ಕೇಂದ್ರ ಅಧ್ಯಯನ ತಂಡಕ್ಕೆ ಕಾವೇರಿದ ಪ್ರತಿಭಟನೆ ಸ್ವಾಗತ

ಈ ಮಧ್ಯೆ ಕೇಂದ್ರ ಪರಿಶೀಲನಾ ತಂಡವೊಂದು ಕಾವೇರಿ ಕಣಿವೆಯಲ್ಲಿನ ಪರಿಸ್ಥಿತಿ ಅಧ್ಯಯನ ಮಾಡಲು ಕರ್ನಾಟಕಕ್ಕೆ ಬಂದಿಳಿದಿದೆ. ಕಾವೇರಿ ಕಣಿವೆಯ ಉದ್ದಕ್ಕೂ ನೀರಿನ ಪರಿಸ್ಥಿತಿ ಬದಲು ಪ್ರತಿಭಟನೆಗಳ ದರುಶನವಾಗಲಿದೆ (ಹೆಲಿಕಾಪ್ಟರ್ ಮೂಲಕ). ಅದರೊಂದಿಗೆ ಕರ್ನಾಟಕದ ಮಂದಿ ಕಾವೇರಿ ನೀರಿಗಾಗಿ ಎಷ್ಟೊಂದು ತಹತಹಿಸುತ್ತಿದ್ದಾರೆ ಎಂಬುದು ತಂಡಕ್ಕೆ ಮನದಟ್ಟಾಗಿ ಕರ್ನಾಟಕಕ್ಕೆ ಅನ್ಯಾವಾಗದಂತೆ ನ್ಯಾಯಸಮಮ್ಮತ ವರದಿ ನೀಡುವಂತಾದರೆ ನಮ್ಮೀ ಪ್ರತಿಭಟನೆ/ಬಂದ್ ಸಾರ್ಥಕವಾದೀತು. ಹಾಗಾಗಲೆಂದು ಆಶಿಸೋಣ.
ಮುಖ್ಯವಾಗಿ ಬೆಂಗಳೂರಿಗರನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿ ಕರವೇ ಇಂದು ಕರೆ ನೀಡಿರುವ ಪ್ರತಿಭಟನೆಯ ಕಾವು ತೀವ್ರತೆ ಪಡೆದುಕೊಳ್ಳುತ್ತಿದೆ. ಕಾವೇರಿ ನೀರಿಗಾಗಿ ಪಕ್ಷಾತೀತ ಹೋರಾಟ ನಡೆದಿರುವುದರಿಂದ ಖುದ್ದು ಆಟಳಿತಾರೂಢ ಬಿಜೆಪಿ ಸರಕಾರವೂ ಪ್ರತಿಭಟನೆ/ ಬಂದ್ ಗೆ ಮಣೆ ಹಾಕಿದೆ.
ಮುಖ್ಯವಾಗಿ ಬಿಎಂಟಿಎಸ್ ಬಸ್ಸುಗಳು ಎಂದಿನಂತೆ ಶುಕ್ರವಾರ ಬೆಳಗ್ಗೆಯೂ ಸಂಚರಿಸುತ್ತಿದೆಯಾದರೂ ಪ್ರಯಾಣಿಕರೇ ಕಾಣಿಸುತ್ತಿಲ್ಲ. ಅದಾಗಲೇ ಜನ ಇಂದು, ನಾಳೆ ಬಂದ್ ಭಾನುವಾರ ಎಂದಿನಂತೆ ರಜೆ. ಹಾಗಾಗಿ ಒಟ್ಟು ಮೂರು ದಿನದ ರಜೆಗೆ ಮೈಮನ ಒಪ್ಪಿಸಿಕೊಂಡು ಮನೆಗಳಲ್ಲೇ ಉಳಿದಿರುವುದರಿಂದ ರಸ್ತೆಗಳು ಈಗಾಗಲೇ ಬಿಕೋ ಎನ್ನತೊಡಗಿವೆ.
ಅನಿವಾರ್ಯ ಕೆಲಸಗಳು, ಕಚೇರಿಗಳು ಎನ್ನುವವರು ಮಾತ್ರ ಬಸ್ ಹಿಡಿದು ಗುರಿ ತಲುಪುತ್ತಿದ್ದಾರೆ. ಇನ್ನು ಸೂರ್ಯ ನೆತ್ತಿ ಮೇಲೆ ಬರುವ ವೇಳೆಗೆ ಬೆಂಗಳೂರಿನ ಮಧ್ಯ ಭಾಗದಲ್ಲಿ ಕಾವೇರಿ ಹೋರಾಟದ ಕಾವು ತೀವ್ರತೆ ಪಡೆಯಲಿದೆ. ಇದರಿಂದ ಕಾವೇರಿ ಕೊಳ್ಳದ ಸುಮಾರು 25 ಸಾವಿರ ರೈತರು ಅದಾಗಲೇ ಬೆಂಗಳೂರು ತಲುಪಿಕೊಂಡಿದ್ದು, ಸರಕಾರದ ಮೇಲೆ ಒತ್ತಡ ಹಾಕಲು ಸರ್ವರೀತಿ ಸಜ್ಜಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಆನಂದರಾವ್ ಸರ್ಕಲ್ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಇಡೀ ದಿನ ಪದ್ಮಾಸನ ಹಾಕಿಕೊಂಡು ಕುಳಿತುಕೊಳ್ಳಲಿದ್ದಾರೆ. ಹಾಗಾಗಿ, ಟ್ರಾಫಿಕ್ ಜಾಂ ಅದೂ ಇದೂ ಅಂತ ಒಂಚೂರು ತಲೆ ಬಿಸಿ ಗ್ಯಾರಂಟಿ ಎನ್ನಬಹುದು.












Click it and Unblock the Notifications