ಪಾಕ್ ಐಎಸ್ಐಗೂ ರಾಜಕೀಯಕ್ಕೂ ಸಂಬಂಧವೇ ಇಲ್ಲ

ಇದೊಂದು ರೀತಿ, ಇಮಾಮ್ ಸಾಬೀಗೂ, ಗೋಕುಲಾಷ್ಠಮಿಗೂ ಏನು ಸಂಬಂಧ? ಎಂದು ಕೇಳಿದಂತಿದೆ. ಆದರೆ ಇಡೀ ಜಗತ್ತಿಗೆ ತಿಳಿದಿರುವಂತೆ ISI ಸಂಸ್ಥೆ ಪಾಕಿಸ್ತಾನದ ಅಷ್ಟೂ ರಾಜಕೀಯ ವಿದ್ಯಾಮಾನಗಳಲ್ಲಿ ಮೂಗು ತೂರಿಸುವುದು ಅನುದಿನವೂ ನಡೆದುಕೊಂಡು ಬಂದಿದೆ ಎಂಬುದು ಗಮನಾರ್ಹ. ಇನ್ನೂ ಮುಖ್ಯವಾದ ಅಂಶವೆಂದರೆ ಪಾಕ್ ISI ಸಂಸ್ಥೆಯಲ್ಲಿ ರಾಜಕೀಯ ವಿಭಾಗ ಅಂತ ಯಾವುದೂ ಇಲ್ಲ ಎಂದೂ ISI ಕೋರ್ಟಿಗೆ ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರ ನೇತೃತ್ವದ ತ್ರಿಸದಸ್ಯ ನ್ಯಾಯಪೀಠದೆದುರು ರಕ್ಷಣಾ ಸಚಿವಾಲಯದ ಪರ ಹಾಜರಾದ ಹಿರಿಯ ಸೇನಾಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ CJ ಇಫ್ತಿಕಾರ್ ಚೌಧರಿ ಅವರು 1997ರ ಜೂನ್ 26ರಂದು ಕೋರ್ಟಿಗೆ ಸಲ್ಲಿಸಿದ ದಾಖಲೆಯಲ್ಲಿ ಪಾಕ್ ISI ಸಂಸ್ಥೆಯಲ್ಲಿ ರಾಜಕೀಯ ವಿಭಾಗವೊಂದು ಕಾರ್ಯ ನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿತ್ತು ಎಂದು ಹೇಳಿದರು.
ಈ ಬಗ್ಗೆ ಸರಿಯಾದ ಮಾಹಿತಿ ಪಡೆದು ರಕ್ಷಣಾ ಕಾರ್ಯದರ್ಶಿಯ ಗಮನಕ್ಕೆ ತಂದು ಸರಿಯಾದ ಮಾಹಿತಿ ಒದಗಿಸುವಂತೆ CJ ಇಫ್ತಿಕಾರ್ ಚೌಧರಿ ಸದರಿ ಅಧಿಕಾರಿಗೆ ಸೂಚಿಸಿದರು. ಇದೇ ವೇಳೆ, ಒಳಾಡಳಿತ ಸಚಿವಾಲಯಗಳು ಮತ್ತು ರಕ್ಷಣಾ ಕಾರ್ಯದರ್ಶಿಗಳೂ ಕೋರ್ಟಿಗೆ ಹಾಜರಾಗುವಂತೆ CJ ಇಫ್ತಿಕಾರ್ ಚೌಧರಿ ಆದೇಶ ಹೊರಡಿಸಿದರು.
ಈ ಮಧ್ಯೆ, ಪಾಕ್ ISI ಸಂಸ್ಥೆಯಲ್ಲಿ ರಾಜಕೀಯ ವಿಭಾಗ ಸ್ಥಾಪಿಸುವ ಸಂಬಂಧ ಸರಕಾರ ಅಧಿಸೂಚನೆಯೊಂದನ್ನು ಹೊರಡಿಸಿತ್ತು. ಅದೀಗ ನಾಪತ್ತೆಯಾಗಿದೆ! ಎಂದು ಕೋರ್ಟ್ ಗಮನ ಸೆಳೆಯಲಾಯಿತು.
1990ರಲ್ಲಿ ISI ಸಂಸ್ಥೆ ಪಾಕಿಸ್ತಾನದ ರಾಜಕೀಯ ಮುಖಂಡರಿಗೆ ಹಣ ಹಂಚಿಕೆ ಮಾಡಿತ್ತು ಎಂದು ವಾದಿಸಿ ಪಾಕ್ ವಾಯುಪಡೆಯ ಮಾಜಿ ಉನ್ನತಾಧಿಕಾರಿ ಖಾನ್, ಕೋರ್ಟ್ ಮೆಟ್ಟಿಲೇರಿದ್ದರು. ISI ಸಂಸ್ಥೆಯು ಆಗ್ಗೆ 140 ದಶಲಕ್ಷ ರೂಪಾಯಿ ದೇಣಿಗೆ ನೀಡಿತ್ತು.
1990ರ ಮಹಾ ಚುನಾವಣೆಯಲ್ಲಿ ಪಾಕಿಸ್ತಾನದ ಪೀಪಲ್ಸ್ ಪಾರ್ಟಿ ಜಯ ಗಳಿಸಿ, ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಇಸ್ಲಾಮಿ ಜಮೂರಿ ಇತೆಹಾದ್ ಎಂಬ ಪಕ್ಷವನ್ನು ಹುಟ್ಟುಹಾಕುವುದಕ್ಕೆ ISI ಸಂಸ್ಥೆಯ 140 ದಶಲಕ್ಷ ರೂಪಾಯಿ ದೇಣಿಗೆ ಸಂದಾಯವಾಗಿತ್ತು ಎಂದು ಖಾನ್ ಕೋರ್ಟಿನಲ್ಲಿ ದಾವೆ ಹೂಡಿದ್ದರು.












Click it and Unblock the Notifications