ಮಾತಿನಂತೆ ನಡ್ಕೊಳ್ಳಿ, ಆನೆ ಮೇಲೆ ಮೆರವಣಿಗೆ ಮಾಡಿಸ್ತೀವಿ

ಹಾಗಾಗಿ ರಾಜ್ಯ ಸರಕಾರದ ಈ ನಿರ್ಧಾರ ನಮಗೆ ಸಮ್ಮತಿಯಿಲ್ಲ, ನಮ್ಮ ಪ್ರತಿಭಟನೆ ನಾವು ಮುಂದುವರಿಸುತ್ತೇವೆ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಹೇಳಿದ್ದಾರೆ.
ರಾಜ್ಯದ ಶಾಸಕರು, ಸಂಸದರು, ಕೇಂದ್ರದ ರಾಜ್ಯದ ಸಚಿವರುಗಳು ರಾಜೀನಾಮೆ ನೀಡಿ ಬರಲಿ. ರಾಜ್ಯದ ಜನರ ಹಿತಾಶಕ್ತಿಯ ಬಗ್ಗೆ ಇವರಿಗೆ ಕಾಳಜಿ ಇದ್ದರೆ ಜನರ ಕೂಗಿಗೆ ಒಗೂಡಲಿ ಎಂದು ಮಾದೇಗೌಡ ಹೇಳಿದ್ದಾರೆ.
ಶಾಂತಿಯುತ, ಕಾನೂನು ಬದ್ದ ಹೋರಾಟಕ್ಕೆ ಇನ್ನು ಬೆಲೆ ಸಿಗುವುದಿಲ್ಲ. ರೈತರು ದಂಗೆ ಎದ್ದರೆ ಸರಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ನಮ್ಮ ಹೋರಾಟದ ಬಿಸಿ ತಟ್ಟುತ್ತದೆ. ಇದರಿಂದ ದೈನಂದಿನ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಅದಕ್ಕೆ ನಾವು ಹೊಣೆಗಾರರಲ್ಲ ಎಂದು ಮಾದೇಗೌಡ ಎಚ್ಚರಿಸಿದ್ದಾರೆ.
ಆದರೂ ಸರಕಾರದ ಈ ನಡೆಯನ್ನು ನಾವು ಕಾದು ನೋಡುತ್ತೇವೆ. ಒಂದು ವೇಳೆ ಸರಕಾರ ತನ್ನ ಮಾತಿಗೆ ಬದ್ದವಾಗಿ ತಮಿಳುನಾಡಿಗೆ ಇಂದಿನಿಂದ ನೀರ ಬಿಡದಿದ್ದಲ್ಲಿ ನಾವು ನಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಮಾದೇಗೌಡ ಹೇಳಿದ್ದಾರೆ.
ಈ ಮಧ್ಯೆ, ಸಿಎಂ ಜಗದೀಶ್ ಶೆಟ್ಟರ್ ಮಾದೇಗೌಡರ ಬಳಿ ದೂರವಾಣಿ ಮೂಲಕ ಮಾತುಕತೆ ನಡೆಸಿದ ವರದಿಯಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಂಡರೆ ನಿಮ್ಮನ್ನು ಆನೆ ಮೇಲೆ ಕೂರಿಸಿ ಮೆರವಣಿಗೆ ಮಾಡಿಸ್ತೀವಿ ಎಂದು ಮಾದೇಗೌಡ ಶೆಟ್ಟರ್ ಅವರಿಗೆ ದೂರವಾಣಿ ಮೂಲಕ ಹೇಳಿದ್ದಾರೆ.












Click it and Unblock the Notifications