ಮಿಲಿಟರಿ ಬಳಸಿದರೆ ನಮ್ಮ ಹೆಣ ಬೀಳುತ್ತದೆ: ವಾಟಾಳ್

ಶಿರ್ಕೆ ಕಂಪನಿ ಕಟ್ಟಿರುವ ಬೆಳಗಾವಿಯ ಹಲಗಾ ಬಸ್ತವಾಡಿಯಲ್ಲಿರುವ ಸುವರ್ಣ ಸೌಧ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಬೇಕು. ಮೊದಲು ಕಾವೇರಿ ವಿವಾದ ಬಗೆಹರಿಸಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಸೋಮವಾರ(ಅ.8) ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಿವಾಸ ಮುಂದೆ ಕನ್ನಡ ಒಕ್ಕೂಟಗಳ ವತಿಯಿಂದ ಹಗಲಿರುಳು ಧರಣಿ ಕೈಗೊಳ್ಳಲಾಗಿದೆ. ಇಂದು ರಾತ್ರಿ ಏನಾದರೂ ನೀರು ಬಿಟ್ಟರೆ ಶೆಟ್ಟರ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ವಾಟಾಳ್ ಎಚ್ಚರಿಸಿದ್ದಾರೆ.
ಮಿಲಿಟರಿಗೂ ಜಗ್ಗುವುದಿಲ್ಲ: ಕಾವೇರಿ ಪರ ದನಿ ಎತ್ತುವವರ ವಿರುದ್ಧ ಪೊಲೀಸ್ ಬಲ ಬಳಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ. ಮಿಲಿಟರಿ ಬಳಸಿ ನೀರು ಬಿಡಲು ಯತ್ನಿಸಿದರೆ ಮೊದಲು ನಮ್ಮ ಹೆಣಗಳನ್ನು ದಾಟಿ ಮುಂದುವರೆಯಬೇಕಾಗುತ್ತದೆ. ಕಾವೇರಿಗಾಗಿ ನಮ್ಮ ಹೋರಾಟ ದಮನಗೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು.
ರೈಲು ತಡೆ: ಅಕ್ಟೋಬರ್ 15 ರಂದು ರೈಲು ತಡೆ, ರಾಷ್ಟ್ರೀಯ ಹೆದ್ದಾರಿ ತಡೆಗಳನ್ನು ಹಮ್ಮಿಕೊಳ್ಳುವ ಮೂಲಕ ಹೋರಾಟವನ್ನು ತೀವ್ರಗೊಳಿಸಲಾಗುತ್ತದೆ. ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ವಾಟಾಳ್ ತಿಳಿಸಿದರು.
ಕಳೆದ 50 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ. ಸುಮಾರು 2 ಸಾವಿರ ಬಾರಿ ಬಂಧನಕ್ಕೆ ಒಳಗಾಗಿದ್ದೇನೆ. ಶಾಂತಿಯುತ ಹೋರಾಟಕ್ಕೂ ಅಡ್ಡಿ ಪಡಿಸುವ ಮೂಲಕ ಸರ್ಕಾರ ಜನವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ವಾಟಾಳ್ ಟೀಕಿಸಿದರು.












Click it and Unblock the Notifications