ಟೀಕಿಸಿದವನ ಅಟ್ಟಾಡಿಸಿ ಹೊಡೆದ ಬಿಎಸ್‌ವೈ ಬೆಂಬಲಿಗರು

ದಂಡಿಯಾಗಿರುವ ತೋಳಗಳ ನಡುವೆ ಕುರಿ ಹೊಕ್ಕಂತಲ್ಲವೆ? ಯಡಿಯೂರಪ್ಪನವರು ಇದ್ದಲ್ಲಿಯೇ ಹೋಗಿ ಅವರ ವಿರುದ್ಧ ಧಿಕ್ಕಾರ ಕೂಗಿದ ವ್ಯಕ್ತಿಯೊಬ್ಬನನ್ನು ಯಡಿಯೂರಪ್ಪ ಬೆಂಬಲಿಗರು ಅಟ್ಟಾಡಿಸಿಕೊಂಡು, ಬಾಯಲ್ಲಿ ರಕ್ತ ಚಿಮ್ಮುವಂತೆ ಹೊಡೆದಿದ್ದಾರೆ. ಆತ ಪರಿಪರಿಯಾಗಿ ಬೇಡಿಕೊಂಡರೂ ಬಿಎಸ್‌ವೈ ಬೆಂಬಲಿಗರು ಆತನನ್ನು ಬಿಟ್ಟಿಲ್ಲ.
ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಸರಕಾರ, ಆಗದು ಎಂದು ಕೈಕಟ್ಟಿ ಕುಳಿತಿರುವ ರಾಜ್ಯದ ಸಂಸದರು, ಪ್ರಮುಖವಾಗಿ ಸಂಸದ ಅನಂತ್ ಕುಮಾರ್ ಅವರನ್ನು ವಾಚಾಮಗೋಚರವಾಗಿ ಟೀಕಿಸುತ್ತಿರುವ ಯಡಿಯೂರಪ್ಪನವರು ತಮ್ಮ ಬಿಜೆಪಿ ಪಕ್ಷದ ನಾಯಕರನ್ನೂ ಬಿಡದಿರುವುದು ಈ ವ್ಯಕ್ತಿಗೆ ಸರಿ ಬಂದಿಲ್ಲ. ಕನ್ನಡ ಗಡಿ ಹಿತರಕ್ಷಣಾ ಸಮಿತಿಯ ಸದಸ್ಯ ಎಂದು ಹೇಳಲಾಗಿರುವ ಈ ವ್ಯಕ್ತಿ ಯಡಿಯೂರಪ್ಪ ಮುಂದೆಯೇ ತಮ್ಮ ವಾಗ್ದಾಳಿ ಆರಂಭಿಸಿದ್ದಾನೆ.
"ಯಡಿಯೂರಪ್ಪನವರು ಕಾವೇರಿ ಹೋರಾಟದ ಕಾವಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅವರಿಗೆ ತಮ್ಮ ಪಕ್ಷದ ಸದಸ್ಯರ ಬಗ್ಗೆಯೇ ಗೌರವವಿಲ್ಲ. ಜಗದೀಶ್ ಶೆಟ್ಟರ್ ಅವರೊಂದಿಗೆ ಮಾತನಾಡಿ ಈ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಅವರಿಗೆ ಬೇಕಾಗಿರುವುದು ವೋಟ್ ಹೊರತು ಮತ್ತೇನಲ್ಲ" ಎಂದು ವಾಗ್ದಾಳಿ ಮಾಡುತ್ತಿದ್ದಂತೆ ಯಡಿಯೂರಪ್ಪ ಬೆಂಬಲಿಗರು ಬೆನ್ನುಹತ್ತಿದ್ದಾರೆ.
ಇಷ್ಟೆಲ್ಲ ಹೇಳಿ ಆತ ಓಟ ಕಿತ್ತರೂ ಅವನನ್ನು ಬಿಡದೆ ಅಂಗಿ ಹಿಡಿದು ಎಳೆದಾಡಿ ಮನಬಂದಂತೆ ಯಡಿಯೂರಪ್ಪ ಬೆಂಬಲಿಗರು ಥಳಿಸಿದ್ದಾರೆ. ಆತ ಕ್ಷಮೆ ಕೇಳಿದರೂ ಸಿಟ್ಟಿಗೆದ್ದಿದ್ದ ಬೆಂಬಲಿಗರು ಬಿಟ್ಟಿಲ್ಲ. ಕೊನೆಗೆ ಪೊಲೀಸರೇ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಯಿತು. ಆತನೊಂದಿಗಿದ್ದ ಇನ್ನೂ ಕೆಲವರಿಗೂ ಧರ್ಮದೇಟುಗಳು ಬಿದ್ದಿವೆ.
ಯಡಿಯೂರಪ್ಪ ಪಾದಯಾತ್ರೆ ಕ್ಯಾನ್ಸಲ್ : ಕಾವೇರಿ ನೀರನ್ನು ಕೃಷ್ಣರಾಜ ಅಣೆಕಟ್ಟೆಯಿಂದ ತಮಿಳುನಾಡಿಗೆ ಬಿಡುವುದನ್ನು ನಿಲ್ಲಿಸುವವರೆಗೂ ತಮ್ಮ ನಿರಶನ ಬೆಂಗಳೂರಿನಲ್ಲೇ ಮುಂದುವರಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಇದಕ್ಕೂ ಮೊದಲು ಅವರು ಬೆಂಗಳೂರಿನಿಂದ ಮಂಡ್ಯದವರೆಗೆ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ಮಾಡುವ ಯೋಜನೆ ಹಾಕಿಕೊಂಡಿದ್ದರು. ಇನ್ನೂ ಮೂರು ದಿನ ಇಲ್ಲೇ ಮುಷ್ಕರ ಮುಂದುವರಿಸಲು ಅವರು ನಿಶ್ಚಯಿಸಿದ್ದಾರೆ.












Click it and Unblock the Notifications