ನಗಾರಿ ಬಾರಿಸಿ ಕರವೇ ಬೃಹತ್ ಮೆರವಣಿಗೆಗೆ ಚಾಲನೆ
ಕರವೇ ಅಧ್ಯಕ್ಷ ಟಿಎ ನಾರಾಯಣ ಗೌಡ, ಕಾಂಗ್ರೆಸ್ ನಾಯಕ ಅಂಬರೀಷ್ ಜೊತೆಗೆ ಸುಮಾರು 11ಕ್ಕೂ ಅಧಿಕ ಮಠಾಧೀಶರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಸ್ಥಳೀಯ ಶಾಸಕರು, ವಿದ್ಯಾರ್ಥಿಗಳು ಹಾಗೂ ನಾಗರೀಕರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ,
ನ್ಯಾಷನಲ್ ಕಾಲೇಜು ಮೈದಾನದಿಂದ, ಸಜ್ಜನ್ ರಾವ್ ವೃತ್ತ, ಮಿನರ್ವ ವೃತ್ತ, ಜೆಸಿ ರಸ್ತೆ, ಟೌನ್ ಹಾಲ್, ಕಾಪೋರೇಷನ್ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಏಟ್ರಿಯಾ ಹೋಟೆಲ್ ಮಾರ್ಗದಲ್ಲಿ ಸಾಗಿ ಫ್ರೀಡಂ ಪಾರ್ಕ್ ತಲುಪಲಿದೆ. ಸುಮಾರು 25 ಸಾವಿರಕ್ಕೂ ಅಧಿಕ ಕರವೇ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.
ರಾಜಭವನ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಕರವೇ ಮೆರವಣಿಗೆ ರಾಜಭವನ ಬಳಿ ಹೋಗಲು ಅನುಮತಿ ನೀಡದ ಕಾರಣ ಮೆರವಣಿಗೆ ಫ್ರೀಡಂ ಪಾರ್ಕ್ ನಲ್ಲಿ ಮುಕ್ತಾಯ ಕಾಣಲಿದೆ.
ಸ್ವಾಮೀಜಿಗಳ ಹೇಳಿಕೆ: ಜಾತಿ ಮತ ಪಂಥ ತೊರೆದು ಕಾವೇರಿಗಾಗಿ ಹೋರಾಟ ಮಾಡಬೇಕಿದೆ. ಪ್ರತಿ 10 ವರ್ಷಕ್ಕೊಮ್ಮೆ ಕಾವೇರಿ ಸಮಸ್ಯೆ ತಲೆದೋರುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯತೆ ಇದೆ. ಶಾಂತಿಯುತ ಪ್ರತಿಭಟನೆ ಕೈಗೊಳ್ಳಲುವ ಮೂಲಕ ನಮ್ಮ ಶಕ್ತಿ ಪ್ರದರ್ಶಿಸಬೇಕಿದೆ ಎಂದು ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದರು.
ನಾರಾಯಣ ಗೌಡ ಹೇಳಿಕೆ: ಕರ್ನಾಟಕಕ್ಕೆ ಕುಡಿಯಲು ನೀರು ಇಲ್ಲದೆ ಬರದ ಪರಿಸ್ಥಿತಿ ಇರುವಾಗ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗೂ ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ನಮ್ಮ ಕಾರ್ಯಕರ್ತರು ಕರ್ನಾಟಕದಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಕರವೇ ಅಧ್ಯಕ್ಷ ಟಿಎ ನಾರಾಯಣ ಗೌಡ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಅಂಬರೀಷ್ ಹೇಳಿಕೆ: ನಾನು ಇಲ್ಲಿ ರಾಜಕೀಯ ಉದ್ದೇಶ ಮಾಡಲು ಬಂದಿಲ್ಲ. ಜನರ ನೋವಿಗೆ ಸ್ಪಂದಿಸುವುದು ಮುಖ್ಯ. ಕಾವೇರಿ ವಿಷಯದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿಲುವು ಖಂಡನೀಯ ಎಂದು ಅಂಬರೀಷ್ ಆಕ್ರೋಶ ವ್ಯಕ್ತಪಡಿಸಿದರು.
ಕೈ ಜೋಡಿಸಿದ ಒಕ್ಕಲಿಗರ ಸಂಘ: ಒಕ್ಕಲಿಗರ ಸಂಘ ಕೂಡಾ ಪಕ್ಷಾತೀತವಾಗಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಶುಕ್ರವಾರ ಬೆಳಗ್ಗೆ 10.30ಕ್ಕೆ ಕೆಆರ್ ರಸ್ತೆ ಒಕ್ಕಲಿಗರ ಸಂಘದ ಕಚೇರಿಯಿಂದ ಆರಂಭಗೊಂಡ ಮೆರವಣಿಗೆ ಶಾಂತಿಯುತವಾಗಿ ಸಾಗಿದೆ ಹಾಗೂ ಶನಿವಾರದ 'ಕರ್ನಾಟಕ ಬಂದ್' ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಾಗುವುದು ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ ಕೆಂಚಪ್ಪಗೌಡ ಹೇಳಿದ್ದಾರೆ.
ಕಾವೇರಿ ಕೊಳ್ಳದಲ್ಲಿ ಪ್ರತಿಭಟನೆಗೆ ತೀವ್ರಗೊಳ್ಳುತ್ತಿದ್ದಂತೆ, ಬೆಂಗಳೂರಿನ ನಾಗರೀಕರನ್ನು ಜಾಗೃತಿಗೊಳಿಸಲು ಹಾಗೂ ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಮೆರವಣಿಗೆ ಹಮ್ಮಿಕೊಂಡಿದೆ.
ಟ್ರಾಫಿಕ್ ಜಾಮ್: ಬೆಂಗಳೂರು ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ಸ್ತಬ್ಧವಾಗಿದೆ. ದೀಪಾಂಜಲಿ ನಗರದ ಬಳಿ ಕರವೇ ಕಾರ್ಯಕರ್ತರಿಗೆ ಬಿಎಚ್ ಇಎಲ್ ಸಂಸ್ಥೆ ಕಾರ್ಮಿಕರು ಕೂಡಾ ಬೆಂಬಲ ನೀಡಿದ್ದಾರೆ. ಬೆಳಗ್ಗಿನಿಂದಲೇ ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಮೆರವಣಿಗೆ ಹೋಗುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಪೊಲೀಸರು ಬದಲಿಮಾರ್ಗಗಳನ್ನು ಸೂಚಿಸಿದ್ದಾರೆ.
ಎಲ್ಲೆಡೆ ಹಳದಿ ಕೆಂಪು ಕನ್ನಡ ಬಾವುಟ ರಾರಾಜಿಸುತ್ತಿದ್ದು, ಕಾವೇರಿ ಹಾಗೂ ಕನ್ನಡ ಪರ ಘೋಷಣೆಗಳು ಕೇಳಿ ಬರುತ್ತಿದೆ. ಸ್ಥಳೀಯ ಶಾಲಾ ಕಾಲೇಜುಗಳು ಬಂದ್ ಆಗಿದ್ದು, ಎಬಿವಿಪಿ ಮುಂತಾದ ವಿದ್ಯಾರ್ಥಿ ಸಂಘಟನೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ಹೆಚ್ಚಿನ ಶಕ್ತಿ ತಂದಿದೆ.













Click it and Unblock the Notifications