇರುತ್ತಾರೆ ಎಂದು ಬೆನ್ನು ತಟ್ಟಿದರು.
ಬಿಜೆಪಿಯ ನಾಯಕರನ್ನು ಟೀಕಿಸುವ ಯಡಿಯೂರಪ್ಪನವರ ಸರಣಿ ಮುಂದುವರಿದಿದ್ದರೂ ಬಿಜೆಪಿ ಹೈಕಮಾಂಡ್ ಮಾತ್ರ ಇನ್ನೂ ಅವರನ್ನು ಓಲೈಸುವ ಕಾಯಕದಲ್ಲಿ ತೊಡಗಿದೆ. ಬಿಜೆಪಿಯ ಅನಂತ್ ಕುಮಾರ್, ಕೆ.ಎಸ್. ಈಶ್ವರಪ್ಪ, ನಿತಿನ್ ಗಡ್ಕರಿ ಮುಂತಾದವರನ್ನು ಸೆ.28ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಡಿ.25ಕ್ಕೆ ಏನಾಗುತ್ತದೋ ನೋಡಿ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಯಡಿಯೂರಪ್ಪ ಬರೀ ಮಾತಿನ ಮಲ್ಲ, ಅವರಿಂದ ಪಕ್ಷ ಬಿಡುವುದು ಸಾಧ್ಯವಿಲ್ಲ ಎಂದು ಸದಾನಂದ ಗೌಡ ವ್ಯಂಗ್ಯವಾಡಿದ್ದರು.












Click it and Unblock the Notifications